ADVERTISEMENT

ಇಂದಿನಿಂದ ಕೇಂದ್ರ ಸರ್ಕಾರಿ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2014, 19:30 IST
Last Updated 11 ಫೆಬ್ರುವರಿ 2014, 19:30 IST

ಬೆಂಗಳೂರು: ‘ಏಳನೇ ವೇತನ ಆಯೋಗದ ಶಿಫಾರಸುಗಳನ್ನು 2014ರ ಜನವರಿ 1ರಿಂದಲೇ ಅನುಷ್ಠಾನಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೌಕರರು ಇದೇ 12 (ಬುಧವಾರ) ಹಾಗೂ 13 ರಂದು ಎರಡು ದಿನಗಳ ಕಾಲ ಮುಷ್ಕರ ನಡೆಸಲಿದ್ದಾರೆ.

ಇದರಿಂದಾಗಿ ಸರ್ಕಾರಿ ಇಲಾಖೆಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಮುಷ್ಕರದಲ್ಲಿ ಅಂಚೆ ಇಲಾಖೆ, ಲೆಕ್ಕಪರಿಶೋಧನಾ ಇಲಾಖೆ, ಆದಾಯ ತೆರಿಗೆ, ಅಂತರ್ಜಲ ಮಂಡಳಿ, ಭಾರತೀಯ ಸರ್ವೇಕ್ಷಣಾ ಇಲಾಖೆ, ಕೇಂದ್ರ ಅಬಕಾರಿ, ಜನಗಣತಿ ಸೇರಿದಂತೆ  ಕೇಂದ್ರ ಸರ್ಕಾರದ ವ್ಯಾಪ್ತಿ ಯಲ್ಲಿರುವ ಒಟ್ಟು 40 ಇಲಾಖೆಗಳ ನೌಕರರು ಪಾಲ್ಗೊಳ್ಳಲಿದ್ದಾರೆ.

‘7ನೇ ವೇತನ ಆಯೋಗದ ಶಿಫಾರಸು­ಗಳನ್ನು 2016ರಿಂದ ಜಾರಿಗೊಳಿಸು­ವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಬೆಲೆ ಏರಿಕೆಯಿಂದಾಗಿ ಆರ್ಥಿಕ ಹೊರೆ ಹೆಚ್ಚಾಗಿದೆ. ವೇತನ ಪರಿಷ್ಕರಣೆ ಹಾಗೂ ಸಂಬಳ ದೊಂದಿಗೆ ತುಟ್ಟಿಭತ್ಯೆಯನ್ನು ವಿಲೀನಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರಿ ನೌಕರರ ಮತ್ತು ಕೆಲಸಗಾರರ ಸಮನ್ವಯ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಸ್‌.ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತೀಯ ಜೀವ ವಿಮಾ ನಿಗಮ ಹಾಗೂ ಬ್ಯಾಂಕುಗಳಲ್ಲಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. ಇದೇ ನೀತಿಯನ್ನು  ಕೇಂದ್ರ ಸರ್ಕಾರದ ನೌಕರರಿಗೂ ಅನ್ವಯಿಸಬೇಕು’ ಎಂದು ತಿಳಿಸಿದರು.

‘ಎರಡು ದಿನಗಳ ಕಾಲ ಮುಷ್ಕರ ನಡೆಯಲಿದ್ದು, ಕಚೇರಿಗೆ ಬೀಗ ಹಾಕಲಿದ್ದೇವೆ. ಬೇಡಿಕೆ ಈಡೇರದಿದ್ದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾಗಿ ಪ್ರತಿಭಟನೆ ಹಮ್ಮಿಕೊಳ್ಳ­ಲಾಗುವುದು’ ಎಂದು ಎಚ್ಚರಿಸಿದರು.

ಬೇಡಿಕೆಗಳೇನು

*ಎಲ್ಲರಿಗೂ ಐದು ಹಂತದ ಬಡ್ತಿ ನೀಡಬೇಕು.
*ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ದೊರಕುವಂತೆ ಮಾಡಬೇಕು
*ಕಾರ್ಮಿಕ ಸಂಘಟನೆಗಳನ್ನು ಬಲಿಪಶು ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು.
*ಪ್ರತಿಭಟನಾ   ಹಕ್ಕು ಮೊಟಕುಗೊಳಿಸಬಾರದು.
*ಗುತ್ತಿಗೆ ಆಧಾರದ ನೇಮಕ ಹಾಗೂ ಖಾಸಗೀಕರಣಕ್ಕೆ ಅವಕಾಶ ನೀಡಬಾರದು.
*ಹೆಚ್ಚುವರಿ ಅವಧಿ ಕೆಲಸ, ರಾತ್ರಿ ಪಾಳಿ ಸೇರಿ­ದಂತೆ ವಿವಿಧ ಭತ್ಯೆಗಳನ್ನು ಪರಿಷ್ಕರಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.