ADVERTISEMENT

ಇಬ್ಬರು ಸಾವು; 8 ಮಂದಿಗೆ ಗಾಯ

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಅಪಘಾತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 7:05 IST
Last Updated 26 ಜುಲೈ 2016, 7:05 IST
ಬೆಂಗಳೂರು–ಮೈಸೂರು ಹೆದ್ದಾರಿಯ ರಸ್ತೆ ವಿಭಜಕ ಏರಿ ಅಪಘಾತಕ್ಕೆ ಈಡಾದ ಕಾರು
ಬೆಂಗಳೂರು–ಮೈಸೂರು ಹೆದ್ದಾರಿಯ ರಸ್ತೆ ವಿಭಜಕ ಏರಿ ಅಪಘಾತಕ್ಕೆ ಈಡಾದ ಕಾರು   

ರಾಮನಗರ: ಕಾರುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಎಂಟು ಮಂದಿ ಗಾಯಗೊಂಡ ಘಟನೆ ನಗರದ ಹೊರವಲಯದಲ್ಲಿರುವ ಮಧುರಾ ಗಾರ್ಮೆಂಟ್ಸ್‌ ಕಾರ್ಖಾನೆ ಎದುರು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.


ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಅಗ್ರಹಾರ ಬಡಾವಣೆಯ ನಿವಾಸಿ ಬಸವಯ್ಯ (65) ಹಾಗೂ ಅವರ ಅಳಿಯ ಸೋಮಶೇಖರ್‌ (40) ಮೃತರು. ಅವರ ಮಗಳು ಹಾಗೂ ಏಳು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆ ಹಾಗೂ ನಗರದ ರೋಟರಿ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ನಾಲ್ವರು ಸೇರಿದಂತೆ ಒಟ್ಟು ಆರು ಮಂದಿ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಉಳಿದಂತೆ ಟಾಟಾ ಇಂಡಿಕಾ ಹಾಗೂ ಹೊಂಡ ಸಿವಿಕ್‌ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಆರು ಜನರಿಗೆ ಗಾಯಗಳಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ 9ರ ಸುಮಾರಿಗೆ ಬಸವಯ್ಯ ಅವರು ತಮ್ಮ ಕುಟುಂಬದೊಡನೆ ಬೆಂಗಳೂರು ಕಡೆಗೆ ಸ್ವಿಫ್ಟ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅದೇ ಹಾದಿಯಲ್ಲಿ ಸಾಗುತ್ತಿದ್ದ ಟಾಟಾ ಇಂಡಿಕಾ ಕಾರಿನ ಚಾಲಕ ದಿಢೀರನೆ ಎಡಕ್ಕೆ ನುಗ್ಗಿದ ಕಾರಣ ಸ್ವಿಫ್ಟ್‌ ಕಾರಿಗೆ ತಗುಲಿದೆ ಎನ್ನಲಾಗಿದೆ. ಹೀಗಾಗಿ ಈ ಕಾರಿನ ಚಾಲಕ ಬಲಬದಿಗೆ ಕಾರು ಹೊರಳಿಸಿದ್ದಾರೆ. ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕ ದಾಟಿ ಎದುರಿಗಿನ ರಸ್ತೆಗೆ ನುಗ್ಗಿದೆ. ಆ ಸಂದರ್ಭ ಬೆಂಗಳೂರು ಕಡೆಯಿಂದ ಬರುತ್ತಿದ್ದ ಹೊಂಡಾ ಸಿವಿಕ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಪೂರ್ತಿ ಛಿದ್ರಗೊಂಡಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು.

ಶವಗಳನ್ನು ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆಂದು ಇಡಲಾಗಿದೆ.  ರಾಮನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರಸ್ತೆ ವಿಭಜಕ ತೀರ ಚಿಕ್ಕದಿರುವ ಕಾರಣ ವಾಹನಗಳು ಅವುಗಳನ್ನು ಏರಿ, ಎದುರಿಗೆ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಕುರಿತು ‘ಪ್ರಜಾವಾಣಿ’ ಭಾನುವಾರದ ಸಂಚಿಕೆಯಲ್ಲಿ ವಿಸ್ತ್ರೃತ ವರದಿ ಪ್ರಕಟಿಸಿತ್ತು. 
 

ಗಾಯಾಳುವಿನ ಮಾಂಗಲ್ಯ ಸರ ಕಳವು
ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ಮಾಂಗಲ್ಯ ಸರ ಕಳವಾದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ತಮ್ಮ ಚಿನ್ನದ ಸರ ಕಳವಾಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿದರು. ದುಷ್ಕರ್ಮಿಗಳು ಸಹಾಯ ಮಾಡುವ ನೆಪದಲ್ಲಿ ಸರ ಕಿತ್ತುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.