ADVERTISEMENT

ಇಂದು ಕೊಪ್ಪದ ಅಂತ್ಯಕ್ರಿಯೆ

ಫಲಿಸದ ಪ್ರಾರ್ಥನೆ *ಸಿಯಾಚಿನ್‌ನಲ್ಲಿ ಗೆದ್ದು ಸಾವಿಗೆ ಸೋತ ವೀರಯೋಧ * ಕಂಬನಿ ಮಿಡಿದ ದೇಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 5:59 IST
Last Updated 12 ಫೆಬ್ರುವರಿ 2016, 5:59 IST
ರಾಷ್ಟ್ರಧ್ವಜದಲ್ಲಿ ಸುತ್ತಿದ ಶವ ಪೆಟ್ಟಿಗೆಯಲ್ಲಿ ಹನುಮಂತಪ್ಪ ಅವರ ಪಾರ್ಥಿವ ಶವವನ್ನು ದೆಹಲಿಯ ಬ್ರಾರ್‌ ಚೌಕ್‌ಗೆ ತರಲಾಯಿತು. ಸಚಿವ ಮನೋಹರ್‌ ಪರಿಕ್ಕರ್‌ ಇದ್ದರು
ರಾಷ್ಟ್ರಧ್ವಜದಲ್ಲಿ ಸುತ್ತಿದ ಶವ ಪೆಟ್ಟಿಗೆಯಲ್ಲಿ ಹನುಮಂತಪ್ಪ ಅವರ ಪಾರ್ಥಿವ ಶವವನ್ನು ದೆಹಲಿಯ ಬ್ರಾರ್‌ ಚೌಕ್‌ಗೆ ತರಲಾಯಿತು. ಸಚಿವ ಮನೋಹರ್‌ ಪರಿಕ್ಕರ್‌ ಇದ್ದರು   

ನವದೆಹಲಿ/ ಹುಬ್ಬಳ್ಳಿ: ವೀರ ಯೋಧ ಬದುಕಿ ಬರಲಿ ಎಂಬ ಇಡೀ ದೇಶದ ಪ್ರಾರ್ಥನೆ ಫಲಿಸದೇ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ ಗುರುವಾರ ಬೆಳಿಗ್ಗೆ 11.45ಕ್ಕೆ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಮೃತಪಟ್ಟರು.

ಸಕಲ ಸರ್ಕಾರಿ ಗೌರವಗಳೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ನಂತರ ರಾತ್ರಿ 10.20ರ ಸುಮಾರಿಗೆ ವಾಯುಪಡೆ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಹುಬ್ಬಳ್ಳಿಗೆ ತರಲಾಯಿತು. ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಹಾಜರಿದ್ದರು.

ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಅವರ ಹುಟ್ಟೂರು ಕುಂದಗೋಳ ತಾಲ್ಲೂಕಿನ ಬೆಟದೂರಿನ ಗ್ರಾಮ ಪಂಚಾಯ್ತಿ ಕಚೇರಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಜಾಗದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಗ್ರಾಮದ ಹೊರವಲಯದಲ್ಲಿರುವ ನಡೂರಮಠ ಪ್ರೌಢಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ.

ಜಗತ್ತಿನ ಅತ್ಯಂತ ಎತ್ತರದ ಮತ್ತು ಅತ್ಯಂತ ಅಪಾಯಕಾರಿ ಯುದ್ಧಭೂಮಿ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಹಿಮಪಾತಕ್ಕೆ ಒಳಗಾಗಿ ಆರು ದಿನಗಳ ಕಾಲ 30 ಅಡಿ ಹಿಮರಾಶಿಯ ಅಡಿಯಲ್ಲಿ ಜೀವ ಹಿಡಿದುಕೊಂಡಿದ್ದ ಧೀರನನ್ನು ಬದುಕಿಸುವ  ವೈದ್ಯರ ಯತ್ನ ಯಶಸ್ವಿಯಾಗಲಿಲ್ಲ.

