ADVERTISEMENT

ಕುಟುಂಬದ ಒಳಿತಿಗೆ ಭಾರತ ಮಾತೆ ಛಿದ್ರ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:38 IST
Last Updated 7 ಫೆಬ್ರುವರಿ 2018, 19:38 IST
ನರೇಂದ್ರ ಮೋದಿ        ಕೃಪೆ: ಪಿಟಿಐ
ನರೇಂದ್ರ ಮೋದಿ ಕೃಪೆ: ಪಿಟಿಐ   

ನವದೆಹಲಿ: ‘ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್‌ ಪಕ್ಷ ಬಿತ್ತಿದ ವಿಷಬೀಜ 70 ವರ್ಷಗಳ ನಂತರವೂ ಈ ದೇಶದ ಜನ ನರಳುವಂತೆ ಮಾಡಿದೆ. ಒಂದು ಕುಟುಂಬದ ಒಳಿತಿಗಾಗಿ ಭಾರತ ಮಾತೆಯನ್ನೇ ಛಿದ್ರಗೊಳಿಸಿದವರು ಜನರ ಆಶೋತ್ತರಗಳಿಗೆ ಸ್ಪಂದಿಸದೆ, ಸ್ವಾರ್ಥ ಸಾಧನೆಯನ್ನೇ ಮುಖ್ಯವಾಗಿಸಿಕೊಂಡರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಭಾರಿ ಘೋಷಣೆಗಳೊಂದಿಗೆ ಪ್ರತಿಭಟಿಸಿದರು. ಅದರ ನಡುವೆಯೇ, ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರಿಸುತ್ತಾ ತೀವ್ರ ವಾಗ್ದಾಳಿ ನಡೆಸಿದರು.

ಕರ್ನಾಟಕದ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ತಮ್ಮ ಭಾಷಣದ ಉದ್ದಕ್ಕೂ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ನೀತಿಗಳನ್ನು ಅಲ್ಲಿನ ಸರ್ಕಾರ ಒಪ್ಪಿಕೊಂಡಿದೆ ಎಂದರು.

ADVERTISEMENT

‘ವಸೂಲಾಗದ ಸಾಲದಿಂದಾಗಿ (ಎನ್‌ಪಿಎ) ಬ್ಯಾಂಕಿಂಗ್‌ ಕ್ಷೇತ್ರ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಎನ್‌ಪಿಎ ಹಿಂದೆ ಇದುವರೆಗೆ ದೇಶ ಆಳಿದ ಕಾಂಗ್ರೆಸ್‌ನವರ ಕೈವಾಡ ಇದೆ. ಸಾಲದ ರೂಪದಲ್ಲಿ ನೀಡಿದ್ದ ಸಾವಿರಾರು ಕೋಟಿ ಹಣ ಮರು ಪಾವತಿ ಆಗುತ್ತಿರಲಿಲ್ಲ. ಕಾಗದಲ್ಲಿಯೇ ಸಾಲ ಮರುಪಾವತಿಯ ಬಾಬತ್ತು ಚುಕ್ತಾ ಆಗುತ್ತಿತ್ತು. ಅದು ನಿಮ್ಮ ಪಾಪದ ಫಲವಾಗಿದೆ. ನಮ್ಮ ಸರ್ಕಾರ ಬಂದ ನಂತರ ಅಂಥವರಿಗೆ ಸಾಲ ನೀಡುವುದನ್ನು ನಿಲ್ಲಿಸಲಾಯಿತು’ ಎಂದೂ ಅವರು ಹೇಳಿದರು.

ಇಲ್ಲಿ ನೀವು (ಮೋದಿ) ಪ್ರಶ್ನೆಗಳಿಗೆ ಉತ್ತರಿಸಬೇಕೇ ಹೊರತು ನೀವೇ ದೇಶಕ್ಕೆ ಪ್ರಶ್ನೆಗಳನ್ನು ಕೇಳುವುದಲ್ಲ

-ರಾಹುಲ್‌ ಗಾಂಧಿ , ಕಾಂಗ್ರೆಸ್‌ ಅಧ್ಯಕ್ಷ

ನೀವು (ಕಾಂಗ್ರೆಸ್‌) ಬಿತ್ತಿದ ವಿಷ ಬೀಜದಿಂದಾಗಿ ಇಂದೂ 125 ಕೋಟಿ ಜನ ನರಳುವಂತಾಗಿದೆ
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.