ಪಟ್ನಾ(ಬಿಹಾರ): ಹೆಲಿಕಾಪ್ಟರ್‌ನಲ್ಲಿ ಮೀನು ಊಟ ಸೇವಿಸುತ್ತಿರುವ ವಿಡಿಯೊವನ್ನು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಹಂಚಿಕೊಂಡಿರುವುದು ಇದೀಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ತೇಜಸ್ವಿ ಯಾದವ್ ಅವರು ಚೈತ್ರ ನವರಾತ್ರಿಯ ಮೊದಲನೇ ದಿನವಾದ ಏಪ್ರಿಲ್ 9ರಂದು ಈ ವಿಡಿಯೊ ಹಂಚಿಕೊಂಡಿದ್ದು, ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಾಹ್ನಿ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿರುವ ವೇಳೆ ಮೀನು ಊಟ ಸೇವಿಸಿರುವುದಾಗಿ ತಿಳಿಸಿದ್ದಾರೆ.
ವಿಡಿಯೊ ಕುರಿತಂತೆ ಬಿಹಾರದ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದು, ತೇಜಸ್ವಿ ಯಾದವ್ ಅವರನ್ನು ‘ಸೀಸನಲ್ ಸನಾತನಿ’ ಎಂದು ಕರೆದಿದ್ದಾರೆ.
‘ಶ್ರಾವಣದಲ್ಲಿ ಕುರಿ ಮಾಂಸ, ನವರಾತ್ರಿಯಲ್ಲಿ ಮೀನು ಸೇವಿಸುವುದು ಸನಾತನ ಧರ್ಮದ ತತ್ವಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿದ ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ತೇಜಸ್ವಿ ಯಾದವ್ ಅವರು ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ಸನಾತನ ಧರ್ಮದ ಆಚರಣೆಗಳನ್ನು ಹೇಗೆ ಅನುಸರಿಸಬೇಕೆಂದು ಆರ್‌ಜೆಡಿ ನಾಯಕರಿಗೆ ತಿಳಿದಿಲ್ಲ. ಜನರ ಆಹಾರ ಪದ್ಧತಿಯ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಆದರೆ ಶ್ರಾವಣ ಮಾಸದಲ್ಲಿ ಕುರಿ ಮಾಂಸ ಸೇವಿಸುವುದು, ನವರಾತ್ರಿಯಲ್ಲಿ ಮೀನು ತಿನ್ನುವುದು ನೈಜ ಸನಾತನಿಗಳ ಆಹಾರ ಪದ್ಧತಿಯಲ್ಲ’ ಎಂದು ಸಿನ್ಹಾ ಕಿಡಿಕಾರಿದರು.
ಬಿಜೆಪಿ ಅವರ ಐಕ್ಯೂ ಪರೀಕ್ಷೆ ಮಾಡಲು ವಿಡಿಯೊ ಪೋಸ್ಟ್: ತೇಜಸ್ವಿ
ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿರುವ ತೇಜಸ್ವಿ ಯಾದವ್, ಬಿಜೆಪಿ ನಾಯಕರ ಐಕ್ಯೂ ಪರೀಕ್ಷೆ (ಬುದ್ಧಿಮತ್ತೆ ಪರೀಕ್ಷೆ) ಮಾಡಲೆಂದೇ ಈ ವಿಡಿಯೊ ಪೋಸ್ಟ್ ಮಾಡಿದ್ದೇನೆ ಎಂದಿದ್ದಾರೆ.
‘ವಿಡಿಯೊದಲ್ಲಿ ಏಪ್ರಿಲ್ 8ರಂದು ಮೀನು ತಿಂದಿರುವುದಾಗಿ ಹೇಳಿದ್ದೇನೆ. ಆದರೂ ಬುದ್ಧಿಯಿಲ್ಲದೇ ಬಿಜೆಪಿಯವರು ಈ ವಿಚಾರದ ಬಗ್ಗೆ ಚರ್ಚಿಸುತ್ತಿದ್ದಾರೆ. ನಿರುದ್ಯೋಗ, ವಲಸೆ ಮತ್ತು ಬಡತನದಂತಹ ಸಮಸ್ಯೆಗಳ ಬಗ್ಗೆ ಬಿಜೆಪಿಯವರು ಎಂದಿಗೂ ಮಾತನಾಡುವುದಿಲ್ಲ. ಬಿಜೆಪಿಯ ನಿಜವಾದ ಮುಖದ ಬಗ್ಗೆ ಜನರಿಗೆ ತಿಳಿಸಲು ಇದೊಂದು ಸಣ್ಣ ಪರೀಕ್ಷೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.