ADVERTISEMENT

ಆನ್‌ಲೈನ್‌ನಲ್ಲಿ ಪ್ರವೇಶ ಮುಕ್ತಾಯ,ಉತ್ತಮ ಸ್ಪಂದನೆ

ಮೇ 12ರಿಂದ 18ರವರೆಗೆ ವಿಜಯಪುರದಲ್ಲಿ ಸೇನಾ ನೇಮಕಾತಿ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಮಂಗಳೂರು: ರಾಜ್ಯದ ಹನ್ನೊಂದು ಜಿಲ್ಲೆಗಳ ಅಭ್ಯರ್ಥಿಗಳಿಗೆ ನಡೆಯುವ ಸೇನಾ ನೇಮಕಾತಿ ರ್‍ಯಾಲಿಗೆ ಈ ವರ್ಷ ಉತ್ತಮ ಪ್ರತಿಕ್ರಿಯೆ ದೊರೆತಿದ್ದು  ಕಳೆದ ಎರಡು ವರ್ಷಗಳಿಗಿಂತ ಶೇ 40ರಷ್ಟು ಹೆಚ್ಚು ಅರ್ಜಿಗಳು ಆನ್‌ಲೈನ್‌ನಲ್ಲಿ ಬಂದಿವೆ.

ವಿಜಯಪುರದ ಸೈನಿಕ ಶಾಲೆಯಲ್ಲಿ ಮೇ 12ರಿಂದ 18ರವರೆಗೆ ಸೇನಾ ನೇಮಕಾತಿ ರ್‍ಯಾಲಿ ನಡೆಯಲಿದೆ. ಈ ವರೆಗೆ  ಆನ್‌ಲೈನಲ್ಲಿ 19,050  ಅರ್ಜಿಗಳು ಬಂದಿದ್ದು, ಬಾಗಲಕೋಟೆ ಜಿಲ್ಲೆಯಿಂದ ಅತೀ ಹೆಚ್ಚು ಅಂದರೆ 6,050 ಅರ್ಜಿ ಹಾಗೂ ವಿಜಯಪುರದಿಂದ 4,235 ಅರ್ಜಿಗಳು ಬಂದಿವೆ.

‘2015ರಲ್ಲಿ ನಡೆದ ಸೈನಿಕ ನೇಮಕಾತಿ ರ್‍ಯಾಲಿಗೆ ಸುಮಾರು 10 ಸಾವಿರ ಅರ್ಜಿಗಳು ಬಂದಿದ್ದರೆ 2016ರಲ್ಲಿ ಸುಮಾರು 12 ಸಾವಿರ ಅರ್ಜಿಗಳು ಬಂದಿದ್ದವು. ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತ್ಯುತ್ತಮ ಸ್ಪಂದನೆ ದೊರೆತಿದೆ’ ಎಂದು ಸೇನಾ ನೇಮಕಾತಿ ಅಧಿಕಾರಿ ಕರ್ನಲ್‌ ಪ್ರಶಾಂತ್‌ ಪೇಟ್‌ಕರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಹನ್ನೊಂದು ಜಿಲ್ಲೆಗಳಿಂದಲೂ ಈ ಬಾರಿ ಅರ್ಜಿಗಳು ಬಂದಿವೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಿದ್ದರಿಂದ ಹಾಗೂ ಪ್ರತಿ ಜಿಲ್ಲೆಯ ಕಾಲೇಜುಗಳಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ಈ ಬಾರಿ ಹಮ್ಮಿಕೊಂಡಿದ್ದರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎನ್ನುತ್ತಾರೆ.

ಅರ್ಜಿ ಸಲ್ಲಿಸಿದ ಎಲ್ಲರೂ http://www.joinindianarmy.nic.in  ವೆಬ್‌ಸೈಟ್‌ನಿಂದ ಪ್ರವೇಶ ಪತ್ರವನ್ನು ಮೇ 2ರ ಬಳಿಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರವೇಶ ಪತ್ರದಲ್ಲಿ ಬಾರ್‌ಕೋಡ್‌ ಇರುವುದರಿಂದ, ಅದರಲ್ಲಿ ಉಲ್ಲೇಖಿಸಿದ ದಿನವೇ ಅಭ್ಯರ್ಥಿಯು ರ್‍ಯಾಲಿಯಲ್ಲಿ ಭಾಗವಹಿಸಬೇಕು. ದಿನಾಂಕ ತಪ್ಪಿದಲ್ಲಿ ಕಂಪ್ಯೂಟರ್‌ಗಳು  ಪ್ರವೇಶ ಪತ್ರದ ಬಾರ್‌ಕೋಡನ್ನು ಸ್ವೀಕರಿಸುವುದಿಲ್ಲ. ರ್‍ಯಾಲಿಯಲ್ಲಿ ನಡೆಯುವ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಜುಲೈ 30ರಂದು ಮಂಗಳೂರಿನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

ಕಿವಿಮಾತು: ಸೈನಿಕ ನೇಮಕಾತಿ ರ್‍ಯಾಲಿ ಸಂದರ್ಭದಲ್ಲಿ ನಕಲಿ ಏಜೆಂಟ್‌ಗಳು ಅಭ್ಯರ್ಥಿಗಳನ್ನು ಮೋಸ ಮಾಡುವ ಸಂಭವ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯ ಅಂಕ ಪಟ್ಟಿಗಳ ಮೂಲ ಪ್ರತಿಯನ್ನು ಯಾರಿಗೂ ಕೊಡುವ ಅಗತ್ಯವಿಲ್ಲ. ರ್‍ಯಾಲಿಯಲ್ಲಿಯೂ ಅಧಿಕಾರಿಗಳು ಅಂಕಪಟ್ಟಿಯ ಮೂಲ ಪ್ರತಿಯನ್ನು ಕೇಳುವುದಿಲ್ಲ. ರ್‍ಯಾಲಿಗೆ ಇನ್ನು ಕೇವಲ 15 ದಿನಗಳು ಬಾಕಿ ಇರುವುದರಿಂದ 5.3 ನಿಮಿಷದಲ್ಲಿ 1.6 ಕಿಲೋಮೀಟರ್‌ ಓಡುವುದಕ್ಕಾಗಿ ತೀವ್ರ ಅಭ್ಯಾಸ ಶುರು ಮಾಡಬೇಕು. ಅಭ್ಯಾಸದಿಂದ ಮಾತ್ರ ಈ ಪರೀಕ್ಷೆಯಲ್ಲಿ ಪಾಸಾಗಬಹುದು ಎಂದು ಕರ್ನಲ್ ಪೇಟ್‌ಕರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.