ಪ್ರಧಾನಿ ಶೋಕ: ಇಡೀ ದೇಶದ ದುಃಖವನ್ನು ಸೂಚಿಸುವಂತೆ ‘ನಿಮ್ಮಲ್ಲಿನ ಯೋಧ ಸದಾ ಅಮರ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಅವರು ನಮ್ಮನ್ನು ದುಃಖದಲ್ಲಿ ಮುಳುಗಿಸಿದ್ದಾರೆ. ನಮ್ಮ ಮನಸ್ಸು ಶೋಕದಲ್ಲಿ ಮುಳುಗಿದೆ. ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಅವರಿಗೆ ಶಾಂತಿ ಲಭಿಸಲಿ. ನಿಮ್ಮಲ್ಲಿನ ಯೋಧ ಅಮರ. ನಿಮ್ಮಂತಹ ಹುತಾತ್ಮರು ದೇಶಕ್ಕೆ ಸಲ್ಲಿಸಿದ ಸೇವೆ ನಮ್ಮ ಹೆಮ್ಮೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ತ್ರಿವರ್ಣ ಧ್ವಜ ಹೊದಿಸಿ ಕೊಪ್ಪದ ಅವರ ಮೃತ ದೇಹವನ್ನು ದೆಹಲಿಯ ಬ್ರಾರ್‌ ಚೌಕದಲ್ಲಿ ಇರಿಸಲಾಗಿತ್ತು. ರಕ್ಷಣಾ ಸಚಿವ ಮನೋಹರ ಪರಿಕ್ಕರ್‌, ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಸೇನೆಯ ಹಲವು ಅಧಿಕಾರಿಗಳು ಹೂಗುಚ್ಛ ಇರಿಸಿ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಕೊಪ್ಪದ ಅವರ ಪತ್ನಿ ಮಹಾದೇವಿ, ಎರಡು ವರ್ಷದ ಮಗಳು ನೇತ್ರಾ ಮತ್ತು ಕುಟುಂಬದ ಸದಸ್ಯರು ಅಲ್ಲಿ ಇದ್ದರು.

‘ವೀರ ಯೋಧನನ್ನು ಬದುಕಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇವೆ. ಆದರೆ ಗುರುವಾರ ಬೆಳಿಗ್ಗೆ ಅವರ ರಕ್ತದೊತ್ತಡ ಕುಸಿಯಿತು. ಅವರು ಹೃದಯಾಘಾತಕ್ಕೆ ಒಳಗಾದರು’ ಎಂದು ಸೇನಾ ಆಸ್ಪತ್ರೆಯ ನಿರ್ದೇಶಕ ಲೆ. ಜ. ಎಸ್‌. ಡಿ. ದುಹಾನ್‌ ತಿಳಿಸಿದ್ದಾರೆ.

ಪರಿಹಾರ ಘೋಷಣೆ (ಹುಬ್ಬಳ್ಳಿ ವರದಿ): ಬೆಟ್ಟದೂರಿನಲ್ಲಿ ಸ್ಮಾರಕ ನಿರ್ಮಾಣ, ಯೋಧನ ಕುಟುಂಬಕ್ಕೆ ₹ 25 ಲಕ್ಷ ನಗದು, ಪತ್ನಿಗೆ ಸರ್ಕಾರಿ ನೌಕರಿ, ಬೆಟ್ಟದೂರಿನಲ್ಲಿ ನಾಲ್ಕು ಎಕರೆ ಜಮೀನು,  ಮತ್ತು ಹುಬ್ಬಳ್ಳಿಯಲ್ಲಿ ಒಂದು ನಿವೇಶನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ಸಾರ್ಥಕ ಸೇವೆ
*13 ವರ್ಷಗಳ ಸೇನಾ ಸೇವೆಯಲ್ಲಿ 10 ವರ್ಷ ಕ್ಲಿಷ್ಟ ಮತ್ತು ಸವಾಲಿನ ಕೆಲಸಗಳನ್ನೇ ಮಾಡಿದ್ದರು
*2003–2006ರ ವರೆಗೆ ಕಾಶ್ಮೀರದ ಮಹೋರ್‌ನಲ್ಲಿ ಉಗ್ರರ ದಮನ ಕಾರ್ಯಾಚರಣೆಯಲ್ಲಿದ್ದರು
*2008–10ರವರೆಗೆ ಸ್ವಯಂ ಪ್ರೇರಣೆಯಿಂದ ರಾಷ್ಟ್ರೀಯ ರೈಫಲ್ಸ್‌ನ ಭಾಗವಾಗಿ ಮತ್ತೆ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು
*ಉಗ್ರರ ವಿರುದ್ಧದ ಹೋರಾಟದಲ್ಲಿ ಅಪಾರ ಸ್ಥೈರ್ಯ ಪ್ರದರ್ಶಿಸಿದ್ದರು
*2010–12ರ ಅವಧಿಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲಿ ಎನ್‌ಡಿಎಫ್‌ಬಿ ಮತ್ತು ಉಲ್ಫಾ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
*ಕಳೆದ ಆಗಸ್ಟ್‌ನಲ್ಲಿ ಸಿಯಾಚಿನ್‌ಗೆ ನಿಯೋಜನೆ. ಡಿಸೆಂಬರ್‌ನಲ್ಲಿ 19,600 ಅಡಿ ಎತ್ತರದ ಸೋನಮ್‌ ಕಾವಲು ಠಾಣೆಗೆ ನಿಯೋಜನೆ. ಅಲ್ಲಿನ ಕನಿಷ್ಠ ಉಷ್ಣಾಂಶ –40 ಡಿಗ್ರಿಗಿಂತಲೂ ಕಡಿಮೆ, ಗಾಳಿಯ ವೇಗ ಗಂಟೆಗೆ 100 ಕಿ.ಮೀ.ಗೂ ಹೆಚ್ಚು
*ಸೋನಮ್‌ ಪ್ರದೇಶದಲ್ಲಿ ಮಂಜಿನ ಅಡಿಯಿಂದ ಮೇಲೆತ್ತುವಾಗ ಕೊಪ್ಪದ ಅವರಿಗೆ ಪ್ರಜ್ಞೆ ಇತ್ತು.

