ಜೈಪುರ: ಇಲ್ಲಿ ಇದೇ 25ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) 68ನೇ ರಾಷ್ಟ್ರೀಯ ಸಮ್ಮೇಳನ ಆರಂಭವಾಗಲಿದ್ದು, ಯೋಗ ಗುರು ಬಾಬಾ ರಾಮದೇವ್ ಉದ್ಘಾಟಿಸಲಿದ್ದಾರೆ.
ಸಮ್ಮೇಳನದ ಕೊನೆಯ ದಿನವಾದ ನವೆಂಬರ್ 27ರಂದುಕೇಂದ್ರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾಗಿಯಾಗಲಿದ್ದಾರೆ ಎಂದು ಎಬಿವಿಪಿ ತಿಳಿಸಿದೆ.
‘18 ವರ್ಷಗಳ ಬಳಿಕ ಎಬಿವಿಪಿಯ ರಾಷ್ಟ್ರೀಯ ಸಮ್ಮೇಳನವು ಜೈಪುರದಲ್ಲಿ ಆಯೋಜನೆ ಆಗಿದೆ. ದೇಶದ ಎಲ್ಲೆಡೆಯಿಂದ ಎಬಿವಿಪಿಯ ಪದಾಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹುಶಿಯಾರ್ ಸಿಂಗ್ ಮೀನಾ ತಿಳಿಸಿದರು.
ನವೆಂಬರ್ 24ರಂದು ವಸ್ತುಪ್ರದರ್ಶನ ಏರ್ಪಡಿಸಲಾಗುವುದು. ಮರುದಿನರಾಮ್‌ದೇವ್ ಅವರು, ಜೆಇಸಿಆರ್‌ಸಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡುವರು. 26ರಂದು, ರಾಜ್ಯದ ಭಿನ್ನ ಸಂಸ್ಕೃತಿ ಸಾರುವಂತಹ ಮೆರವಣಿಗೆಯನ್ನು ಅಗರ್ವಾಲ್ ಕಾಲೇಜಿನಿಂದ ಆಲ್ಬರ್ಟ್ ಹಾಲ್‌ವರೆಗೂ ಕೈಗೊಳ್ಳಲಾಗುವುದು. 27ರಂದು ‘ಯಶವಂತ್ ರಾವ್ ಕೇಲ್ಕರ್ ಯುವ ಪ್ರಶಸ್ತಿ’ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಘಟನೆಯ ಪದಾಧಿಕಾರಿಗಳಲ್ಲದೇ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ. ಇಂದಿನ ಶಿಕ್ಷಣದಲ್ಲಿರುವ ಸವಾಲುಗಳ ಕುರಿತು ಮತ್ತು ದೇಶದಲ್ಲಿರುವ ಇತರ ಪ್ರಮುಖ ಸಮಸ್ಯೆಗಳ ಕುರಿತು ವಿಷಯ ತಜ್ಞರು ಚರ್ಚೆ ನಡೆಸಲಿದ್ದಾರೆ. ದೇಶಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸವಾಲುಗಳ ಕುರಿತು ಚರ್ಚಿಸಲು ಈ ಸಮ್ಮೇಳನವು ರಚನಾತ್ಮಕ ವೇದಿಕೆಯಾಗಿದೆ ಎಂದು ಮೀನಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.