ADVERTISEMENT

‘ಭಾರತ್‌ ಮಾತಾ ಕಿ ಜೈ’ ಅಂದಿದ್ದಕ್ಕೆ ಆಕ್ಷೇಪ

ಶ್ರೀನಗರದಲ್ಲಿ ಫಾರೂಕ್‌ ಅಬ್ದುಲ್ಲಾ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 20:04 IST
Last Updated 22 ಆಗಸ್ಟ್ 2018, 20:04 IST
ಶ್ರೀನಗರದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಿದ ಪ್ರತಿಭಟನಕಾರರು–ಪಿಟಿಐ ಚಿತ್ರ
ಶ್ರೀನಗರದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಿದ ಪ್ರತಿಭಟನಕಾರರು–ಪಿಟಿಐ ಚಿತ್ರ   

ಶ್ರೀನಗರ: ‘ಭಾರತ್‌ ಮಾತಾ ಕಿ ಜೈ’ ಮತ್ತು ‘ಜೈ ಹಿಂದ್‌’ ಎಂದು ಘೋಷಣೆ ಹಾಕಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಮತ್ತು ಸಂಸದ ಫಾರೂಕ್‌ ಅಬ್ದುಲ್ಲಾ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ಈದ್‌ ಪ್ರಾರ್ಥನೆ ಸಲ್ಲಿಸುವ ವೇಳೆ ಪ್ರತಿಭಟನೆ ವ್ಯಕ್ತಪಡಿಸಿದ ಪ್ರಸಂಗ ಬುಧವಾರ ನಡೆದಿದೆ.

ಆಗಸ್ಟ್‌ 20ರಂದು ನವದೆಹಲಿಯಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅಬ್ದುಲ್ಲಾ ಅವರು ಭಾವೋದ್ವೇಗದಿಂದ ಭಾಷಣ ಮಾಡಿ ಘೋಷಣೆಗಳನ್ನು ಹಾಕಿದ್ದರು.

ಇಲ್ಲಿನ ಹಜರತ್‌ಬಾಲ್‌ ಮಸೀದಿಯಲ್ಲಿ ಬುಧವಾರ ನಡೆದ ಪ್ರಾರ್ಥನೆ ಸಂದರ್ಭದಲ್ಲಿ ಅಬ್ದುಲ್ಲಾ ವಿರುದ್ಧ ನಾಗರಿಕರು ಘೋಷಣೆಗಳನ್ನು ಹಾಕಿದರು. ಇದರಿಂದ ಎದೆಗುಂದದೆ ಅವರು ಪ್ರಾರ್ಥನೆ ಮುಂದುವರಿಸಿದರು.

ADVERTISEMENT

ಕೆಲವರು ಅಬ್ದುಲ್ಲಾ ಅವರತ್ತ ಮುನ್ನುಗ್ಗಲು ಯತ್ನಿಸಿದಾಗ ಸ್ಥಳದಲ್ಲಿದ್ದವರು ಮಾನವ ಸರಪಳಿ ರಚಿಸಿದರು. ಭದ್ರತಾ ಸಿಬ್ಬಂದಿ ತಕ್ಷಣ ರಕ್ಷಿಸಿದರು.

ಪೊಲೀಸರ ಹತ್ಯೆ: ಕಾಶ್ಮೀರದಲ್ಲಿ ಹಿಂಸಾಚಾರ ಸಂಭವಿಸಿದ್ದು, ಇಬ್ಬರು ಪೊಲೀಸರು ಹಾಗೂ ಒಬ್ಬ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಉಗ್ರರು ಹತ್ಯೆಗೈದಿದ್ದಾರೆ.

ಇಬ್ಬರು ಪೊಲೀಸರ ಹತ್ಯೆ

ಶ್ರೀನಗರ (ಪಿಟಿಐ): ಬಕ್ರೀದ್‌ ಹಬ್ಬದ ದಿನದಂದು ಕಾಶ್ಮೀರದಲ್ಲಿ ಹಿಂಸಾಚಾರ ಸಂಭವಿಸಿದ್ದು, ಇಬ್ಬರು ಪೊಲೀಸರು ಹಾಗೂ ಒಬ್ಬ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಉಗ್ರರು ಹತ್ಯೆಗೈದಿದ್ದಾರೆ.

ಕುಲ್ಗಾಂನಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದ ಕಾನ್‌ಸ್ಟೆಬಲ್‌ ಫಯಾಜ್‌ ಅಹ್ಮದ್‌ ಶಾ (34) ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಜಮ್ಮುವಿನ ತಲ್ವಾರಾದಲ್ಲಿ ತರಬೇತಿ ಪಡೆಯುತ್ತಿದ್ದ ಶಾ, ರಜೆ ಇದ್ದ ಕಾರಣ ಮನೆಗೆ ಬಂದಿದ್ದರು. ಮನೆ ಸಮೀಪವೇ ಉಗ್ರರು ಈ ಕೃತ್ಯ ನಡೆಸಿದ್ದಾರೆ.

ಪುಲ್ವಾಮಾ ಜಿಲ್ಲೆಯಲ್ಲೂ ವಿಶೇಷ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಯಾಕೂಬ್‌ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.

ಕುಪ್ವಾರಾ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಶಬೀರ್‌ ಅಹ್ಮದ್‌ ಭಟ್‌ ಎಂದು ಈತನನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.