ADVERTISEMENT

ಅನುಮತಿ ಇಲ್ಲದೆ ₹ 107 ಕೋಟಿ ಬಿಡುಗಡೆ?

ವಿರೂಪಾಕ್ಷ ಹೊಕ್ರಾಣಿ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ಅಂಬೇಡ್ಕರ್ ಸ್ಕೂಲ್ ಆಫ್‌ ಇಕನಾಮಿಕ್ಸ್‌ ಕಟ್ಟಡ ನಿರ್ಮಾಣಕ್ಕೆ ಯೋಜನೆ ಮತ್ತು ಅಂದಾಜು (ಪ್ಲ್ಯಾನ್ ಅಂಡ್ ಎಸ್ಟಿಮೇಟ್) ವಿವರಗಳಿಲ್ಲದೆ  ₹ 107 ಕೋಟಿ ಬಿಡುಗಡೆ ಮಾಡಲಾಗಿದೆ. ಈ ನಡೆಗೆ ಕಾಲೇಜು ಶಿಕ್ಷಣ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್‌ ಇಕನಾಮಿಕ್ಸ್‌ ಕಟ್ಟಡ ನಿರ್ಮಾಣ ಆಗಲಿದ್ದು, ಎಸ್‌ಸಿಪಿ ಹಾಗೂ ಟಿಎಸ್‌ಪಿಯಡಿ (ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟು ಉಪಯೋಜನೆ) ರಾಜ್ಯದ ಖಜಾನೆಯಿಂದ ನೇರವಾಗಿ ಉನ್ನತ ಶಿಕ್ಷಣ ಪರಿಷತ್ತಿಗೆ ಹಣ ಬಿಡುಗಡೆ ಆಗಿದೆ. ಆಡಳಿತಾತ್ಮಕ ಅನುಮೋದನೆ ಪಡೆಯದೆ ಈ ಹಣವನ್ನು ಕರ್ನಾಟಕ ಗೃಹ ಮಂಡಳಿಗೆ ವರ್ಗಾಯಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗಳನ್ನು ಹೊರಗಿಟ್ಟು, ಉನ್ನತ ಶಿಕ್ಷಣ ಪರಿಷತ್ತಿಗೆ ಹಣ ಬಿಡುಗಡೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ADVERTISEMENT

‘ಅಂಬೇಡ್ಕರ್ ಸ್ಕೂಲ್ ಆಫ್‌ ಇಕನಾಮಿಕ್ಸ್‌ ಸ್ಥಾಪನೆಗೆ ಸಂಬಂಧಿಸಿದ ಅಧಿನಿಯಮಗಳು ಇನ್ನೂ ಕರಡು ರೂಪದಲ್ಲಿವೆ. ಈ ಸಂಸ್ಥೆಗೆ ಕಾಯಂ ನಿರ್ದೇಶಕರನ್ನು ನೇಮಿಸಲು ಶೋಧನಾ ಸಮಿತಿ ರಚಿಸಲಾಗಿದೆ. ಅನುದಾನ ಬಳಕೆ, ನಿರ್ವಹಣೆ ಪರಿಶೀಲನೆಗೂ ಲೆಕ್ಕಪತ್ರ ಇಲಾಖೆಯಿಂದ ಅಧಿಕಾರಿಗಳ ನೇಮಕ ಆಗಿಲ್ಲ. ಕಟ್ಟಡ ನಿರ್ಮಾಣ ಕುರಿತಾದ ಯೋಜನೆ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿಲ್ಲ’ ಎಂದೂ ಮೂಲಗಳು ವಿವರಿಸಿವೆ.

‘ನಿಯಮಗಳನ್ನು ಮೀರಿ ಹಣ ಬಿಡುಗಡೆ ಮಾಡಿದರೆ ನಡೆಯುವ ಅಕ್ರಮಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಹೊಣೆ ಆಗುವುದಿಲ್ಲ’ ಎಂದು ಆಯುಕ್ತ ಎಂ.ಎನ್. ಅಜಯ್ ನಾಗಭೂಷಣ್ ಶಿಕ್ಷಣ ಪರಿಷತ್ ಕಾರ್ಯಕಾರಿ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಆಕ್ಷೇಪ ಎತ್ತಿದ್ದಾರೆ.

ಕಾಮಗಾರಿ ಪ್ರಾರಂಭಿಸಲು ಒತ್ತಡ?

