ADVERTISEMENT

ಅಸಮರ್ಥ ಸಚಿವರ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಬೆಂಗಳೂರು: ‘ಅಸಮರ್ಥ ಸಚಿವ­ರನ್ನು ಸಂಪುಟದಿಂದ ಕೈಬಿಡಬೇಕು. ವಿಧಾ­ನಮಂಡಲ ಅಧಿವೇಶನ ನಂತರ ಸಚಿವ ಸಂಪುಟ ಪುನರ್‌ರಚಿಸಬೇಕು’ ಎಂದು ಕಾಂಗ್ರೆಸ್‌ ಹಿರಿಯ ಶಾಸಕರ ನಿಯೋಗ ಬುಧವಾರ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರನ್ನು ಆಗ್ರಹಪಡಿಸಿದೆ.

‘ಕೃಷ್ಣಾ’ದಲ್ಲಿ ಬೆಳಗಿನ ಉಪಾ­ಹಾರಕ್ಕೆ ಸೇರಿದ್ದ 35ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿಯವರ ಬಳಿ 20 ನಿಮಿಷ ತಮ್ಮ ಅಹವಾಲು ಹೇಳಿಕೊಂಡರು.

‘ಕೆಲವು ಸಚಿವರು ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅಂತಹ­ವ­ರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಅಸಮರ್ಥರನ್ನು ಸಂಪುಟದಿಂದ ಕೈಬಿಟ್ಟು, ಅವರ ಬದಲಿಗೆ ಸಮರ್ಥರಿಗೆ ಅವಕಾಶ ನೀಡಬೇಕು’ ಎಂದು ಕೋರಿಕೆ ಸಲ್ಲಿಸಿ­ದ್ದಾರೆ.

‘ವಿಧಾನಸಭೆಯ 3 ಸ್ಥಾನಗ­ಳಿಗೆ ಉಪ ಚುನಾವಣೆ ಘೋಷಣೆ ಆಗಿರು­ವುದನ್ನು ನೆಪ ಮಾಡಿಕೊಂಡು ಸಂಪುಟ ಪುನರ್‌ರಚನೆ ಮುಂದೂ­ಡಬಾರದು’ ಎಂದೂ ಶಾಸಕರು ಮನವಿ ಮಾಡಿದ್ದಾರೆ.

‘ಸಂಪುಟ ವಿಸ್ತರಣೆಗಿಂತ ಮುಖ್ಯವಾಗಿ ಪುನರ್‌ರಚನೆ ಮಾಡಬೇಕು. ಹಲವು ಸಚಿವರು ಒಂದೂವರೆ ವರ್ಷ ಆದರೂ ಇಲಾಖೆ ಮೇಲೆ ಹಿಡಿತ ಸಾಧಿಸಿಲ್ಲ. ಕೆಲಸಗಳನ್ನೂ ಸರಿಯಾಗಿ ಮಾಡುತ್ತಿಲ್ಲ. ಯಾರು ಅಸಮರ್ಥರು ಎಂಬುದು ನಿಮಗೂ ಗೊತ್ತಿದೆ. ಅಂತಹವರನ್ನು ಇಟ್ಟುಕೊಂಡು  ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದರು ಎನ್ನಲಾಗಿದೆ.

‘ಸಂಪುಟ ಪುನರ್‌ರಚನೆ ವಿಚಾರದಲ್ಲಿ ಸ್ವತಂತ್ರವಾದ ತೀರ್ಮಾನಗಳನ್ನು ಮಾಡಬೇಕು. ಅದಕ್ಕೆ ನಮ್ಮ ಪೂರ್ಣ ಬೆಂಬಲ ಇದೆ’ ಎಂದೂ ಶಾಸಕರು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ.

ಆದ್ಯತೆ ಇರಲಿ: ನಿಗಮ– ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿ­ಸು­ವಾಗ ಶೇ 50ರಷ್ಟು ಸ್ಥಾನಗಳನ್ನು ಶಾಸಕರಿಗೆ ಮೀಸಲು ಇಡಬೇಕು. ಉಳಿದ ಶೇ 50ರಷ್ಟು ಸ್ಥಾನಗಳನ್ನು ಪಕ್ಷದ ಕಾರ್ಯ­ಕರ್ತರಿಗೆ ಕೊಡಬೇಕು. ನಿಗಮ– ಮಂಡಳಿಗಳ ನೇಮಕ ವಿಚಾರದಲ್ಲಿ ವಿಳಂಬ ಮಾಡದೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸ್ಥಳೀಯ ಚುನಾವಣೆಗಳ ಗುಮ್ಮ: ಮುಂದಿನ ಎಂಟು ತಿಂಗಳಲ್ಲಿ ಗ್ರಾಮ ಪಂಚಾಯಿತಿ, ಅದರ ನಂತರದ ಒಂದು ವರ್ಷದಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತವೆ. ಅಲ್ಲಿ ಒಳ್ಳೆಯ ಫಲಿತಾಂಶ ಪಡೆಯಬೇಕಾದರೆ ಸರ್ಕಾರ ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸ­ಬೇಕಾ­ಗುತ್ತದೆ. ಶಾಸಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎಂದೂ ಹಲವರು ಕೋರಿದರು ಎನ್ನಲಾಗಿದೆ.

