ADVERTISEMENT

ಅಸ್ಥಿಮಜ್ಜೆ ಹುಡುಕಾಟ ಇನ್ನು ಸಲೀಸು

ರಕ್ತದ ಕ್ಯಾನ್ಸರ್‌ ಪೀಡಿತರಿಗೆ ಬಿಎಂಸಿ ಹಳೆಯ ವಿದ್ಯಾರ್ಥಿಗಳ ಸಹಾಯಹಸ್ತ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಬೆಂಗಳೂರು: ರಕ್ತದ ಕ್ಯಾನ್ಸರ್‌ ಸೇರಿದಂತೆ ಹಲವು ರೋಗ­ಗಳಿಗೆ ಅಸ್ಥಿಮಜ್ಜೆ ಕಸಿಯೇ ಪರಿಹಾರ. ಆದರೆ ರೋಗಿಗೆ ಸರಿಹೊಂದುವ ಅಸ್ಥಿಮಜ್ಜೆ­ಯನ್ನು ಹುಡು­ಕು­ವುದೇ ತ್ರಾಸು. ಇದಕ್ಕೆ ಭಾರಿ  ವೆಚ್ಚವಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಬೆಂಗಳೂರು ವೈದ್ಯ­ಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಅಸ್ಥಿಮಜ್ಜೆ ದಾಖಲಿಸುವ ವಿನೂತನ ಕಾರ್ಯವನ್ನು ಆರಂಭಿಸಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಈ ವರ್ಷ ವಜ್ರಮಹೋತ್ಸವದ ಸಂಭ್ರಮ. ಇದಕ್ಕಾಗಿ ಕಾಲೇಜಿನ  ಆವರಣದಲ್ಲಿ ಹಳೆಯ ವಿದ್ಯಾರ್ಥಿ­ಗಳೇ ನಡೆ­ಸುತ್ತಿರುವ ಬೆಂಗಳೂರು ವೈದ್ಯಕೀಯ ಕಾಲೇಜಿನ ಅಭಿವೃದ್ಧಿ ಟ್ರಸ್ಟ್‌ (ಬಿಎಂಸಿಡಿಟಿ) ಮೂಲಕ ಅಸ್ಥಿಮಜ್ಜೆ ನೋಂದಣಿ ಅನೌಪಚಾರಿಕ­ವಾಗಿ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಚಾಲನೆ ದೊರಕಲಿದೆ.

ರಕ್ತದ ಕ್ಯಾನ್ಸರ್‌ ರೋಗಿಗಳನ್ನು ಎದೆಗುಂದಿಸು­ತ್ತದೆ. ಇದಕ್ಕೆ ಪರಿಹಾರವಾಗಿ ರೋಗಪೀಡಿತ ಅಸ್ಥಿಮಜ್ಜೆ­ಯನ್ನು ಕೊಂದು ಆರೋಗ್ಯವಂತ ಮತ್ತು ರೋಗಿಗೆ ಸರಿಹೊಂದುವ ಅಸ್ಥಿಮಜ್ಜೆ­ ಕಸಿ ಮಾಡ­ಬೇ­ಕಾ­­ಗುತ್ತದೆ. ಆದರೆ ರೋಗಿಗೆ ಸರಿಹೊಂದುವ ಅಸ್ಥಿಮಜ್ಜೆ ಹುಡು­ಕಲೇ ಲಕ್ಷಾಂತರ ರೂಪಾಯಿ ವ್ಯಯವಾ­ಗುತ್ತದೆ. ನಂತರದ ಹಂತವೇ ಕಸಿ. ಹುಡು­ಕುವ ಅವಧಿ ಮತ್ತು ಸರಿಹೊಂದುವ ಅಸ್ಥಿಮಜ್ಜೆ ಯಾವ ದಾನಿಯ ಬಳಿ ದೊರಕುತ್ತದೆ ಎನ್ನುವ ಮಾಹಿತಿ ಸುಲಭವಾಗಿ ದೊರಕುವಂತಿದ್ದರೆ ರೋಗಿ ಬದು­ಕುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ ಎನ್ನು­ವರು ಟ್ರಸ್ಟ್‌ನ ಅಧ್ಯಕ್ಷ ಡಾ.ಕೆ.ಎಂ.ಶ್ರೀನಿವಾಸಗೌಡ.

