ADVERTISEMENT

ಅಭಿವೃದ್ಧಿಗೆ ಮುಳುವಾಗುತ್ತಿದೆ ಕೋಮು ದಳ್ಳುರಿ

ವಿ.ಎಸ್.ಸುಬ್ರಹ್ಮಣ್ಯ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಅಭಿವೃದ್ಧಿಗೆ ಮುಳುವಾಗುತ್ತಿದೆ ಕೋಮು ದಳ್ಳುರಿ
ಅಭಿವೃದ್ಧಿಗೆ ಮುಳುವಾಗುತ್ತಿದೆ ಕೋಮು ದಳ್ಳುರಿ   

ಮಂಗಳೂರು: ಉತ್ತಮ ಗುಣಮಟ್ಟದ ಶಿಕ್ಷಣ, ರಸ್ತೆ, ಜಲ ಮತ್ತು ವಾಯು ಮಾರ್ಗಗಳ ಸಂಪರ್ಕ ಹೊಂದಿದ್ದರೂ ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಹೂಡಿಕೆ ಆಕರ್ಷಿಸುವಲ್ಲಿ ಹಿಂದೆ ಬೀಳುತ್ತಿದೆ. ಇದಕ್ಕೆ ಕಾರಣವಾಗಿರುವುದು ಇಲ್ಲಿ ಆಗಾಗ ಸ್ಫೋಟಗೊಳ್ಳುವ ಕೋಮು ದಳ್ಳುರಿ. ಇದೇ ಕಾರಣಕ್ಕಾಗಿ ಜಿಲ್ಲೆಯ ಹೆಸರು ‘ಸಮಸ್ಯಾತ್ಮಕ ಜಿಲ್ಲೆ’ಗಳ ಪಟ್ಟಿ ಸೇರಿದರೆ ಇಲ್ಲಿನ ಜನರ ಭವಿಷ್ಯವೇ ಮಸುಕಾಗಬಹುದು ಎಂಬ ಆತಂಕ ಹಲವರನ್ನು ಕಾಡತೊಡಗಿದೆ.

ಯುವಕನೊಬ್ಬ ಯುವತಿಯೊಬ್ಬಳನ್ನು ಚುಡಾಯಿಸಿದ ಎಂಬ ಕಾರಣಕ್ಕಾಗಿ 1998ರ ಡಿಸೆಂಬರ್‌ 29ರಂದು ಸುರತ್ಕಲ್‌ನಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆ ಆರಂಭವಾಗಿತ್ತು. 1998ರ  ಡಿಸೆಂಬರ್‌ 29 ಮತ್ತು 1999ರ ಜನವರಿ 9ರಂದು ಆ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆದಿತ್ತು. ಆರು ಮಂದಿ ಮುಸ್ಲಿಮರು, ಇಬ್ಬರು ಹಿಂದೂಗಳ ಹತ್ಯೆಯಾಗಿತ್ತು. 128 ಮಂದಿ ಗಾಯಗೊಂಡಿದ್ದರು. 1998ರಲ್ಲಿ ನಡೆದ ಸುರತ್ಕಲ್‌ ಕೋಮು ಗಲಭೆಯ ಬಳಿಕ ಮಂಗಳೂರಿನ ಹೆಸರು ಜಗತ್ತಿನ ಕೋಮುಸೂಕ್ಷ್ಮ ಪ್ರದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳತೊಡಗಿದೆ.

