ADVERTISEMENT

ಇದನ್ನು ಒಳ್ಳೆಯ ಸರ್ಕಾರ ಅಂತಾರೇನ್ರಿ

ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 22:30 IST
Last Updated 27 ಜೂನ್ 2016, 22:30 IST
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಚಿವರಾದ ರೋಷನ್‌ ಬೇಗ್‌, ರಮಾನಾಥ ರೈ, ಎಚ್‌.ಕೆ. ಪಾಟೀಲ್‌, ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕಾಗೋಡು ತಿಮ್ಮಪ್ಪ ಪಾಲ್ಗೊಂಡಿದ್ದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಚಿವರಾದ ರೋಷನ್‌ ಬೇಗ್‌, ರಮಾನಾಥ ರೈ, ಎಚ್‌.ಕೆ. ಪಾಟೀಲ್‌, ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕಾಗೋಡು ತಿಮ್ಮಪ್ಪ ಪಾಲ್ಗೊಂಡಿದ್ದರು.   

ಬೆಂಗಳೂರು: ‘ನನ್ನ ಕಚೇರಿ ಪತ್ರಗಳಿಗೂ ಅಧಿಕಾರಿಗಳು ಉತ್ತರ ಕೊಡದೆ ಉದ್ಧಟತನ ತೋರುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕಿಡಿ ಕಾರಿದ್ದಾರೆ.

‘ಆಡಳಿತದ ಲೋಪದೋಷಗಳ ಬಗ್ಗೆ ಅಧಿಕಾರಿಗಳಿಂದ ವಿವರಣೆ ಕೇಳಿ 160 ಪತ್ರ ಬರೆದರೆ 19 ಪತ್ರಗಳಿಗೆ ಮಾತ್ರ ಉತ್ತರ ಬರುತ್ತದೆ. ಉಳಿದ ಪತ್ರಗಳಿಗೆ ಉತ್ತರ ಬರದೆ ಇರುವುದನ್ನು  ನೋಡಿದರೆ ಇದನ್ನು  ಸರ್ಕಾರ ಅಂತಾರೇನ್ರಿ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಆರಂಭವಾದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಓ)ಗಳ ಎರಡು ದಿನಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ  ತಮ್ಮ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದರು.

‘ಅಧಿಕಾರಿಗಳು ತಪ್ಪು ತಿದ್ದಿಕೊಂಡು ಚುರುಕಿನಿಂದ ಕೆಲಸ ಮಾಡದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. ‘ರಸ್ತೆಗಳೇ ಇಲ್ಲದ ಕಾಲದಲ್ಲಿ ಅಮಲ್ದಾರ ಹುದ್ದೆಯಲ್ಲಿದ್ದವರು ಕುದುರೆಗಳ ಮೇಲೆ ಹಳ್ಳಿಗಳನ್ನು ಸುತ್ತುತ್ತಿದ್ದರು. ಎಲ್ಲಾ ಸೌಲಭ್ಯ ನೀಡಿದರೂ ನೀವು ಹವಾನಿಯಂತ್ರಿತ ಕೊಠಡಿ ಬಿಟ್ಟು ಹೊರ ಬರುವುದಿಲ್ಲ.

ವಿದ್ಯಾರ್ಥಿನಿಲಯ, ಕಾಲೇಜು, ಶಾಲೆ, ಆಸ್ಪತ್ರೆಗಳಿಗೆ ಭೇಟಿ ನೀಡಿದರೆ ಸಮಸ್ಯೆ ಅರಿವಾಗುತ್ತದೆ. ಮೈಸೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿದಾಗ ಪೌಷ್ಟಿಕ ಆಹಾರ ನೀಡದೇ ಇರುವ ಬಗ್ಗೆ ದೂರು ಬಂತು. ಅಲ್ಲಿಯೇ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಿದ್ದೆ. ನಾನು  ಭೇಟಿ ನೀಡುವವರೆಗೆ ಜಿಲ್ಲಾಧಿಕಾರಿ, ಜಿ.ಪಂ. ಸಿಇಓ, ಸಮಾಜ ಕಲ್ಯಾಣ ಅಧಿಕಾರಿ ಹೀಗೆ ಯಾರೊಬ್ಬರೂ ಹೋಗಿರಲಿಲ್ಲ. ಇದನ್ನು ಒಳ್ಳೆಯ ಆಡಳಿತ ಎನ್ನಬೇಕೇ?’  ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಿ.ಎಂ ತವರು ಜಿಲ್ಲೆಯಲ್ಲಿ ಹೆಚ್ಚು ಅರ್ಜಿ ಬಾಕಿ: ‘ರಾಜ್ಯದಾದ್ಯಂತ ವೃದ್ಧಾಪ್ಯ ವೇತನದ 11,219, ವಿಧವಾವೇತನದ 24,283, ಅಂಗವಿಕಲ ವೇತನದ 12,666, ಮನಸ್ವಿನಿಯ 3,800 ಅರ್ಜಿಗಳು ಬಾಕಿ ಇವೆ. ಮೈಸೂರು ಜಿಲ್ಲೆಯಲ್ಲಿ 3,968 ಅರ್ಜಿಗಳು ಬಾಕಿ ಇವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ  ಸಿದ್ದರಾಮಯ್ಯ, ಒಂದು ವಾರದಲ್ಲಿ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಮಾಸಾಶನ ತಲುಪಿಸಬೇಕು’ ಎಂದು ಆದೇಶಿಸಿದರು.

