ADVERTISEMENT

ಕೇರಳದಲ್ಲಿ ಮುಂದುವರಿದ ಭಾರೀ ಮಳೆ: ಹಲವಾರು ಮನೆಗಳಿಗೆ ಹಾನಿ

ಪಿಟಿಐ
Published 15 ಮೇ 2021, 10:09 IST
Last Updated 15 ಮೇ 2021, 10:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ಕೇರಳದಲ್ಲಿ ಶನಿವಾರವೂ ಭಾರೀ ಮಳೆ ಮುಂದುವರಿದಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿವೆ. ರಾಜ್ಯದ ಹಲವೆಡೆ ವಿದ್ಯುತ್‌ ಸ್ಥಗಿತವಾಗಿದೆ. ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ಬರುತ್ತಿರುವುದರಿಂದ ಕರಾವಳಿ ತೀರದ ಜನರ ಜೀವನ ಅಸ್ತವ್ಯಸ್ತವಾಗಿದೆ.

ರಾಜ್ಯದ ಅತ್ಯಂತ ಹಳೆಯ ಸಮುದ್ರ ಸೇತುವೆಗಳಲ್ಲಿ ಒಂದಾದ ವಲಿಯಪರ ಸೇತುವೆಯಲ್ಲಿ ಶುಕ್ರವಾರ ರಾತ್ರಿ ಬಿರುಕು ಕಾಣಿಸಿಕೊಂಡಿದೆ. ಜನರ ಸುರಕ್ಷತೆ ಉದ್ದೇಶದಿಂದ ಸೇತುವೆಯ ಪ್ರವೇಶದ್ವಾರವನ್ನು ಮುಚ್ಚಲಾಗಿದೆ. ಅಲ್ಲದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

‘ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ವಯನಾಡು,ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ‘ರೆಡ್‌ ಅಲರ್ಟ್‌’ ಘೋಷಿಸಿದೆ.

ADVERTISEMENT

‘ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ, ತ್ರಿಶ್ಶೂರ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮತ್ತು 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ’ ಎಂದು ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.

ಪ್ರಮುಖ ನದಿಗಳಾದ ಮೀನಾಚಿಲ್, ಅಚಂಕೋವಿಲ್ ಮತ್ತು ಮಣಿಮಾಲಾದ ನೀರಿನ ಮಟ್ಟವು ನಿರಂತರವಾಗಿ ಏರುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ

ಇಡುಕಿ ಜಿಲ್ಲೆಯ ಕಲರಕುಟ್ಟಿ, ಮಲಂಕಾರ ಮತ್ತು ಭೂತಥಂಕೆಟ್ಟು ಅಣೆಕಟ್ಟುಗಳ ಗೇಟುಗಳನ್ನು ತೆರೆಯಲಾಗಿದೆ.

ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಾಹನ ಮತ್ತು ಮನೆಗಳ ಮೇಲೆ ದೊಡ್ಡ ಮರಗಳು ಬಿದ್ದಿವೆ. ಅಲ್ಲದೆ ಹಲವಾರು ರಸ್ತೆಗಳಲ್ಲಿ ವಾಹನ ಸಂಚಾರವೂ ಅಸ್ತವ್ಯಸ್ತವಾಗಿತ್ತು. ಇಡುಕಿಯ ಮುನ್ನಾರ್-ವಟ್ಟವಾಡ ರಸ್ತೆಯಲ್ಲಿ ಕೆಲ ಸಮಯದವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸದ್ಯ ಎನ್‌ಡಿಆರ್‌ಎಫ್‌ ಸಿಬ್ಬಂದಿ, ಮರಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.