ADVERTISEMENT

ವಯಸ್ಕರ ಮದುವೆಯಲ್ಲಿ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ

ಹಾದಿಯಾ ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟನೆ

ಪಿಟಿಐ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ವಯಸ್ಕರ ಮದುವೆಯಲ್ಲಿ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ
ವಯಸ್ಕರ ಮದುವೆಯಲ್ಲಿ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ   

ನವದೆಹಲಿ: ವಯಸ್ಕ ಯುವತಿಯ ಮದುವೆಯ ಆಯ್ಕೆಯಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯಕ್ಕೆ ಅವಕಾಶ ಇಲ್ಲ ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಆದರೆ, ಹೀಗೆ ಮದುವೆಯಾಗಿರುವ ಜೋಡಿಯು ಅಕ್ರಮದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬಂದರೆ ಅದರ ಬಗ್ಗೆ ತನಿಖೆ ನಡೆಸುವ ಅಧಿಕಾರ ಸರ್ಕಾರ ಅಥವಾ ತನಿಖಾ ಸಂಸ್ಥೆಗಳಿಗೆ ಇದೆ ಎಂದು ಹೇಳಿದೆ.

‘ವಯಸ್ಕರ ಮದುವೆಯ ಬಗ್ಗೆ ವಿಚಾರಣೆ ನಡೆಸಬಹುದೇ? ಇಂತಹ ವಿಚಾರಣೆ ನ್ಯಾಯಾಂಗಕ್ಕೆ ಇಷ್ಟವಿಲ್ಲದ ಕೆಲಸ. ಮಗಳು ಮದುವೆ ಆಗಿರುವುದು ಸರಿಯಿಲ್ಲ ಎಂದು ತಂದೆಯೊಬ್ಬರು ಹೇಳಬಹುದು. ಆದರೆ ಆ ಮದುವೆಯನ್ನು ಕಾನೂನಿನ ಮೂಲಕ ತಡೆಯಲು ಸಾಧ್ಯವಿಲ್ಲ. ಸಮ್ಮತಿಯಿಂದ ಮದುವೆ ಆಗಿರುವವರು ನ್ಯಾಯಾಲಯಕ್ಕೆ ಬಂದರೆ ಅವರಿಗೆ ರಕ್ಷಣೆ ಕೊಡಬೇಕಾಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ತಿಳಿಸಿದೆ.

ಕೇರಳದ ಯುವತಿ ಅಖಿಲಾ ಅಲಿಯಾಸ್‌ ಹಾದಿಯಾಳ ಬಲವಂತದ ಮತಾಂತರ ಆರೋಪ ಮತ್ತು ಶಫೀನ್‌ ಜಹಾನ್‌ ಜತೆಗಿನ ಮದುವೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಗುರುವಾರ ನಡೆಯಿತು.

ADVERTISEMENT

ಅಖಿಲಾ ತಂದೆ ಅಶೋಕನ್‌ ಪರವಾಗಿ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ವಾದಿಸಿದರು. ಸಿರಿಯಾದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆ ಐಎಸ್‌ಗೆ ಸೇರಿಸುವುದಕ್ಕಾಗಿ ಅಖಿಲಾಳನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಇಂತಹ ಕೃತ್ಯಗಳನ್ನು ಎಸಗುವ ವ್ಯವಸ್ಥಿತ ಗುಂಪು ಕೇರಳದಲ್ಲಿ ಇದೆ ಎಂದು ದಿವಾನ್‌ ಅವರು ವಾದಿಸಿದ್ದಕ್ಕೆ ನ್ಯಾಯಪೀಠ ಹೀಗೆ ಪ್ರತಿಕ್ರಿಯೆ ನೀಡಿತು.

‘ಮದುವೆ ಮತ್ತು ತನಿಖೆ ಎರಡು ಪ್ರತ್ಯೇಕ ವಿಚಾರಗಳು. ಮದುವೆಗೆ ಸಂಬಂಧಿಸಿ ತನಿಖೆ ನಡೆಸುವ ಅಗತ್ಯವೇ ಇಲ್ಲ. ಯಾವುದೇ ವಿಚಾರದ ಬಗ್ಗೆ ತನಿಖೆ ನಡೆಸಬಹುದು, ಆದರೆ ಮದುವೆಯ ಬಗ್ಗೆ ಅಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ತಾನು ಸ್ವ ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದೇನೆ, ಗಂಡ ಶಫೀನ್‌ ಜತೆಗೆ ಬದುಕಲು ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಾದಿಯಾ ಮಂಗಳವಾರ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಹಾದಿಯಾ–ಶಫೀನ್‌ ಮದುವೆಯನ್ನು ಕೇರಳ ಹೈಕೋರ್ಟ್‌ ರದ್ದುಪಡಿಸಿತ್ತು. ಬಳಿಕ ಹಾದಿಯಾರನ್ನು ಹೆತ್ತವರ ವಶಕ್ಕೆ ಒಪ್ಪಿಸಿತ್ತು. ಆದರೆ, ಅವರನ್ನು ಹೆತ್ತವರ ಸುಪರ್ದಿಯಿಂದ ನವೆಂಬರ್‌ 27ರಂದು ಸುಪ್ರೀಂ ಕೋರ್ಟ್‌ ಬಿಡಿಸಿತ್ತು. ಅರ್ಧಕ್ಕೆ ನಿಲ್ಲಿಸಲಾಗಿದ್ದ ಶಿಕ್ಷಣ ಮುಂದುವರಿಸಲು ಕಾಲೇಜಿಗೆ ಕಳುಹಿಸಿತ್ತು. ಗಂಡನ ಜತೆಗೆ ಹೋಗಲು ತಮಗೆ ಅವಕಾಶ ನೀಡಬೇಕು ಎಂದು ಹಾದಿಯಾ ಕೋರಿದ್ದರೂ ಅದನ್ನು ಮಾನ್ಯ ಮಾಡಿರಲಿಲ್ಲ.

ಯುವತಿಯರನ್ನು ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು. ಬಳಿಕ, ಪ್ರಕರಣದ ವಿಚಾರಣೆ ಆರಂಭಿಸಿದ್ದ ಸುಪ್ರೀಂ ಕೋರ್ಟ್‌, ಹಾದಿಯಾರ ಹೇಳಿಕೆ ಪಡೆದುಕೊಂಡಿತ್ತು. ಹಾದಿಯಾ ಮತ್ತು ಶಫೀನ್‌ ಮದುವೆಯ ಬಗ್ಗೆ ಎನ್‌ಐಎ ತನಿಖೆ ನಡೆಸುವಂತಿಲ್ಲ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.