ADVERTISEMENT

ಇನ್ನಿಬ್ಬರ ದೇಹ ಸಿಯಾಚಿನ್‌ನಲ್ಲಿ: ರಾಜ್ಯದ ಮತ್ತಿಬ್ಬರು ಯೋಧರು ಸಿಯಾಚಿನ್‌ನಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳು ಇನ್ನೂ ಬಂದಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ತಿಳಿಸಿದರು.

ಹಾಸನದ ನಾಗೇಶ್‌ ಮತ್ತು ಎಚ್‌.ಡಿ. ಕೋಟೆಯ ಮಹೇಶ ಅವರ ಮೃತ ದೇಹಗಳನ್ನು ಹವಾಮಾನ ವೈಪರಿತ್ಯದಿಂದಾಗಿ ಸಿಯಾಚಿನ್‌ನಿಂದಲೇ ತರಲು ಆಗುತ್ತಿಲ್ಲ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ ಎಂದು ವಿವರಿಸಿದರು.

ವಿದೇಶಿ ಪತ್ರಿಕೆಗಳಲ್ಲಿ...
ಹುಬ್ಬಳ್ಳಿ:
ಇಂದಿರಾ ಗಾಂಧಿ ಅವರ ಸಾವಿನ ಸುದ್ದಿ ಯನ್ನು ಭಾರತೀಯ ಮಾಧ್ಯ­ಮ­ಗಳಿಗಿಂತ ಮೊದಲು ಪ್ರಕಟಿ­ಸಿದ್ದ ಇಂಗ್ಲೆಂಡ್‌ ಮೂಲದ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (ಬಿಬಿಸಿ) ಇದೀಗ ಹನುಮಂತಪ್ಪ ಕೊಪ್ಪದ ಅವರ ಸಾವಿನ ಸುದ್ದಿಯನ್ನು ಪ್ರಸಾರ ಮಾಡುವ ಮೂಲಕ ಅಂತರ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ.

ಅಷ್ಟೇ ಏಕೆ ಅಮೆರಿಕದ ಪ್ರಮುಖ ಪತ್ರಿಕೆಗಳಾದ ‘ವಾಲ್‌ಸ್ಟ್ರೀಟ್‌ ಜರ್ನಲ್‌’, ‘ವಾಷಿಂಗ್ಟನ್‌ ಪೋಸ್ಟ್‌’, ‘ನ್ಯೂಯಾರ್ಕ್‌ ಟೈಮ್ಸ್‌’ ಸಹ ತಮ್ಮ ವೆಬ್‌ ಪುಟದಲ್ಲಿ ಬಿತ್ತರಗೊಳಿಸುವ ಮೂಲಕ ಅಮೆರಿಕ ಹಾಗೂ ಯೂರೋಪಿಯನ್‌ ರಾಷ್ಟ್ರಗಳಿಗೆ ಈ ಸುದ್ದಿಯನ್ನು ತಿಳಿಸಿವೆ.

ಫ್ರಾನ್ಸ್‌ ಮೂಲದ ‘ಏಜೆನ್ಸ್ ಫ್ರಾನ್ಸ್‌ ಪ್ರೆಸ್ಸೆ’ (ಎಎಫ್‌ಪಿ) ಸುದ್ದಿಸಂಸ್ಥೆಯು ತನ್ನ ಜಾಲದ ಮೂಲಕ ನೂರಾರು ಪತ್ರಿಕೆ, ಚಾನೆಲ್‌ಗಳಿಗೆ ಮಧ್ಯಾಹ್ನ 1 ಗಂಟೆ ವೇಳೆಗೇ ಬಾತ್ಮಿ ತಲುಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.