ಅಸ್ಥಿಮಜ್ಜೆಯೇ ಕೆಂಪುರಕ್ತ ಕಣ, ಬಿಳಿ ರಕ್ತ ಕಣ ಹಾಗೂ ಪ್ಲೇಟ್‌ಲೆಟ್‌ಗಳ ಉತ್ಪಾದಕ. ತಾಂತ್ರಿಕ­ವಾಗಿ ಹೇಳುವುದಾದರೆ ಅಸ್ಥಿಮಜ್ಜೆಯಲ್ಲಿರುವ ‘ಹ್ಯೂಮನ್‌ ಲ್ಯೂಕೋಸೈಟ್‌ ಆಂಟಿಜನ್‌’  (ಎಚ್‌ಎಲ್‌ಎ) ಹೊಂದಾಣಿಕೆಯಾದರೆ ಕಸಿ ಮಾಡ­­­ಬ­ಹುದು. ಎಚ್‌ಎಲ್‌ಎ ಪ್ರತಿಜನಕ (ಆಂಟಿ­ಜನ್‌)ಗಳನ್ನು ಉತ್ಪಾದಿಸುತ್ತವೆ. ಒಂದು ವೇಳೆ ಕಸಿ ವೇಳೆಯಲ್ಲಿ ಅಸ್ಥಿಮಜ್ಜೆ ಹೊಂದಾಣಿಕೆಯಾಗ­ದಿ­ದ್ದರೆ ಪ್ರತಿಜನಕಗಳ ನಡುವೆ ಹೋರಾಟವೇ ನಡೆ­ಯು­ತ್ತದೆ. ಇದೇ ಕಾರಣದಿಂದ ಎಚ್‌ಎಲ್‌ಎ­ಗಳ ಹೊಂದಾಣಿಕೆ ಅಗತ್ಯ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಎಚ್‌ಎಲ್‌ಎ ಅನ್ನು ೧೨ ಬಗೆಯಲ್ಲಿ ಹೊಂದಾಣಿಕೆ ಮಾಡುವ ವಿಧಾನ ಅನುಸರಿಸಲಾಗುತ್ತಿದೆ. ಇದೇ ವಿಧಾನ­­ವನ್ನು ನಾವು ಅನುಸರಿಸುತ್ತೇವೆ. ಹೆಚ್ಚು ಹೊಂದಾ­ಣಿ­ಕೆಯಾದಷ್ಟು ಕಸಿ ಯಶಸ್ವಿಯಾಗು­ತ್ತದೆ’ ಎಂದು ಬಿಎಂಸಿಡಿಟಿ ಅಸ್ಥಿಮಜ್ಜೆ ನೋಂದಣಿ ಕಾರ್ಯ­ಕ್ರಮದ ಅಧ್ಯಕ್ಷ ಡಾ.ಕೆ.ಲಕ್ಷ್ಮಣ್‌ ತಿಳಿಸಿದರು.

ಅಸ್ಥಿಮಜ್ಜೆ ನೋಂದಣಿ ಭಾರತದಲ್ಲಿ ಇಲ್ಲವೇ ಇಲ್ಲ ಎಂದೇನಲ್ಲ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಎರಡು ದಶಕದ ಹಿಂದೆಯೇ ದಾನಿಗಳ ನೋಂದಣಿಯನ್ನು ಆರಂಭಿಸುವಂತೆ ಕರೆ ನೀಡಿತ್ತು. ಇದರ ಅನ್ವಯ ಚೆನ್ನೈನ ‘ದತ್ರಿ’ ಎನ್ನುವ ಸಂಸ್ಥೆಯ ಬಳಿ ೭೦ ಸಾವಿರ ನೋಂದಾಯಿತ ದಾನಿಗಳಿದ್ದಾರೆ. ಇದೇ ರೀತಿ­ಯಲ್ಲಿ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯ ಬಳಿ ೨೦ ಸಾವಿರ ದಾನಿಗಳ ಪಟ್ಟಿಯಿದೆ.

ಭಾರತದ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆ. ಇದೇ ಕಾರಣದಿಂದ ಬಿಎಂಸಿಡಿಟಿ ದಾನಿಗಳ ನೋಂದಣಿ ಆರಂಭಿಸಿದೆ. ಈ ವರ್ಷವೇ ೧೦ ಸಾವಿರ ದಾನಿಗಳ ಹೆಸರನ್ನು ನೋಂದಣಿ ಮಾಡುವ ಗುರಿ ಇರಿಸಿಕೊಂಡಿದೆ. ವಿಶ್ವದಾದ್ಯಂತ ಸುಮಾರು ೫೦ ಸಂಸ್ಥೆಗಳಲ್ಲಿ ೧೮.೫ ದಶಲಕ್ಷ ಅಸ್ಥಿಮಜ್ಜೆ ದಾನಿಗಳು ತಮ್ಮ ಹೆಸರನ್ನು ನೋಂದಾ­ಯಿ­ಸಿದ್ದಾರೆ. ಈ ಪಟ್ಟಿಯಲ್ಲಿ ಭಾರತೀಯರ ಸಂಖ್ಯೆ ಕೇವಲ ಶೇ ೨ರಷ್ಟು ಮಾತ್ರ. ಸಂಪರ್ಕಕ್ಕೆ: ೦೮೦ ೨೬೭೦೩೨೦೨, bmcbmr@gmail.com ಮಾಹಿತಿಗೆ: bonemarrowregistry.co.in