‘ಅಂಬೇಡ್ಕರ್ ಸ್ಕೂಲ್ ಆಫ್‌ ಇಕನಾಮಿಕ್ಸ್‌ಗೆ ಅಗತ್ಯ ಕಾನೂನುಗಳೇ ರಚನೆ ಆಗದಿದ್ದರೂ, ಕಟ್ಟಡಗಳ ನಿರ್ಮಾಣಕ್ಕೆ ತರಾತುರಿ ಮಾಡಲಾಗುತ್ತಿದೆ. ತ್ವರಿತವಾಗಿ ಕಾಮಗಾರಿ  ಆರಂಭಿಸುವಂತೆ ಇಲಾಖೆ ಮುಖ್ಯಸ್ಥರು ಒತ್ತಡ ಹಾಕುತ್ತಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ.

50 ವಿದ್ಯಾರ್ಥಿಗಳಿಗೆ ಪ್ರವೇಶ

ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್‌ ಅನ್ನು ಸೊಸೈಟಿ ಕಾಯ್ದೆಯಡಿ ನೋಂದಣಿ, ಮಾಡಲಾಗಿದೆ. 2017–18ನೇ ಸಾಲಿನಿಂದ ಆರಂಭವಾದ ಮೊದಲ ತಂಡದಲ್ಲಿ 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ. ಇನ್ನೂ ಕಾಯಂ ಅಧ್ಯಾಪಕರ ನೇಮಕ ಆಗಿಲ್ಲ. ಅತಿಥಿ ಉಪನ್ಯಾಸಕರ ನೆರವಿನಿಂದ ನಡೆಸಲಾಗುತ್ತಿದೆ.

ಅಂಬೇಡ್ಕರ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌ಗೆ ವಿಶ್ವವಿದ್ಯಾಲಯದ ಆವರಣದಲ್ಲಿ 44 ಎಕರೆ ಭೂಮಿ ನೀಡಲಾಗಿದೆ.

ಆಯುಕ್ತರು ಗೊಂದಲಕ್ಕೆ ಒಳಗಾಗಿದ್ದಾರೆ

‘ಯೋಜನೆಗೆ ಅನುಮೋದನೆ ಇಲ್ಲದೆ ಹಣ ಬಿಡುಗಡೆ ಮಾಡಲು ಬರುವುದಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಬರೆದಿರುವ ಪತ್ರ ತಲುಪಿದೆ. ಅದನ್ನು ನೋಡಿದರೆ ಅವರು ಗೊಂದಲಕ್ಕೆ ಒಳಗಾಗಿದ್ದಾರೆ ಎಂದನಿಸುತ್ತಿದೆ. ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಪಡೆದೇ ಸರ್ಕಾರದಿಂದ ₹ 107 ಕೋಟಿಯನ್ನು ಉನ್ನತ ಶಿಕ್ಷಣ ಪರಿಷತ್ತಿಗೆ ಬಿಡುಗಡೆ ಮಾಡಲಾಗಿದೆ’ ಎಂದು ಪರಿಷತ್ತಿನ ಕಾರ್ಯಕಾರಿ ನಿರ್ದೇಶಕ ಡಾ.ಎಸ್.ಎ. ಕೋರಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್‌ಗೆ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿಯೇ ಆಡಳಿತ ಮಂಡಳಿ ರಚನೆಯಾಗಿದೆ. ಸರ್ಕಾರ ನೀಡುವ ಹಣಕ್ಕೆ ಈ ಮಂಡಳಿ ಜವಾಬ್ದಾರಿ ಆಗಿರುತ್ತದೆ. ಗೃಹ ಮಂಡಳಿಯಿಂದ ಅಗತ್ಯ ಕಟ್ಟಡಗಳ ನಿರ್ಮಾಣ ಆಗುತ್ತದೆ. ಅದೂ ಸರ್ಕಾರದ ಒಂದು ಸಂಸ್ಥೆ ಎಂದರು.

* ಉನ್ನತ ಶಿಕ್ಷಣ ಇಲಾಖೆಯ ಭಾಗವೇ ಉನ್ನತ ಶಿಕ್ಷಣ ಪರಿಷತ್ತು. ಇಕನಾಮಿಕ್ಸ್‌ ಸಂಸ್ಥೆಯ ಕಟ್ಟಡಗಳ ಕಾಮಗಾರಿಗೆ ಗೃಹ ಮಂಡಳಿಗೆ ಈಗಾಗಲೇ ಹಣ ವರ್ಗಾವಣೆಯಾಗಿದೆ

–ಎಂ.ಬಿ. ದ್ಯಾಬೇರಿ, ಸಿಇಒ ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.