‘ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ₹ 141 ಕೋಟಿ ಬಿಡುಗಡೆ ಮಾಡಿದ್ದರೂ ಈವರೆಗೆ ಕೇವಲ ₹ 28 ಕೋಟಿ ಖರ್ಚಾಗಿದೆ. ಮೈಸೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಬೀದರ್‌, ಬಳ್ಳಾರಿ, ಬಾಗಲಕೋಟೆ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ನಯಾಪೈಸೆ ಖರ್ಚು ಮಾಡಿಲ್ಲ.

ಈ ಜಿಲ್ಲೆಗಳ ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆಯೇ ಇಲ್ಲವೇ? ಇಷ್ಟು ಉದಾಸೀನ ತೋರಿದರೆ ಹೇಗೆ?’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಗದರಿದರು. ‘ಬೆಳೆನಷ್ಟ ಪರಿಹಾರದ ಮೊತ್ತ ಬಿಡುಗಡೆ ಮಾಡಿದ್ದರೂ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೈತರಿಗೆ ತಲುಪಿಸಿಲ್ಲ. ವಾರಾಂತ್ಯದೊಳಗೆ ರೈತರ ಖಾತೆಗೆ ಹಣ ತಲುಪದಿದ್ದರೆ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಾನು ಲಾಯರ್‌ ಗೊತ್ತಾ. . .?: ‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ’ ಪ್ರಗತಿ ಪರಿಶೀಲಿಸಿದ ಸಿದ್ದರಾಮಯ್ಯ, ಜಿ.ಪಂ. ಸಿಇಓಗಳಿಗೆ ಯೋಜನೆಗೆ ಆಯ್ಕೆಯಾದ ಹಳ್ಳಿಗಳ ಹೆಸರು ಹೇಳಿ, ಯಾವ ಜಿಲ್ಲೆಯಲ್ಲಿ ಎಷ್ಟು ಕಿಲೋ ಮೀಟರ್‌ ರಸ್ತೆ ನಿರ್ಮಾಣವಾಗಿದೆ ಎಂದು ಪ್ರಶ್ನಿಸಿದರು.

ಸಿಇಓಗಳು ಸಮರ್ಪಕ ಮಾಹಿತಿ ನೀಡದೇ ಇದ್ದಾಗ ಸಿಟ್ಟಾದ ಸಿದ್ದರಾಮಯ್ಯ,  ‘ನಾನು ಲಾಯರ್‌, ಪ್ರಶ್ನೆ ಕೇಳುವುದು, ಉತ್ತರ ಪಡೆಯುವುದು ಗೊತ್ತು. ತಪ್ಪು ಮಾಹಿತಿ ನೀಡಿದರೆ ಪಾಟೀ ಸವಾಲು ನಡೆಸುತ್ತೇನೆ. ನೀವು ಸಿಕ್ಕಿ ಹಾಕಿಕೊಳ್ಳುತ್ತೀರಿ. ಇಂತಹ ಕೆಲಸ ಮಾಡಬೇಡಿ’ ಎಂದು ಎಚ್ಚರಿಸಿದರು.

