ADVERTISEMENT

ಅಂತರ್ಜಾಲದಲ್ಲಿ ಸಾಹಿತ್ಯ ಕೃತಿಗಳ ಅಡಕಕ್ಕೆ ವಿದ್ವಾಂಸರು ನೆರವಾಗಲಿ

ಕನ್ನಡ ಮತ್ತು ಹೊಸ ತಲೆಮಾರು

ಗಣೇಶ ಚಂದನಶಿವ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಘನಮಠ ಶಿವಯೋಗಿ ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ಬೇಳೂರು ಸುದರ್ಶನ್‌,  ಎಸ್‌.ಆರ್‌. ವಿಜಯಶಂಕರ್‌, ಡಾ.ಶ್ರೀಕಂಠ ಕೂಡಿಗೆ, ಅರುಣಕುಮಾರ ಖನ್ನೂರ ಇದ್ದಾರೆ.
ಘನಮಠ ಶಿವಯೋಗಿ ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ಬೇಳೂರು ಸುದರ್ಶನ್‌, ಎಸ್‌.ಆರ್‌. ವಿಜಯಶಂಕರ್‌, ಡಾ.ಶ್ರೀಕಂಠ ಕೂಡಿಗೆ, ಅರುಣಕುಮಾರ ಖನ್ನೂರ ಇದ್ದಾರೆ.   

ಘನಮಠ ಶಿವಯೋಗಿ ವೇದಿಕೆ (ರಾಯಚೂರು): ‘ಕನ್ನಡ ಭಾಷೆಯನ್ನು ಅಂತರ್ಜಾಲಯದಲ್ಲಿ ಸೇರಿಸುವ ಕೆಲಸ ಜ್ಞಾನಪ್ರವಾಹದ ರೀತಿಯಲ್ಲಿ ಆಗಬೇಕು. ಇ–ಬುಕ್‌ಗಳು ಪುಸ್ತಕ ಸಂಸ್ಕೃತಿಗೆ ಮಾರಕ ಎಂಬ ಆತಂಕ ಬಿಟ್ಟು ಸಾಹಿತಿಗಳು, ವಿದ್ವಾಂಸರು ಈ ಕೆಲಸಕ್ಕೆ ಕೈಜೋಡಿಸಬೇಕು’ ಎಂಬ ಆಶಯ ಇಲ್ಲಿಯ ಘನಮಠ ಶಿವಯೋಗಿ ಸಮಾನಾಂತರ ವೇದಿಕೆಯಲ್ಲಿ ನಡೆದ ‘ಕನ್ನಡ ಮತ್ತು ಹೊಸ ತಲೆಮಾರು’ ಎಂಬ ಗೋಷ್ಠಿಯಲ್ಲಿ ವ್ಯಕ್ತವಾಯಿತು.

82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನವಾದ ಶನಿವಾರ ಈ ಗೋಷ್ಠಿಯಲ್ಲಿ ‘ಮಾತೃಭಾಷೆಯನ್ನು ಸ್ಮಾರ್ಟ್‌ ಫೋನ್‌ಗೆ ತರದೇ ಇದ್ದರೆ ಮುಂದಿನ ಪೀಳಿಗೆ ತಮ್ಮ ಮಾತೃಭಾಷೆಯನ್ನೇ ಮರೆಯುವ ಅಪಾಯ ಇದೆ’ ಎಂದು ಪ್ರತಿಪಾದಿಸಲಾಯಿತು.

‘ಕನ್ನಡ ತಂತ್ರಾಂಶದ ಬಳಕೆಯ ಸವಾಲುಗಳು’ ವಿಷಯವಾಗಿ ಮಾತನಾಡಿದ ಎಸ್‌.ಆರ್‌. ವಿಜಯಶಂಕರ್‌, ‘ಇಂಗ್ಲಿಷ್‌ ಸಾಹಿತ್ಯವನ್ನು ಅಂತರ್ಜಾಲದ ನೆರವಿನಿಂದ ಕನ್ನಡಕ್ಕೆ ಭಾಷಾಂತರಿಸುವಾಗ ಒಂದೂ ತಪ್ಪು ನುಸುಳದಂತೆ ಅಂತರ್ಜಾಲಯದಲ್ಲಿ ಕನ್ನಡ ಶಬ್ದಕೋಶ ಅಡಕ ಮಾಡಬೇಕು. ತಾಳೆಗರಿ ಸಾಹಿತ್ಯ ಮುದ್ರಣಕ್ಕೆ ಬರುವಾಗ ದೊರೆತ ಭಾಷಾ ವಿದ್ವಾಂಸರ ನೆರವು ಮುದ್ರಣ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಅಡಕಗೊಳಿಸುವ ಕೆಲಸಕ್ಕೆ ದೊರೆಯುತ್ತಿಲ್ಲ. ಸಾಹಿತಿಗಳು, ವಿದ್ವಾಂಸರು ಈ ವಿಷಯದಲ್ಲಿ ಕೈಜೋಡಿಸದೇ ಹೋದರೆ ಜ್ಞಾನ ಮತ್ತು ತಂತ್ರಾಂಶ ಬೇರೆ ಬೇರೆಯಾಗಿಯೇ ಉಳಿದುಬಿಡುತ್ತವೆ’ ಎಂದು ಎಚ್ಚರಿಸಿದರು.

