ADVERTISEMENT

ಅತಂತ್ರರಾದ ಮದ್ಯದಂಗಡಿ ಮಾಲೀಕರು

ಅಧಿಕಾರಿಗಳ ತಪ್ಪು ಮಾಹಿತಿ ಆಧರಿಸಿ ಪರವಾನಗಿ ನವೀಕರಣ ಶುಲ್ಕ ಪಾವತಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ಮದ್ಯ ಪೂರೈಕೆ ಇಲ್ಲದ ಕಾರಣ  ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಪಬ್‌ ಜನರಿಲ್ಲದೆ ಖಾಲಿ ಇರುವುದು.  –ಪ್ರಜಾವಾಣಿ ಚಿತ್ರ
ಮದ್ಯ ಪೂರೈಕೆ ಇಲ್ಲದ ಕಾರಣ ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಪಬ್‌ ಜನರಿಲ್ಲದೆ ಖಾಲಿ ಇರುವುದು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಬಕಾರಿ ಇಲಾಖೆ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿ ಆಧರಿಸಿ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳ ಪರವಾನಗಿ ನವೀಕರಣಕ್ಕೆ  ಶುಲ್ಕ ಪಾವತಿಸಿದ ಮಾಲೀಕರು ಈಗ ಅತಂತ್ರರಾಗಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳನ್ನು ಮುಚ್ಚಿ ಬೇರೆಡೆ ತೆರೆಯುವವರಿಗೆ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಿ ಸರ್ಕಾರ ಜೂನ್‌ ಕೊನೆ ವಾರದಲ್ಲಿ ಆದೇಶ ಹೊರಡಿಸಿತ್ತು. ಈ ಅವಕಾಶ ಬಳಕೆ ಮಾಡಿಕೊಳ್ಳಲು ಮೂರು ತಿಂಗಳ ಕಾಲಾವಕಾಶವನ್ನೂ ನೀಡಿತ್ತು.

ಈ ಆದೇಶವನ್ನು ತಪ್ಪಾಗಿ ಭಾವಿಸಿದ ಅಬಕಾರಿ ಅಧೀಕ್ಷಕ ದರ್ಜೆಯ ಅಧಿಕಾರಿಗಳು, ‘ಹೆದ್ದಾರಿ ಬದಿಯ ಮದ್ಯದ ಅಂಗಡಿಗಳಿಗೆ ಇನ್ನೂ ಮೂರು ತಿಂಗಳ ಕಾಲಾವಕಾಶ ಸಿಕ್ಕಿದೆ. ಶುಲ್ಕ ಪಾವತಿಸಿ ನವೀಕರಣಕ್ಕೆ ಅರ್ಜಿ ಸಲ್ಲಿಸಿ’ ಎಂದು ಸೂಚಿಸಿದ್ದಾರೆ.ಇದರಿಂದಾಗಿ ರಾಜ್ಯದಾದ್ಯಂತ 1 ಸಾವಿರಕ್ಕೂ ಹೆಚ್ಚು ಮದ್ಯದ ಅಂಗಡಿಗಳ ಮಾಲೀಕರು ಪರವಾನಗಿ ನವೀಕರಣ ಶುಲ್ಕ ಪಾವತಿಸಿದ್ದಾರೆ. ಅನಂತರ ಒಂದೆರಡು ದಿನಗಳಲ್ಲಿ ಅದೇ ಅಧಿಕಾರಿಗಳು ಹೆದ್ದಾರಿ ಬದಿಯ ಅಂಗಡಿಗಳಿಗೆ ಬೀಗ ಹಾಕಿದ್ದಾರೆ.

