ADVERTISEMENT

ಈರುಳ್ಳಿ ಹಾನಿಗೆ ಪರಿಹಾರ

ಹೆಕ್ಟೇರ್‌ಗೆ ರೂ 9ಸಾವಿರ: ಸಂಪುಟ ಉಪಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:36 IST
Last Updated 31 ಅಕ್ಟೋಬರ್ 2014, 19:36 IST

ಬೆಂಗಳೂರು: ಬೆಳೆ ಹಾನಿ ಮತ್ತು ಬೆಲೆ ಕುಸಿತದಿಂದ ಸಮಸ್ಯೆಗೆ ಸಿಲುಕಿರುವ ಈರುಳ್ಳಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ರೂ 9 ಸಾವಿರ ಪರಿಹಾರ ನೀಡುವಂತೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿಗದಿಗೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಪತ್ರ­ಕರ್ತರ ಜೊತೆ ಮಾತನಾಡಿದ ಉಪ ಸಮಿತಿ ಅಧ್ಯಕ್ಷರೂ ಆಗಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ, ‘ಅತಿವೃಷ್ಟಿ­ಯಿಂದ ಈರುಳ್ಳಿ ಬೆಳೆಗೆ ಹಾನಿಯಾ­ಗಿದ್ದು, ಗುಣಮಟ್ಟ ಕುಸಿದಿದೆ. ಇದೇ ವೇಳೆ ಬೆಲೆಯೂ ನೆಲಕಚ್ಚಿದೆ. ಹಿಂದೆ ಹಾನಿಗೊಳಗಾಗುವ ಪ್ರತಿ ಹೆಕ್ಟೇರ್‌ಗೆ ರೂ 4,500 ಪರಿಹಾರ ನೀಡಲಾಗುತ್ತಿತ್ತು. ಅದನ್ನು ದುಪ್ಪಟ್ಟು ಮಾಡುವಂತೆ ಉಪ ಸಮಿತಿ ಶಿಫಾರಸು ಮಾಡಿದೆ’ ಎಂದರು.

ಧಾರವಾಡ, ದಾವಣಗೆರೆ, ಚಿತ್ರ­ದುರ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಗೆ ಹೆಚ್ಚು ಹಾನಿ ಸಂಭ­ವಿಸಿದೆ. ಈ ಬಗ್ಗೆ ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಹುತೇಕ ಬೆಳೆಗಾರರು ಬೆಳೆ ವಿಮೆ ನೋಂದಣಿ ಮಾಡಿಸಿಲ್ಲ. ಆದ್ದರಿಂದ ಸರ್ಕಾರ ಅವರ ನೆರವಿಗೆ ಧಾವಿಸಬೇಕಾಗಿರುವುದು ಅನಿವಾರ್ಯ ಎಂದು ಹೇಳಿದರು.

ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀ­ದಿ­ಸುವಂತೆ ರೈತರು ಮನವಿ ಮಾಡಿ­ದ್ದರು. ಆದರೆ, 2011–12ರಲ್ಲಿ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀ­ದಿ­ಸಿದಾಗ ಸರ್ಕಾರಕ್ಕೆ ರೂ 50 ಕೋಟಿ­ಯಷ್ಟು ನಷ್ಟ ಆಗಿತ್ತು. ಈಗ ಮತ್ತೆ ನಷ್ಟ ಆಗಬಾರದು ಎಂಬ ಕಾರಣಕ್ಕೆ ಪರಿಹಾರ ವಿತರಣೆಗೆ ಶಿಫಾರಸು ಮಾಡಲಾಗಿದೆ ಎಂದರು. ವಾಡಿಕೆಯಂತೆ 83,408 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾ ಗುತ್ತಿತ್ತು. ಈ ವರ್ಷ 85,046 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. 10.43 ಲಕ್ಷ ಟನ್‌ ಇಳುವರಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಖರೀದಿಗೆ ಸಿದ್ಧತೆ: ರಾಜ್ಯದ ವಿವಿಧೆಡೆ ಮೆಕ್ಕೆ ಜೋಳದ ಕಟಾವು ಆರಂಭ ವಾಗಿದೆ.  ಉಗ್ರಾಣಗಳಲ್ಲಿ ದಾಸ್ತಾನು ಮಾಡಿದ್ದ ಮೆಕ್ಕೆ ಜೋಳವನ್ನು ಹರಾಜಿನ ಮೂಲಕ ಮಾರಾಟ ಮಾಡಿದ್ದು, ಅದು ಸಾಗಣೆ ಆದ ತಕ್ಷಣ ಖರೀದಿ ಆರಂಭವಾಗಲಿದೆ ಎಂದು ತಿಳಿಸಿದರು.
ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ರೂ 1,310ರ ದರದಲ್ಲಿ ಮೆಕ್ಕೆ ಜೋಳ ಖರೀದಿಸಲಾಗಿತ್ತು. ಅದನ್ನು ಹರಾಜಿನ ಮೂಲಕ ಮಾರಾಟ ಮಾಡಿದಾಗ ರೂ 800ರಿಂದ ರೂ 850ರ ದರ ದೊರೆತಿದೆ. ಇದರಿಂದ ಸರ್ಕಾರಕ್ಕೆ ನಷ್ಟ ಆಗಿದೆ. ಆದರೂ, ಈ ವರ್ಷ ಪ್ರತಿ ಕ್ವಿಂಟಲ್‌ಗೆ  ರೂ 1,350 ಬೆಂಬಲ ಬೆಲೆ ನಿಗದಿ ಮಾಡಲಾಗಿದೆ ಎಂದರು.

ತಕ್ಷಣದಿಂದಲೇ ಖರೀದಿ ಆರಂಭಿಸಿದರೆ ಈಗ ಹರಾಜಿನಲ್ಲಿ ವಿಲೇವಾರಿ ಮಾಡಿರುವ ಮೆಕ್ಕೆ ಜೋಳವನ್ನು ಮತ್ತೆ ಖರೀದಿ ಕೇಂದ್ರಕ್ಕೆ ತಂದು ಮಾರುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಅನುಮಾನ ವ್ಯಕ್ತಪಡಿಸಿದೆ. ಈ ಕಾರಣಕ್ಕಾಗಿ ಎರಡು ತಿಂಗಳ ಬಳಿಕ ಖರೀದಿ ಆರಂಭಿಸುವಂತೆ ಸೂಚಿಸಿ ಬುಧವಾರ ಪತ್ರ ಬರೆದಿದೆ. ಒಂದು ತಿಂಗಳ ಬಳಿಕ ಖರೀದಿ ಆರಂಭಕ್ಕೆ ಅನುಮತಿ ಕೋರಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT