ADVERTISEMENT

ಆಧಾರ್‌: ಮುಖ ಗುರುತಿಸಿಯೂ ದೃಢೀಕರಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 20:13 IST
Last Updated 15 ಜನವರಿ 2018, 20:13 IST
ಆಧಾರ್‌: ಮುಖ ಗುರುತಿಸಿಯೂ ದೃಢೀಕರಣ
ಆಧಾರ್‌: ಮುಖ ಗುರುತಿಸಿಯೂ ದೃಢೀಕರಣ   

ನವದೆಹಲಿ: ಆಧಾರ್‌ ನೋಂದಣಿದಾರರು ವಿವಿಧ ಸೇವೆಗಳಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಸಂದರ್ಭದಲ್ಲಿ ಇನ್ನು ಮುಂದೆ ‘ಮುಖ ಗುರುತಿ
ಸುವಿಕೆ’ ತಂತ್ರಜ್ಞಾನದ ಮೂಲಕವೂ ಗುರುತು ದೃಢೀಕರಣ ಮಾಡಬಹುದು!

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಸೋಮವಾರ ಹೊಸ ವಿಧಾನವನ್ನು ಪರಿಚಯಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ.

ಈಗಾಗಲೇ ಜಾರಿಯಲ್ಲಿರುವ ಬಯೊಮೆಟ್ರಿಕ್‌ ವಿಧಾನಗಳಲ್ಲಿ (ಬೆರಳಚ್ಚು, ಕಣ್ಣಿನ ಪಾಪೆಯನ್ನು ಸ್ಕ್ಯಾನ್‌ ಮಾಡುವ) ಗುರುತು ದೃಢಪಡಿಸಲು ಸಾಧ್ಯವಾಗದಿದ್ದವರಿಗೆ ಹೊಸ ವಿಧಾನ ನೆರವಾಗಲಿದೆ.

ADVERTISEMENT

ಈಗ ಅನುಸರಿಸಲಾಗುತ್ತಿರುವ ದೃಢೀಕರಣ ವಿಧಾನಗಳ ಜೊತೆಯಲ್ಲೇಹೊಸ ವಿಧಾನವನ್ನೂ ಬಳಸಲಾಗುವುದು.

‘ಪ್ರಸ್ತುತ, ಬೆರಳಚ್ಚು ಅಳಿಸಿ ಹೋದವರು, ವೃದ್ಧರಿಗೆ ಬಯೊಮೆಟ್ರಿಕ್‌ ವಿಧಾನಗಳಲ್ಲಿ ಗುರುತು ದೃಢೀಕರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಂತಹವರಿಗೆ ಹೊಸ ವಿಧಾನ ನೆರವಾಗಲಿದೆ’ ಎಂದು ಯುಐಡಿಎಐ ಹೇಳಿದೆ.

ಬೆರಳಚ್ಚು ಮಾಸಿದವರು, ವಯಸ್ಸಾದವರ ಕಣ್ಣಿನ ಪಾಪೆ, ಕುಷ್ಠರೋಗ ಅಥವಾ ತೊನ್ನು ಹೊಂದಿರುವವರ ಗುರುತನ್ನು ಈಗಿನ ವಿಧಾನಗಳಲ್ಲಿ ದೃಢಪಡಿಸಲು ಸಾಧ್ಯವಾಗವಾದಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು.

‘ಹೊಸ ವಿಧಾನವು ದೇಶದ ಎಲ್ಲ ನಾಗರಿಕರಿಗೆ ತಮ್ಮ ಗುರುತನ್ನು ದೃಢಪಡಿಸಿಕೊಳ್ಳಲು ಹೆಚ್ಚುವರಿ ಆಯ್ಕೆಯನ್ನು ಒದಗಿಸಲಿದೆ. ಆದರೆ, ಇದರ ಮೂಲಕ ಗುರುತು ದೃಢೀಕರಿಸಿದರೂ ಈಗಾಗಲೇ ಅನುಸರಿಸಲಾಗುತ್ತಿರುವ ವಿಧಾನಗಳ ಪೈಕಿ (ಬೆರಳಚ್ಚು, ಕಣ್ಣಿನ ಪಾಪೆ ಸ್ಕ್ಯಾನ್‌ ಅಥವಾ ಒಂದು ಬಾರಿಯ ಪಾಸ್‌ವರ್ಡ್‌ ಮೂಲಕ) ಒಂದು ವಿಧಾನದಲ್ಲಾದರೂ ಗುರುತನ್ನು ದೃಢಪಡಿಸಿಕೊಳ್ಳಲೇಬೇಕು’ ಎಂದು ಯುಐಡಿಎಐ ಹೇಳಿದೆ.