ಧನಸಹಾಯ ಮಾಡಬಹುದು: ಯೋಜನೆಯ ಈ ವರ್ಷದ ವೆಚ್ಚ ಐದು ಕೋಟಿ ರೂಪಾಯಿ ಆಗಬ­ಹುದು ಎಂದು ಟ್ರಸ್ಟ್‌ ಅಂದಾಜಿಸಿದೆ. ಸಾರ್ವ­ಜನಿಕರು ಸಹ ದಾನ ಮಾಡಬಹುದು. ಇದಕ್ಕೆ ಆದಾಯ ತೆರಿಗೆ ವಿನಾಯ್ತಿಯನ್ನು ೮೦ ಜಿ ಅಡಿಯಲ್ಲಿ ಪಡೆಯಬಹುದು.
ಬಿಎಂಸಿಡಿಟಿ ಬೋನ್‌ ಮ್ಯಾರೋ ರಿಜಿಸ್ಟ್ರಿ– ಖಾತೆ ಸಂಖ್ಯೆ: ೩೩೫೪೨೨೨೧೯೧೭ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೋಟೆ ಶಾಖೆ, ಬೆಂಗ­ಳೂರು ಐಎಫ್‌ಎಸ್‌ಸಿ ಕೋಡ್‌:  SBIN೦೦೦೭೪೮೪

ಉಚಿತ ಪರೀಕ್ಷೆ
ಒಂದು ಎಚ್‌ಎಲ್‌ಎ ಪರೀಕ್ಷೆಗೆ ಹತ್ತು ಸಾವಿರ ರೂಪಾಯಿಗೂ ಹೆಚ್ಚು ವೆಚ್ಚವಾಗು­ತ್ತದೆ. ಆದರೆ ಶೃಂಗೇರಿ ಶಾರದಾಪೀಠದಿಂದ ಧನ ಸಹಾಯ ಪಡೆದಿರುವ ಬೆಂಗಳೂರಿನ ಶಂಕರ­ಪುರದ ಡಾ.ಕೆ.ಎನ್‌.ಶ್ರೀಧರ್‌ ನೇತೃತ್ವದ ಕ್ಯಾನ್ಸೈಟ್‌ ಟೆಕ್ನಾಲಜೀಸ್‌ ಕೇವಲ ₨ ೨,೫೦೦ ವೆಚ್ಚದಲ್ಲಿ ಒಬ್ಬ ವ್ಯಕ್ತಿಗೆ ಪರೀಕ್ಷೆ ಮಾಡಿ ಎಚ್‌ಎಲ್‌ಎ ಸಮೀಕ್ಷಾ ವರದಿ ನೀಡಲು ಮುಂದೆಬಂದಿದೆ. ಈ ಪರೀಕ್ಷಾ ವೆಚ್ಚವನ್ನು ಬೆಂಗಳೂರು ವೈದ್ಯ­ಕೀಯ ಕಾಲೇಜಿನ ಅಭಿವೃದ್ಧಿ ಟ್ರಸ್ಟ್‌  ಭರಿಸಲಿದೆ ಎಂದು ಟ್ರಸ್ಟ್‌ ಅಧ್ಯಕ್ಷರಾದ ಡಾ.ಕೆ.ಎಂ.­ಶ್ರೀನಿವಾಸಗೌಡ ತಿಳಿಸಿದರು.

ಹೇಗೆ ಪರೀಕ್ಷೆ: ಅಸ್ಥಿಮಜ್ಜೆ ದಾನದಲ್ಲಿ ಎಚ್‌ಎಲ್‌ಎ ಪರೀಕ್ಷೆಗೆ ೧೮ರಿಂದ ೫೦ ವರ್ಷ-­ದೊಳಗಿನ ಆರೋಗ್ಯವಂತ ವ್ಯಕ್ತಿಗಳು ಒಳಗಾ­ಗಬ­ಹುದು. ವ್ಯಕ್ತಿಯ ಐದು ಮಿಲಿ ಲೀಟರ್‌ ರಕ್ತ­ವನ್ನು ಪಡೆದು ಈ ಪರೀಕ್ಷೆ ನಡೆಸಲಾಗುತ್ತದೆ.

ದಾನ ಮಾಡುವುದು ಹೇಗೆ
ರಕ್ತದಲ್ಲಿ ಅಸ್ಥಿಮಜ್ಜೆ ಅಲ್ಪ­ಪ್ರಮಾಣದಲ್ಲಿ ಹರಿದಾಡುತ್ತಿರುತ್ತದೆ. ದಾನದ ಸಂದರ್ಭದಲ್ಲಿ ಇದರ ಪ್ರಮಾಣವನ್ನು ಹೆಚ್ಚಿಸುವ ಪ್ರಚೋದನ­ಕಾರಿಯನ್ನು ಇಂಜೆಕ್ಷನ್‌ ರೂಪದಲ್ಲಿ ಐದು ದಿನ­ ನೀಡಲಾಗುತ್ತದೆ.

ನಂತರ ದಾನಿ­ಯನ್ನು ಕೋಶ ಬೇರ್ಪಡಿಸುವ ಯಂತ್ರದ ಸಂಪರ್ಕಕ್ಕೆ ತಂದು ಅಸ್ಥಿಮಜ್ಜೆಯ ಆಕರಕೋಶ (ಸ್ಟೆಮ್‌ ಸೆಲ್‌) ಗಳನ್ನು ಪ್ರತ್ಯೇಕಿಸಿ ರೋಗಿಗೆ ನೀಡಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.