ADVERTISEMENT

‘ಓದುಗರಿಗೆ ಸರಳವಾಗಿ ದೊರೆಯದ ಮಹತ್ವಪೂರ್ಣ ಕೃತಿಗಳನ್ನಾದರೂ ಡಿಜಿಟಲ್‌ ರೂಪದಲ್ಲಿ ಅಂತರ್ಜಾಲದಲ್ಲಿ ಅಳವಡಿಸುವ ಕೆಲಸವಾಗಬೇಕು’ ಎಂದರು.

‘ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು’ ಕುರಿತು ಮಾತನಾಡಿದ ಬೇಳೂರು ಸುದರ್ಶನ್‌, ‘ಪಠ್ಯರೂಪದಲ್ಲಿ ಭಾಷಾ ದತ್ತಾಂಶದ ಕೊರತೆ ಇದೆ. ದತ್ತಾಂಶದಲ್ಲಿ ನಮ್ಮ ಭಾಷೆಯ ಕೋಟ್ಯಂತರ ಶಬ್ದಗಳನ್ನು ಸೇರಿಸಿದರೆ ತಂತ್ರಜ್ಞಾನದ ನೆರವಿನ ಅನುವಾದದ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದರು.

‘ಮುಕ್ತಜ್ಞಾನ ಪಡೆಯಲು ಅಂತರ್ಜಾಲ ದೊಡ್ಡ ವೇದಿಕೆ. ಮುದ್ರಣಮಾಧ್ಯಮಲ್ಲಿ ಹೆಚ್ಚಾಗಿರುವ ಹಕ್ಕುಸ್ವಾಮ್ಯ ಅಂತರ್ಜಾಲ ಮಾಧ್ಯಮದಲ್ಲಿ ಅಷ್ಟಾಗಿ ಇರಬಾರದು. ಕನ್ನಡದ ಪಠ್ಯಗಳು ರಾಜ್ಯ ಸರ್ಕಾರದ ಕಣಜ, ಕೇಂದ್ರ ಸರ್ಕಾರದ ಭಾರತವಾಣಿ ತಾಣಗಳಲ್ಲಿ ಉಚಿತವಾಗಿ ದೊರೆಯುವಂತಾಗಬೇಕು. ಅನುವಾದ ತಂತ್ರಜ್ಞಾನ ಬೆಳೆಸಬೇಕು. ಸಮಕಾಲಿನ ಜ್ಞಾನ, ದೇಶಿ ಅರಿವು ಮತ್ತಿತರ ವಿಷಯಗಳನ್ನು ತಂತ್ರಾಂಶದಲ್ಲಿ ಅಳವಡಿಸಿ ಅರಿವಿನ ನಕಾಶೆ ಮತ್ತು ಎಲ್ಲರಿಗೂ ಮುಕ್ತವಾಗಿ ಜ್ಞಾನ ದೊರಕಿಸಿಕೊಡುವ ಅರಿವಿನ ಗೋಮಾಳ ಸ್ಥಾಪಿಸಬೇಕು’ ಎಂದು ಹೇಳಿದರು.

‘ಅನ್ನದ ಭಾಷೆಯಾಗಿ ಕನ್ನಡ’ ವಿಷಯವಾಗಿ ಮಾತನಾಡಿದ ಅರುಣಕುಮಾರ ಖನ್ನೂರ ‘ಭಾರತ ಕೌಶಲ ಆಧಾರಿತ ದೇಶ. ಕೌಶಲಗಳಿಗೆ ಬೆಲೆ ಕೊಡದಿರುವುದೇ ಪ್ರಸ್ತುತದ ನಿರುದ್ಯೋಗ, ಕೌಶಲ ಕೊರತೆಯ ಸಮಸ್ಯೆಗಳಿಗೆ ಕಾರಣ’ ಎಂದರು.