ಆಧಾರ್‌ ದತ್ತಾಂಶದಲ್ಲಿ ದಾಖಲಾಗಿರುವ ನಾಗರಿಕರ ವೈಯಕ್ತಿಕ ವಿವರಗಳನ್ನು ಕಾಪಾಡುವ ಉದ್ದೇಶದಿಂದ ಆಧಾರ್‌ ನೋಂದಣಿ ಮಾಡಿಸಿಕೊಂಡವರಿಗೆ 16 ಸಂಖ್ಯೆಗಳ ಪರ್ಯಾಯ ಗುರುತಿನ ಸಂಖ್ಯೆಯನ್ನು (ವರ್ಚ್ಯುವಲ್‌ ಐಡಿ) ನೀಡುವ ವ್ಯವಸ್ಥೆ ಜಾರಿಗೆ ತರುವುದಾಗಿ ಕಳೆದ ವಾರ ಯುಐಎಡಿಐ ಘೋಷಿಸಿತ್ತು.

ಹೊಸ ವಿಧಾನ: ಒಂದು ನೋಟ

* ಯುಐಎಡಿಎ ದತ್ತಾಂಶ ಸಂಗ್ರಹದಲ್ಲಿ ಈಗಾಗಲೇ ಆಧಾರ್‌ ನೋಂದಣಿದಾರರ ಭಾವಚಿತ್ರ ಇರುವುದರಿಂದ ಚಿತ್ರಗಳನ್ನು ಹೊಸದಾಗಿ ಸೆರೆಹಿಡಿಯುವ ಅಗತ್ಯವಿಲ್ಲ

* ಕ್ಯಾಮೆರಾಗಳು ಲ್ಯಾಪ್‌ಟಾಪ್‌, ಮೊಬೈಲ್‌ಗಳಲ್ಲೂ ಸುಲಭವಾಗಿ ಲಭ್ಯವಿರುವುದರಿಂದ ವಿವಿಧ ಸಂಸ್ಥೆಗಳು ಮುಖದ ಗುರುತು ದೃಢೀಕರಣಕ್ಕಾಗಿ ಹೆಚ್ಚುವರಿ ಸಲಕರಣೆಗಳನ್ನು ಹೊಂದಬೇಕಾಗಿಲ್ಲ

* ಇದರಿಂದಾಗಿ ಜನರ ವೈಯಕ್ತಿಕ ವಿವರಗಳ ಸುರಕ್ಷತೆ ಇನ್ನಷ್ಟು ಹೆಚ್ಚಲಿದೆ–ಯುಐಡಿಎಐ

* ಪ್ರಮಾಣೀಕೃತ ಮತ್ತು ನೋಂದಾಯಿತ ಉಪಕರಣಗಳೊಂದಿಗೆ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಸಮನ್ವಯಗೊಳಿಸಲು ಬಯೊಮೆಟ್ರಿಕ್‌ ಉಪಕರಣಗಳ ಪೂರೈಕೆದಾರರೊಂದಿಗೆ ಪ್ರಾಧಿಕಾರ ಕೆಲಸ ಮಾಡಲಿದೆ

* ಅನಿವಾರ್ಯವಾದರೆ ಹೊಸ ದೃಢೀಕರಣ ವ್ಯವಸ್ಥೆಗಾಗಿ ಪ್ರತ್ಯೇಕ ಉಪಕರಣಗಳನ್ನೂ ಯುಐಎಡಿಐ ಪೂರೈಸಲಿದೆ

* ನಾಗರಿಕರ ಗುರುತು ದೃಢೀಕರಣ ಮಾಡುವ ಸಂಸ್ಥೆಗಳಿಗೆ ಮುಖ ಗುರುತಿಸುವ ತಂತ್ರಾಂಶ ಅಭಿವೃದ್ಧಿ ಕಿಟ್‌ಗಳನ್ನೂ ಪ್ರಾಧಿಕಾರ ನೀಡಲಿದೆ

* ಮಾರ್ಚ್‌ 1ರ ಒಳಗಾಗಿ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ವಿವರಗಳು ಪ್ರಕಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.