ಮತೀಯ ದ್ವೇಷದ ಘಟನೆಗಳು ಹೂಡಿಕೆ ಆಕರ್ಷಣೆ, ವಿದೇಶಿ ಪ್ರವಾಸಿಗರ ಭೇಟಿ, ವಿದೇಶ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದರ ಮೇಲೆ ನಿಧಾನಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಖಾಸಗಿ ಗುಪ್ತಚರ ಸಂಸ್ಥೆಗಳು ನೀಡುವ ವರದಿಯ ಆಧಾರದಲ್ಲೇ ಅಂತರರಾಷ್ಟ್ರೀಯ ಮಟ್ಟದ ಬೃಹತ್‌ ಉದ್ದಿಮೆಗಳು ತಮ್ಮ ಹೂಡಿಕೆಯ ಸ್ಥಳವನ್ನು ನಿರ್ಧರಿಸುತ್ತವೆ. ಜಗತ್ತಿನ ಅನೇಕ ದೈತ್ಯ ಕಂಪೆನಿಗಳಿಗೆ ಗುಪ್ತಚರ ಸೇವೆ ಒದಗಿಸುವ ಅಮೆರಿಕದ ಸ್ಟ್ರ್ಯಾಫರ್‌ ಕಂಪೆನಿ, ‘ಮತೀಯ ದ್ವೇಷದ ಘಟನೆಗಳು ಹೆಚ್ಚುತ್ತಿರುವ ಕಾರಣಕ್ಕಾಗಿ ಮಂಗಳೂರು ಹೂಡಿಕೆಗೆ ಪ್ರಶಸ್ತ ತಾಣವಲ್ಲ’ ಎಂಬ ಶಿಫಾರಸಿನೊಂದಿಗೆ 2007ರಲ್ಲಿ ತನ್ನ ಗ್ರಾಹಕರಿಗೆ ವರದಿ ನೀಡಿತ್ತು ಎಂಬುದನ್ನು ವಿಕಿಲೀಕ್ಸ್‌ ಬಹಿರಂಗಪಡಿಸಿತ್ತು.
1998ರ ಸುರತ್ಕಲ್‌ ಗಲಭೆಯಿಂದ 2007ರವರೆಗೆ ನಡೆದ ಹಲವು ಘಟನೆಗಳ ಕುರಿತು ತನ್ನ ವರದಿಯಲ್ಲಿ ಪ್ರಸ್ತಾಪಿಸಿದ್ದ ಸ್ಟ್ರ್ಯಾಫರ್‌ ಕಂಪೆನಿ, ಮಂಗಳೂರಿನಲ್ಲಿ 25ರಿಂದ 30 ವರ್ಷ ವಯಸ್ಸಿನ ಯುವಕರು ಮತೀಯ ದ್ವೇಷದ ಘಟನೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವ ಕುರಿತು ಉಲ್ಲೇಖಿಸಿತ್ತು. ಗೋ ಸಾಗಣೆ, ಯುವತಿಯರನ್ನು ಚುಡಾಯಿಸುವುದು ಸೇರಿದಂತೆ ಸಣ್ಣ ಕಾರಣಗಳಿಗೂ ಇಲ್ಲಿ ಘರ್ಷಣೆಗಳು ನಡೆಯುತ್ತವೆ ಎಂದು ಕಂಪೆನಿ ವರದಿಯಲ್ಲಿ ಹೇಳಿತ್ತು.

ADVERTISEMENT

‘1965ರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ದ್ವೇಷದ ಹಿಂಸಾಚಾರ ನಡೆಯುತ್ತಿದೆ. ಕೆಲವು ಸಂದರ್ಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅದು ನಡೆದಿದೆ. ಮತೀಯ ದ್ವೇಷದ ವಿಷಬೀಜ ಬಿತ್ತಿದವರು ಯಾವಾಗಲೂ ಅದರ ಫಲ ಪಡೆಯಲು ಹವಣಿಸುತ್ತಲೇ ಇರುತ್ತಾರೆ. ಅದರ ಫಲವಾಗಿ ಆಗಾಗ ಹಿಂಸಾಚಾರ, ಗಲಭೆಗಳು ನಡೆಯುತ್ತವೆ. 1978ರಲ್ಲಿ ಮಂಗಳೂರಿನಲ್ಲಿ ದೊಡ್ಡಮಟ್ಟದ ಕೋಮುಗಲಭೆ ನಡೆದಿತ್ತು. 1998ರ ಸುರತ್ಕಲ್‌ ಗಲಭೆ ಈಗಲೂ ನನ್ನ ನೆನಪಿನಿಂದ ಮಾಸಿಲ್ಲ. ರಾಜಕೀಯ ಲಾಭ ಪಡೆಯಲು ಕೆಲವರು ಹವಣಿಸಿದ್ದೇ ಇಂತಹ ಘಟನೆಗಳಿಗೆ ಕಾರಣವಾಯಿತು’ ಎಂದು ಜಿಲ್ಲೆಯ ಹಿರಿಯ ರಾಜಕಾರಣಿ ಬಿ.ಎ.ಮೊಯಿದ್ದೀನ್‌ ನೆನಪಿಸಿಕೊಳ್ಳುತ್ತಾರೆ.

ಮಾಹಿತಿಗಾಗಿ ಶೋಧ
ಬಂಟ್ವಾಳ ತಾಲ್ಲೂಕಿನಲ್ಲಿ ಮೇ ತಿಂಗಳಿನಿಂದ ಮತೀಯ ದ್ವೇಷದಗಲಭೆಗಳು ನಡೆದ ಬಳಿಕ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ. ಜಿಲ್ಲೆಯಲ್ಲಿ ಕೋಮುದ್ವೇಷದ ಹಿಂಸೆಯ ಕೃತ್ಯಗಳು ಬೆಳೆದುಬಂದ ಹಾದಿ ಕುರಿತುಸಮಗ್ರ ಮಾಹಿತಿ ಸಂಗ್ರಹಿಸಿರುವ ಕೆಲಸವನ್ನು ಇಲಾಖೆ ಆರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಮತೀಯ ದ್ವೇಷದ ಕಾರಣಕ್ಕಾಗಿ ನಡೆದಿರುವ ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.
(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.