ADVERTISEMENT

ಫ್ರೆಂಚ್ ವಿದ್ವಾಂಸರಿಂದ ಭಾರತ ಸಾಹಿತ್ಯ ವಿಶ್ವಕೋಶ ರಚನೆ

ಯೋಜನೆ ಕೈಗೆತ್ತಿಕೊಂಡ ಫ್ರಾನ್ಸ್‌ನ ಎರಡು ಸಂಸ್ಥೆಗಳು

ಪಿಟಿಐ
Published 2 ಫೆಬ್ರುವರಿ 2018, 20:12 IST
Last Updated 2 ಫೆಬ್ರುವರಿ 2018, 20:12 IST
ಡಿಜೆನ್ನೆ
ಡಿಜೆನ್ನೆ   

ಕೋಲ್ಕತ್ತ : ಮೂರು ಸಾವಿರ ವರ್ಷಗಳ ಭಾರತೀಯ ಸಾಹಿತ್ಯ ಸಾಗಿಬಂದ ಹಾದಿಯನ್ನು ಕಾಲಾನುಕ್ರಮದಲ್ಲಿ ದಾಖಲಿಸುವ ಯೋಜನೆಯನ್ನು 70 ಮಂದಿ ಫ್ರೆಂಚ್ ವಿದ್ವಾಂಸರು ಕೈಗೆತ್ತಿಕೊಂಡಿದ್ದಾರೆ.

ಭಾರತದ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಕುರಿತು ಅಧ್ಯಯನ ನಡೆಸುತ್ತಿರುವ ಫ್ರಾನ್ಸ್‌ನ ಎರಡು ಸಂಸ್ಥೆಗಳು ಕೈಗೆತ್ತಿಕೊಂಡಿರುವ ಯೋಜನೆಗೆ ಫ್ರಾನ್ಸ್ ಸರ್ಕಾರ ಅನುದಾನ ಒದಗಿಸುತ್ತಿದೆ.

ಫ್ರಾನ್ಸ್‌ನ ಶಿಕ್ಷಣ ತಜ್ಞ ನಿಕೋಲಸ್ ಡಿಜೆನ್ನೆ ಅವರು ಕೊಲ್ಕೊತ್ತ ಪುಸ್ತಕ ಮೇಳದಲ್ಲಿ ಈ ವಿಷಯ ತಿಳಿಸಿದರು.

ADVERTISEMENT

‘ವಿವಿಧ ಸಾಹಿತ್ಯಗಳನ್ನು ಪ್ರತಿನಿಧಿಸುವವರ ವಿಶ್ವಕೋಶ ತಯಾರಿಸುವ ಅತಿದೊಡ್ಡ ಕೆಲಸವನ್ನು ಆರಂಭಿಸಿದ್ದೇವೆ. ಕಾಳಿದಾಸನ ಶಕುಂತಲಾದಿಂದ ಹಿಡಿದು ಅಮಿತಾವ್ ಘೋಷ್ ವರೆಗೆ ಹಾಗೂ ರವೀಂದ್ರನಾಥ್ ಟ್ಯಾಗೋರ್ ಅವರಿಂದ ಆರಂಭಿಸಿ ಆಧುನಿಕ ಬಂಗಾಳಿ ಕವಿಗಳ ಮಾಹಿತಿಯನ್ನೂ ಇದು ಒಳಗೊಂಡಿರಲಿದೆ’ ಎಂದು ಡಿಜೆನ್ನೆ ತಿಳಿಸಿದರು. 

ಈ ಪುಸ್ತಕಕ್ಕೆ ‘ಡಿಕ್ಷನರಿ ಎನ್‌ಸೈಕ್ಲೊಪೀಡಿಯಾ ಇಂಡಿಯನ್ ಲಿಟರೇಚರ್ (ಡಿಎಎಲ್‌ಐ) ಎಂದು ಹೆಸರಿಡಲಾಗುತ್ತಿದ್ದು, 2019ರ ಕೊನೆ ವೇಳೆಗೆ ಮೊದಲ ಹಂತದ ಕೆಲಸ ಮುಗಿಯಲಿದೆ ಎಂದು ಅವರು ಹೇಳಿದ್ದಾರೆ.

ಎಲ್ಲ ವಯೋಮಾನದವರ ಸಾಹಿತ್ಯ ಕೃತಿಗಳನ್ನು ಸಂಗ್ರಹಿಸಿ ಫ್ರೆಂಚ್ ಓದುಗರ ಮುಂದಿಡುವುದು ಯೋಜನೆಯ ಉದ್ದೇಶಗಳಲ್ಲೊಂದು ಎಂದು ಮತ್ತೊಬ್ಬ ಶಿಕ್ಷಣ ತಜ್ಞೆ ಕ್ಲೌಡಿನ್ ಲೆ ಬ್ಲಾಂಕ್ ಹೇಳಿದ್ದಾರೆ.

‘ಬಂಗಾಳಿ ಸೇರಿದಂತೆ ವಿವಿಧ ಭಾಷೆಗಳ ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯದ ನಡುವೆ ಸೇತುವೆಯಾಗಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಬ್ಲಾಂಕ್ ಹೇಳಿದ್ದಾರೆ.

ಡಿಜೆನ್ನೆ ಹಾಗೂ ಬ್ಲಾಂಕ್ ಅವರು ಪ್ಯಾರಿಸ್‌ನ ಸೊರ್‌ಬೊನ್ ನೌವೆಲ್ಲೆ ವಿಶ್ವವಿದ್ಯಾಲಯದಲ್ಲಿ ಭಾರತಾಧ್ಯಯನ ಶಾಸ್ತ್ರಜ್ಞರಾಗಿದ್ದಾರೆ.
***
ಅಂಕಿ–ಅಂಶ

70
ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಫ್ರೆಂಚ್ ವಿದ್ವಾಂಸರು

3000
ವರ್ಷಗಳ ಭಾರತ ಸಾಹಿತ್ಯ, ಇತಿಹಾಸ ಅಧ್ಯಯನ

2019
ಕೊನೆ ವೇಳೆಗೆ ಯೋಜನೆಯ ಮೊದಲ ಹಂತ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.