ADVERTISEMENT

ಹೆಲಿಕಾಪ್ಟರ್‌ ಪತನ: 7 ಬಲಿ

ಪಿಟಿಐ
Published 13 ಜನವರಿ 2018, 20:01 IST
Last Updated 13 ಜನವರಿ 2018, 20:01 IST
ಹೆಲಿಕಾಪ್ಟರ್‌ ಪತನ: 7 ಬಲಿ
ಹೆಲಿಕಾಪ್ಟರ್‌ ಪತನ: 7 ಬಲಿ   

ಮುಂಬೈ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಐವರು ಉದ್ಯೋಗಿಗಳು ಮತ್ತು ಇಬ್ಬರು ಪೈಲಟ್‌ಗಳು ಇದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಇಲ್ಲಿನ ಜುಹುವಿನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ.

ಏಳು ಮಂದಿಯೂ ಮೃತಪಟ್ಟಿದ್ದು ನಾಲ್ವರ ಮೃತದೇಹಗಳು ಸಂಜೆ ವೇಳೆಗೆ ಪತ್ತೆಯಾಗಿವೆ ಎಂದು ಕರಾವಳಿ ಕಾವಲು ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ದೌಫಿನ್‌ ಎನ್‌–3 ಕಾಪ್ಟರ್‌ ಬೆಳಿಗ್ಗೆ 10.30ಕ್ಕೆ ಜುಹೂ ಹೆಲಿಬೇಸ್‌ನಿಂದ ಹೊರಟ ಕೆಲವೇ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡಿತ್ತು. ಅದು ನಿಗದಿಯಂತೆ 11 ಗಂಟೆಗೆ ಮುಂಬೈ ಹೈನ ತೈಲಾಗಾರದಲ್ಲಿ ಇಳಿಯಬೇಕಿತ್ತು. ಆದರೆ, 10.35ರ ವೇಳೆಗೆ ವಾಯು ಸಂಚಾರ ನಿಯಂತ್ರಣದ (ಎಟಿಸಿ) ಸಂಪರ್ಕ ಕಡಿದುಕೊಂಡಿದೆ. ನಂತರ ಸಮುದ್ರ ತೀರದಲ್ಲಿ ಪತನಗೊಂಡಿದೆ.

ADVERTISEMENT

ಶೋಧ ಕಾರ್ಯಾಚರಣೆಗೆ ನೌಕಾಪಡೆಯು ತನ್ನ ರಹಸ್ಯ ಯುದ್ಧನೌಕೆಯನ್ನು ನಿಯೋಜಿಸಿದೆ. ರಕ್ಷಣಾ ವಿಮಾನ ಪಿ8 ಹಾಗೂ ಕರಾವಳಿ ಕಾವಲು ಪಡೆಯ ಹಡಗುಗಳು ಕೂಡಾ ಭಾಗಿಯಾಗಿದ್ದವು.

ಶೋಧ ಕಾರ್ಯಾಚರಣೆ ಮುಂದುವರಿದಿದೆ. ಅಪಘಾತದ ಕರಿತು ವಿಮಾನ ಅಪಘಾತ ತನಿಖಾ ತಂಡ (ಎಎಐಬಿ) ಸಮಗ್ರ ತನಿಖೆ ನಡೆಸಲಿದೆ ಎಂದು ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

ಮುಂಬೈ ಕರಾವಳಿಯಲ್ಲಿ ಒಎನ್‌ಜಿಸಿ ತನ್ನ ಪ್ರಮುಖ ತೈಲ ಮತ್ತು ಅನಿಲ ಘಟಕಗಳನ್ನು ಹೊಂದಿದೆ. ಕಂಪನಿಯ ಸಿಬ್ಬಂದಿಯನ್ನು ಕರಾವಳಿಯಿಂದ 160 ಕಿ.ಮೀ ದೂರವಿರುವ ತೈಲಾಗಾರಗಳಿಗೆ ತಲುಪಿಸುವ ಕಾರ್ಯವನ್ನು ಪವನ್‌ ಹನ್ಸ್‌ ಹೆಲಿಕಾಪ್ಟರ್‌ಗಳು ನಿತ್ಯ ಮಾಡುತ್ತಿವೆ. ಒಎನ್‌ಜಿಸಿಯ ಇತಿಹಾಸದಲ್ಲಿ ಇದು ಮೊದಲ ಅಪಘಾತವಲ್ಲ. 2003, ಆಗಸ್ಟ್‌ನಲ್ಲಿ ಮಿ–172 ಹೆಲಿಕಾಪ್ಟರ್‌ ಅಪಘಾತವಾಗಿ 27 ಸಿಬ್ಬಂದಿ ಮತ್ತು ಒಬ್ಬ ಪೈಲಟ್‌ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.