ADVERTISEMENT

ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಅಂಬೇಡ್ಕರ್  ಅಂತರರಾಷ್ಟ್ರೀಯ ಸಮಾವೇಶಕ್ಕೆ ಇಂದು ಚಾಲನೆ
ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶಕ್ಕೆ ಇಂದು ಚಾಲನೆ   

ಬೆಂಗಳೂರು: ಡಾ. ಬಿ.ಆರ್‌. ಅಂಬೇಡ್ಕರ್ ಅವರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ ‘ಸಾಮಾಜಿಕ ನ್ಯಾಯ ಮರುಸ್ಥಾಪನೆ– ಅಂಬೇಡ್ಕರ್‌ ಚಿಂತನೆಗಳ ಪುನರ್‌ ಅವಲೋಕನ’ (ರೀಕ್ಲೈಮಿಂಗ್‌ ಸೋಷಿಯಲ್ ಜಸ್ಟೀಸ್‌– ರೀವಿಸಿಟಿಂಗ್ ಅಂಬೇಡ್ಕರ್‌)  ಕುರಿತ ಅಂತರರಾಷ್ಟ್ರೀಯ ಸಮಾವೇಶಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ.

ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ (ಜಿಕೆವಿಕೆ) ಸಂಜೆ 5 ಗಂಟೆಗೆ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ -3 ಅವರು  ಸಮಾವೇಶ ಉದ್ಘಾಟಿಸುವರು.  ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್‌ ಸತ್ಯಾರ್ಥಿ ಭಾಗವಹಿಸುವರು ಎಂದು ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಸಭಾಂಗಣದ ಒಳಗೆ  2,500 ಪ್ರತಿನಿಧಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಹೊರ ಭಾಗದಲ್ಲಿ 8ರಿಂದ 10 ಸಾವಿರ ಜನ ವೀಕ್ಷಿಸಲು ಎಲ್‌ಇಡಿ ಪರದೆ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ADVERTISEMENT

22 ಮತ್ತು 23ರಂದು ಬೆಳಿಗ್ಗೆ 9 ಗಂಟೆಗೆ ಗೋಷ್ಠಿಗಳು ಆರಂಭವಾಗಲಿವೆ. 12 ಸಮಾನಾಂತರ ವೇದಿಕೆಗಳಲ್ಲಿ 93 ಗೋಷ್ಠಿಗಳಲ್ಲಿ 300 ತಜ್ಞರು ವಿಷಯ ಮಂಡಿಸಲಿದ್ದಾರೆ. ಮೂರೂ ದಿನದ ಕಾರ್ಯಕ್ರಮ ದೇಶ– ವಿದೇಶದ 13 ವಿಶ್ವ ವಿದ್ಯಾಲಯಗಳ ವೆಬ್‌ಸೈಟ್‌ಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ವಿವರಿಸಿದರು.

ಬೆಂಗಳೂರು ಘೋಷಣೆ: ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾತನಾಡಿ, ಸಮಾವೇಶದಲ್ಲಿ ಹೊರಹೊಮ್ಮುವ ಆಶಯಗಳನ್ನು ಒಟ್ಟುಗೂಡಿಸಿ ಕೊನೆಯ ದಿನ ನಿರ್ಣಯಗಳನ್ನು ಕೈಗೊಳ್ಳಲಾಗುವುದು.  ಅವುಗಳ ಅನುಷ್ಠಾನಕ್ಕೆ ‘ಬೆಂಗಳೂರು ಘೋಷಣೆ’ಯನ್ನೂ ಸರ್ಕಾರ  ಮಾಡಲಿದೆ ಎಂದು ಅವರು ಹೇಳಿದರು.

ಸಮಾರೋಪದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಮಾವೇಶದಲ್ಲಿ ಭಾಗವಹಿಸಲು 5 ಸಾವಿರ ಜನ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ಭಾಗವಹಿಸುವವರು
ಮಾರ್ಟಿನ್‌ ಲೂಥರ್‌ ಕಿಂಗ್‌–3,  ಕಾರ್ನಲ್‌ ವೆಸ್ಟ್‌, ಲಾರ್ಡ್ ಬೀಕು ಪರೇಕ್‌, ಜೇಮ್ಸ್ ಮ್ಯಾನರ್, ಥಾಮಸ್ ವೈಸ್ಕೋಪ್ಸ್, ಉಪೇಂದ್ರ ಭಕ್ಷಿ, ಲಾರೆನ್ಸ್  ಸೈಮನ್, ಸ್ಯಾಮುಯಲ್ ಮೈಲ್ಸ್.

ರಾಷ್ಟ್ರ ಮಟ್ಟದ ಭಾಷಣಕಾರರು:  ಸುಖದೇವ್ ತೋರಟ್, ಅರುಣ ರಾಯ್,  ನಿಖಿಲ್‍ಡೇ, ಶಿವ ವಿಶ್ವನಾಥನ್,  ಶಶಿ ತರೂರ್,  ಕೆ. ರಾಜು, ಸಲ್ಮಾನ್ ಖುರ್ಷಿದ್,  ಪ್ರಕಾಶ್ ಅಂಬೇಡ್ಕರ್,   ಆನಂದ್ ತೇಲ್‍ತುಮ್ಡೆ,  ಬೆಜವಾಡ ವಿಲ್ಸನ್,  ಆಕಾಶ್ ರಾಥೋಡ್‌, ವಲೇರಿಯನ್ ರೋಡ್ರಿಗಸ್,  ಸುಧೀರ್ ಕೃಷ್ಣಸ್ವಾಮಿ,  ನೀರಾ ಚಾಂಡೋಕೆ,   ಸತೀಶ್ ದೇಶಪಾಂಡೆ,  ಪ್ರಭಾತ್ ಪಟ್‍ನಾಯಕ್.

ರಾಜ್ಯದ ಭಾಷಣಕಾರರು: ದೇವನೂರ ಮಹದೇವ,  ಜಿ.ಕೆ. ಗೋವಿಂದರಾವ್,  ರಹಮತ್‌ ತರೀಕೆರೆ ಮತ್ತು ರಾಜೇಂದ್ರ ಚೆನ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.