‘ಅನ್ನವೇ ಭಾಷೆ ಆಗಬೇಕು. ಭಾಷೆಯ ಮೂಲಕ ನಮಗೆ ಅನ್ನ ದೊರೆಯಬೇಕು. ನಮ್ಮ ಮಾತೃಭಾಷೆಯಲ್ಲಿಯೇ ಕೌಶಲ ಕಲಿತಾಗ ನಾವು ಅದರಲ್ಲಿ ಪ್ರಾವೀಣ್ಯತೆ ಸಾಧಿಸಲು ಸಾಧ್ಯ. ಹೀಗಾಗಿ ಕನ್ನಡ ಭಾಷೆಯನ್ನೇ ಕೌಶಲ ಮಾಧ್ಯಮವಾಗಿಸಬೇಕು. ಕನ್ನಡ ಅವಶ್ಯಕತೆಗಿಂತ ಅನಿವಾರ್ಯವಾಗುವಂತೆ ಮಾಡಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಶ್ರೀಕಂಠ ಕೂಡಿಗೆ, ‘ಭಾಷೆ, ಸಂಸ್ಕೃತಿ, ಸಾಹಿತ್ಯ ಸೇರದೇ ಹೋದರೆ, ತಂತ್ರಜ್ಞಾನ ಪರಿಪೂರ್ಣವಲ್ಲ. ಜ್ಞಾನದ ಬಹುಮುಖ್ಯ ವಾಹಕ ಅಂತರ್ಜಾಲ. ಎಲ್ಲರೂ ಚತುರ ಫೋನ್‌, ಅಂತರ್ಜಾಲ ಬಳಸುವ ಮೂಲಕ ಮಾಹಿತಿ ಮತ್ತು ಜ್ಞಾನದ ಹರವು ವಿಸ್ತರಿಸಿಕೊಳ್ಳಬಹುದು’ ಎಂದರು. ಡಾ.ವಿ.ಎಸ್‌. ಮಾಳಿ, ಡಾ.ಶಿರಗಾನಹಳ್ಳಿ ಶಾಂತಾನಾಯ್ಕ ಪ್ರತಿಕ್ರಿಯೆ ನೀಡಿದರು.

‘ಹಾದರ’.. ‘ಆದರ’...
ಸ್ವಾಗತ ಭಾಷಣ ಮಾಡಿದ ಕೈವಾರ ಎನ್‌. ಶ್ರೀನಿವಾಸ ‘ಹಾದರ ಸ್ವಾಗತ’ ಎನ್ನುತ್ತಿದ್ದರು. ಇದಕ್ಕೆ ಆಕ್ಷೇಪವೆತ್ತಿದ ಸಭಿಕರು, ‘ಹಾದರ ಅಲ್ಲ, ಆದರ’ ಎಂದು ಕೂಗಿದರು. ‘ಆದರ’ ಶಬ್ದವನ್ನೇ ಕೈಬಿಟ್ಟ ಶ್ರೀನಿವಾಸ ಅವರು, ‘ಪ್ರೀತಿಪೂರ್ವಕ’, ‘ಆತ್ಮೀಯ’ ಶಬ್ದಗಳಿಗೆ ಮೊರೆ ಹೋದರು.

ಅಧ್ಯಕ್ಷತೆ ವಹಿಸಿದ್ದ ಡಾ.ಶ್ರೀಕಂಠ ಕೂಡಿಗೆ ಈ ವಿಷಯ ಪ್ರಸ್ತಾಪಿಸಿ, ‘ಶಬ್ದಗಳನ್ನು ಸರಿಯಾಗಿ ಬಳಸುವುದು ನಮ್ಮ ಆದ್ಯತೆ ಆಗಬೇಕು’ ಎಂದರು.

* ಕನ್ನಡ ತಂತ್ರಾಂಶ ಅಭಿವೃದ್ಧಿ ಹಾಗೂ ಕಂಪೆನಿಗಳ ವೆಬ್‌ಸೈಟ್‌ಗಳಲ್ಲಿ ಕನ್ನಡ ಬಳಕೆಗೆ ರಾಜ್ಯದ ಮಾಹಿತಿ ತಂತ್ರಜ್ಞಾನ ಇಲಾಖೆಯೂ ಕೈಜೋಡಿಸಬೇಕು. ಕನ್ನಡ ತಂತ್ರಾಂಶ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿ ಸಮನ್ವಯ ಸಾಧಿಸಲು ಹೊಸ ನೀತಿ ರೂಪಿಸಬೇಕು.

–ಎಸ್‌.ಆರ್‌. ವಿಜಯಶಂಕರ್‌, ಇಂಟೆಕ್‌ ಕಂಪೆನಿ ಅಧಿಕಾರಿ, ಅಂಕಣಕಾರ

* ಬಟ್ಟೆ ತೊಳೆಯುವ ಯಂತ್ರವೂ  ಕನ್ನಡದಲ್ಲಿಯೇ ಸಂದೇಶಗಳನ್ನು ಕೊಡಬೇಕು. ಎಲ್ಲ ಐಟಿ ಸಾಧನಗಳಲ್ಲಿ ಅವು ಮಾರಾಟವಾಗುವ ಮುನ್ನವೇ ಭಾರತದ ಎಲ್ಲ ಭಾಷೆಗಳನ್ನು ಅಡಕಮಾಡಿರಬೇಕು ಎಂಬ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಬೇಕು.
–ಬೇಳೂರು ಸುದರ್ಶನ್‌, ಭಾರತವಾಣಿ ಯೋಜನೆಯ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.