ADVERTISEMENT

ಬೆಂಗಳೂರು ನಗರದಲ್ಲಿ ಚಿಲ್ಲರೆ ವ್ಯಾಪಾರ ಮಾಡುವ ಮದ್ಯದಂಗಡಿಗಳ (ಸಿಎಲ್‌–2) ಪರವಾನಗಿ ನವೀಕರಣ ಶುಲ್ಕ ₹ 4.40 ಲಕ್ಷ ಇದೆ. ಕ್ಲಬ್‌ಗಳ (ಸಿಲ್‌–4) ಶುಲ್ಕ ₹ 5 ಲಕ್ಷ,  ಬಾರ್‌ ಅಂಡ್‌ ರೆಸ್ಟೋರೆಂಟ್‌(ಸಿಎಲ್‌–9), ಹೋಟೆಲ್‌ ಮತ್ತು ಬೋರ್ಡಿಂಗ್‌ (ಸಿಎಲ್‌–7) ಶುಲ್ಕ ₹ 7 ಲಕ್ಷ, ಪಂಚತಾರ ಹೋಟೆಲ್‌ಗಳ (ಸಿಎಲ್‌–6) ನವೀಕರಣ ಶುಲ್ಕ ₹ 8 ಲಕ್ಷ ಇದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವೀಕರಣ ಶುಲ್ಕದಲ್ಲಿ ವ್ಯತ್ಯಾಸ ಇದ್ದು, ₹ 3ದಿಂದ ₹ 8 ಲಕ್ಷದವರೆಗೆ ಶುಲ್ಕ ನಿಗದಿ ಮಾಡಲಾಗಿದೆ.

ಈ ಶುಲ್ಕ ಪಾವತಿಸಿರುವ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳಿಗೂ ಈಗ ಬೀಗ ಬಿದ್ದಿದೆ. ಅತ್ತ ಪರವಾನಗಿ ಶುಲ್ಕ ವಾಪಸ್‌ ಪಡೆಯಲು ಸಾಧ್ಯವಾಗುತ್ತಿಲ್ಲ. ಇತ್ತ ವಹಿವಾಟು ಇಲ್ಲದೆ ಅತಂತ್ರರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಬಕಾರಿ ಇಲಾಖೆ ಜಂಟಿ ಆಯುಕ್ತ ರಾಜೇಂದ್ರ ಪ್ರಸಾದ್, ‘ಸುಪ್ರೀಂ ಕೋರ್ಟ್‌ ಆದೇಶದಂತೆ ಬಾಗಿಲು ಮುಚ್ಚುವ ಮಾಹಿತಿ ಇದ್ದರೂ, ಕೆಲವರು ಶುಲ್ಕ ಪಾವತಿಸಿರಬಹುದು. ಅದು ನಮಗೆ ಗೊತ್ತಿಲ್ಲ. ಆದರೆ, ಬೇಡ ಎಂದವರು ವಾಪಸ್‌ ಪಡೆಯಲು ಅವಕಾಶ ಇದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳಿಗೆ ಅರಿವಿನ ಕೊರತೆ
‘ಅಬಕಾರಿ ಅಧೀಕ್ಷಕ ಹಂತದ ಅಧಿಕಾರಿಗಳಿಗೆ ಕಾನೂನಿನ ತಿಳಿವಳಿಕೆ ಇಲ್ಲದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ’ ಎಂದು ಮದ್ಯ ಮಾರಾಟಗಾರರ ಸಂಘ ಆರೋಪಿಸಿದೆ. ‘ಶುಲ್ಕ ವಿನಾಯಿತಿ ನೀಡಿ ಸರ್ಕಾರ ಹೊರಡಿಸಿದ ಆದೇಶವನ್ನು ತಪ್ಪಾಗಿ ಭಾವಿಸಿ ಶುಲ್ಕ ಕಟ್ಟಿಸಿಕೊಂಡಿದ್ದಾರೆ. ಹೀಗಾಗಿ ಮದ್ಯದ ಅಂಗಡಿ ಮಾಲೀಕರು ಅತಂತ್ರರಾಗಿದ್ದಾರೆ’ ಎಂದು ಸಂಘದ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ  ‘ಪ್ರಜಾವಾಣಿ’ಗೆ ತಿಳಿಸಿದರು.

ಕಾನೂನು ತಜ್ಞರ ಸಲಹೆ ಬಂದ ಕೂಡಲೇ ಕ್ರಮ
ಪಂಜಾಬ್‌ ಮಾದರಿಯಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಕಾನೂನು ತಜ್ಞರ ಸಲಹೆಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ.
‘ಹೆದ್ದಾರಿ ಬದಿ ಇರುವ ಎಲ್ಲ ಮದ್ಯದ ಅಂಗಡಿಗಳನ್ನು ಉಳಿಸಲು ತಜ್ಞರ ಸಲಹೆ ಕೇಳಲಾಗಿದೆ. ಬಂದ ಕೂಡಲೇ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲಾಗುತ್ತದೆ’ ಎಂದು ಲೋಕೋಪಯೋಗ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.