ಭ್ರಷ್ಟಾಚಾರ ನಿಲ್ಲಿಸಿ: ಉಪನೋಂದಣಾಧಿಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪವಾಗಿವೆ. ದುಡ್ಡು ಕೊಡದೆ ಯಾವುದೇ ಕೆಲಸ ಆಗುತ್ತಿಲ್ಲ. ಸುರೇಶ ಎಂಬ ಹೆಸರನ್ನು ಸುರೇಶ್‌ ಎಂದು ಬರೆದು, ತಿದ್ದುಪಡಿ ಮಾಡುವುದಕ್ಕೆ ಹಣ ಪಡೆಯಲಾಗುತ್ತಿದೆ. ಹಣ ಕೊಡದೇ ಇದ್ದವರನ್ನು ಅನಗತ್ಯವಾಗಿ ಕಚೇರಿ ಅಲೆದಾಡಿಸಲಾಗುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಬಾಯಿ ಮಾತಿನಲ್ಲಿ ಉಳಿದರೆ ಪ್ರಯೋಜನವಿಲ್ಲ, ವಾಸ್ತವದಲ್ಲಿ ಜಾರಿಯಾಗಬೇಕು’ ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿಸಿದರು.

ತಪ್ಪು ಮಾಹಿತಿ: ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳು ತಪ್ಪು ಮಾಹಿತಿ ನೀಡಿದಾಗ ಸಿಟ್ಟಾದ ಸಿದ್ದರಾಮಯ್ಯ, ‘ನನ್ನ ಎದುರು ಇರುವ ಮಾಹಿತಿಗೂ ನೀವು ನೀಡುತ್ತಿರುವ ಮಾಹಿತಿಗೂ ತಾಳಮೇಳವಿಲ್ಲ. ನೀವು ನೀಡಿದ ಮಾಹಿತಿ ಆಧರಿಸಿಯೇ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವರದಿ ನೀಡಿದ್ದಾರೆ. ಸಭೆಗೆ ಬರುವ ಮುನ್ನ ಸಿದ್ಧತೆ ಮಾಡಿಕೊಂಡು ಬರಬೇಕು. ಇಂತಹ ಬೇಜವಾಬ್ದಾರಿ ವರ್ತನೆ ಸಹಿಸುವುದಿಲ್ಲ’ ಎಂದೂ ಗುಡುಗಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ಸಹಕಾರ ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌, ಕೃಷಿ ಸಚಿವ ಕೃಷ್ಣ ಬೈರೇಗೌಡ, ಸಾರಿಗೆ ಸಚಿವ ರಮಾನಾಥ ರೈ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಆಹಾರ ಸಚಿವ ಯು.ಟಿ. ಖಾದರ್‌, ಪಶು ಸಂಗೋಪನೆ ಸಚಿವ ಎ. ಮಂಜು, ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್‌ ಮತ್ತಿತರರಿದ್ದರು.

ಸಾಮಾಜಿಕ ಭದ್ರತಾ ಯೋಜನೆ ಅರ್ಜಿ ವಿಲೇವಾರಿಗೆ 45 ದಿನ:  ಸಾಮಾಜಿಕ ಭದ್ರತಾ ಯೋಜನೆಯ  ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲು 60 ದಿನಗಳಿದ್ದ ಗಡುವನ್ನು 45 ದಿನಗಳಿಗೆ ಇಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದರು. ಸಾವಿರಾರು ಅರ್ಜಿಗಳು ಬಾಕಿ ಇರುವ ಹಿನ್ನೆಲೆಯಲ್ಲಿ ವಿಲೇವಾರಿ ಅವಧಿ ಮಿತಿ 30 ದಿನಕ್ಕೆ ಇಳಿಸಿ ಎಂದು ಸಚಿವರು ನೀಡಿದ ಸಲಹೆಗೆ ಸ್ಪಂದಿಸಿದ ಅವರು ಅರ್ಜಿ ಸಲ್ಲಿಸಿದ 45 ದಿನದೊಳಗೆ ಇತ್ಯರ್ಥ ಮಾಡಬೇಕು ಎಂದು ಸೂಚಿಸಿದರು.

ಲೆಕ್ಕ ಬರಲ್ವೇನಮ್ಮಾ. .
‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯ ಕುರಿತು ಸಭೆಗೆ ತಪ್ಪು ಮಾಹಿತಿ ನೀಡಿದ ಪಂಚಾಯತ್‌ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಲೆಕ್ಕ ಬರಲ್ವೇನಮ್ಮಾ. ಮಾಹಿತಿ ಕೇಳಿದರೆ ನಿಮ್ಮ ಕಚೇರಿ ಕಡೆ ಕೈತೋರಿಸುತ್ತೀರಿ. ಅವರನ್ನೆಲ್ಲಾ ಇಲ್ಲಿ ಕರೆದು ವಿವರ ಪಡೆಯಲಿಕ್ಕೆ ಆಗುತ್ತದೆಯೇ? ಸಭೆಗೆ ಬರುವ ಮುನ್ನ ಸರಿಯಾದ ಮಾಹಿತಿ ತರಬೇಕಲ್ಲವೇ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT