ADVERTISEMENT

ಆತ್ಮಹತ್ಯೆ ಯತ್ನ: ಸಿಐಡಿ ತನಿಖೆಗೆ ಎಚ್‌.ಡಿ. ರೇವಣ್ಣ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 20:04 IST
Last Updated 26 ಜುಲೈ 2016, 20:04 IST

ಹಾಸನ: ಉಪವಿಭಾಗಾಧಿಕಾರಿ ವಿಜಯಾ ಆತ್ಮಹತ್ಯೆ ಯತ್ನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಸರ್ಕಾರವನ್ನು ಆಗ್ರಹಿಸಿದರು.

ಅಧಿಕಾರಿ ಆತ್ಮಹತ್ಯೆಗೂ ಮುನ್ನ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ ಅವರಿಗೆ ಕರೆ ಮಾಡಿ ಸಚಿವರು ಮತ್ತು ಅಧಿಕಾರಿಗಳ ಕಿರುಕುಳದ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಅದೇ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದೆ. ವಿರೋಧ ಪಕ್ಷದ ಶಾಸಕನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಘಟನೆ ಬಳಿಕ ಎಎಸ್‌ಪಿ ಏಕೆ ನಾಪತ್ತೆ ಆಗಬೇಕಿತ್ತು. ಅಂದೇ ಹೇಳಿಕೆಯನ್ನು ಅವರು ನಿರಾಕರಿಸಬಹುದಿತ್ತು. ಮಾಹಿತಿ ನೀಡದಂತೆ ಅವರಿಗೂ ಬೆದರಿಕೆ ಹಾಕಿರುವ ಸಾಧ್ಯತೆ ಇದೆ ಎಂದು ಹೇಳಿದರು.

ಪ್ರಕರಣ ಮುಚ್ಚಿ ಹಾಕಲು ಸಚಿವರು ಹುನ್ನಾರ ನಡೆಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಎಎಸ್‌ಪಿ ಅಲ್ಲದೇ ವಿಜಯಾ ವಿರುದ್ಧ ‘120 ಬಿ’ ಪ್ರಕರಣ ದಾಖಲಿಸಿ ಒಂದು ವರ್ಷ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಅವರು ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳ ಮೊಬೈಲ್‌ ಜಪ್ತಿ ಮಾಡುವಂತೆ ಆಗ್ರಹಿಸಿದೆ. ಆದರೆ ಮೊಬೈಲ್‌ ನಾಪತ್ತೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಘಟನೆ ನಡೆದಾಗ ಎಎಸ್‌ಪಿ ಹೇಳಿಕೆಯನ್ನು ಪಡೆದಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಒತ್ತಡ ಇದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.