ಹೈಕಮಾಂಡ್‌ ಜತೆ ಚರ್ಚೆ: ಶಾಸಕರ ಅಹವಾಲು ಆಲಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ ಅವರು ‘ನನಗೂ ತಕ್ಷಣ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಮಾಡ­ಬೇಕು ಎನ್ನುವ ಇಚ್ಛೆ ಇದೆ. ಆದರೆ, ಉಪ ಚುನಾವಣೆ ಬಂದಿ­ರುವ ಕಾರಣ ಸ್ವಲ್ಪ ವಿಳಂಬ ಆಗಬಹುದು’ ಎಂದರು.

ಇದಕ್ಕೆ ಶಾಸಕರು ತಕ್ಷಣವೇ ಆಕ್ಷೇಪ ಎತ್ತಿ ‘ಉಪ ಚುನಾವಣೆವರೆಗೂ ಕಾಯಬಾರದು’ ಎಂದು ಹೇಳಿದ್ದಾರೆ. ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ‘ಪಕ್ಷದ ಹೈಕಮಾಂಡ್‌ ಜತೆ ಚರ್ಚೆ ನಡೆಸಿದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು. ನಿಮ್ಮ ಎಲ್ಲ ಅಹವಾ­ಲುಗಳ ಬಗ್ಗೆಯೂ ಹೈಕಮಾಂಡ್‌ ಜತೆ ಸಮಾಲೋಚಿ­ಸಲಾಗುವುದು’ ಎಂದು ವಿವರಿಸಿದರು ಎನ್ನಲಾಗಿದೆ.

ಡಾ.ಎ.ಬಿ.ಮಾಲಕರೆಡ್ಡಿ, ಕೆ.ಎನ್‌.ರಾಜಣ್ಣ, ಕೆ.ಬಿ.­ಕೋಳಿವಾಡ್‌, ಅನಿಲ್‌ ಲಾಡ್‌,  ಆರ್‌.ವಿ.ದೇವರಾಜ್‌, ಎ.ಮಂಜು, ಶಿವಾನಂದ ಪಾಟೀಲ್‌, ಈಶ್ವರ್‌ ಖಂಡ್ರೆ,  ನರೇಂದ್ರ ಮತ್ತಿತರರು ಶಾಸಕರ ನಿಯೋಗದಲ್ಲಿದ್ದರು.

ಯಾವ ಸಚಿವರ ವಿರುದ್ಧ ದೂರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ, ವಸತಿ ಸಚಿವ ಅಂಬರೀಷ್‌, ಪೌರಾಡಳಿತ  ಸಚಿವ ಖಮರುಲ್‌ ಇಸ್ಲಾಂ ಮತ್ತಿತರರ ವಿರುದ್ಧ ಶಾಸಕರು ದೂರು ನೀಡಿದರು ಎಂದು ಗೊತ್ತಾಗಿದೆ.

ಉಮಾಶ್ರೀ ಅವರು ಶಾಸಕರ ಪತ್ರಕ್ಕೂ ಕಿಮ್ಮತ್ತು ನೀಡದೆ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಇವರು ಯಾವ ಶಾಸಕರಿಗೂ ಸಿಗುವುದಿಲ್ಲ ಎಂದು ಕೆಲವರು ದೂರಿದ್ದಾರೆ.

ಸಚಿವ ಅಂಬರೀಷ್‌ ಅವರು 14 ತಿಂಗಳಾದರೂ ಒಂದು ಮನೆ ಕಟ್ಟಿಲ್ಲ. ಇಂತಹವರಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಎಲ್ಲಿಂದ ಬರುತ್ತದೆ? ಮೊದಲು ಮನೆ ಕೊಡಿಸುವ ಕೆಲಸ ಮಾಡಿ ಎಂದೂ ಶಾಸಕರು ಆಗ್ರಹಪಡಿಸಿದ್ದಾರೆ.

ಸಚಿವ ಖಮರುಲ್‌ ಇಸ್ಲಾಂ ಅವರು ಶಾಸಕರನ್ನೇ ಗುರುತಿಸುವುದಿಲ್ಲ. ಎಷ್ಟು ಬಾರಿ ಹೋಗಿ ಪರಿಚಯ ಮಾಡಿಕೊಂಡರೂ ಅವರಿಗೆ ತಿಳಿಯುವುದಿಲ್ಲ ಎಂದು ದೂರಿದರು ಎನ್ನಲಾಗಿದೆ.

‘ಶಾಸಕರ ಸಣ್ಣಪುಟ್ಟ ವಿಷಯಗಳ ಕಡೆಗೆ ಗಮನ ನೀಡಲು ಮುಖ್ಯಮಂತ್ರಿ ಕಚೇರಿಯಲ್ಲಿ ಕಾರ್ಯದರ್ಶಿಯೊಬ್ಬರನ್ನು ನೇಮಿಸಬೇಕು. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆ ವ್ಯವಸ್ಥೆ ಇತ್ತು ಎಂದೂ ಕೆಲವರು ಸಲಹೆ ಮಾಡಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT