ADVERTISEMENT

ಉನ್ನತ ಶಿಕ್ಷಣ ಇಲಾಖೆ ಪ್ರಸ್ತಾವಕ್ಕೆ ಕುಲಪತಿಗಳ ಆಕ್ಷೇಪ

ವಿಶ್ವವಿದ್ಯಾಲಯಗಳ ನೇಮಕಾತಿ ಅಧಿಕಾರ ಮೊಟಕು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ಬೆಂಗಳೂರು: ವಿಶ್ವವಿದ್ಯಾಲಯಗಳ  ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ನೇರ ನೇಮಕಾತಿ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ  ಕುಲಪತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೋಧಕ– ಬೋಧಕೇತರ ಸಿಬ್ಬಂದಿ ನೇಮಕ ವಿ.ವಿಗಳ ಪರಮಾಧಿಕಾರ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ನಿಯಮಾವಳಿ ಪ್ರಕಾರವೇ ನೇಮಕಾತಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಈ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ವಿವಿಧ ವಿ.ವಿಗಳ ಕುಲಪತಿಗಳು ಅಭಿಪ್ರಾಯಪಟ್ಟಿದ್ದಾರೆ.

ವಿ.ವಿಗಳ ನೇಮಕಾತಿ ಪ್ರಕ್ರಿಯೆ ಕುಲಪತಿಗಳ ನೇತೃತ್ವದ ಆಯ್ಕೆ ಸಮಿತಿಯ ಮೂಲಕವೇ ನಡೆಯುತ್ತದೆ. ಈ ಸಮಿತಿಯಲ್ಲಿ ಸಿಂಡಿಕೇಟ್‌ ಅನುಮೋದಿಸಿದ ಮೂವರು ವಿಷಯ ತಜ್ಞರು, ಕುಲಾಧಿಪತಿಗಳಿಂದ ನೇಮಕವಾದ ತಜ್ಞರು, ವಿಭಾಗ ಮುಖ್ಯಸ್ಥರು ಹಾಗೂ ಡೀನ್‌ ಇರುತ್ತಾರೆ.

ADVERTISEMENT

ರಾಜ್ಯ ಸರ್ಕಾರ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ  ಎಲ್ಲ ವಿವಿಗಳಿಗೂ ಒಂದೇ ನೇಮಕಾತಿ ಸಮಿತಿ ರಚಿಸಲು ಸಾಧ್ಯವಿಲ್ಲ. ಏಕೆಂದರೆ, ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದ್ದು  ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರದ ಕಾನೂನು ಜಾರಿಯಲ್ಲಿರುವುದರಿಂದ ರಾಜ್ಯ ತಿದ್ದುಪಡಿಯ ಮೂಲಕ ಮತ್ತೊಂದು ಕಾನೂನು ಮಾಡಲು ಬರುವುದಿಲ್ಲ ಎಂಬ ನಿಲುವನ್ನು ಬಹುತೇಕ ಕುಲಪತಿಗಳು ಹೊಂದಿದ್ದಾರೆ.

ವಿ.ವಿಗಳು ಸ್ವಾಯತ್ತ ಸ್ಥಾನಮಾನ ಹೊಂದಿವೆ. ಸರ್ಕಾರದ ಹಸ್ತಕ್ಷೇಪದಿಂದ ಅವುಗಳ ಸ್ವಾಯತ್ತತೆಗೆ ಧಕ್ಕೆ ಆಗಲಿದೆ ಎಂದು ಅನೇಕರು ವಾದಿಸುತ್ತಿದ್ದಾರೆ.

ಸಭೆಯಲ್ಲಿ ಕುಲಪತಿಗಳು ವಿರೋಧ
ನೇರ ನೇಮಕಾತಿ ನಿಯಮಾವಳಿ ರೂಪಿಸುವ ಸಂಬಂಧ ಚರ್ಚಿಸಲು ಇತ್ತೀಚೆಗೆ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕುಲಪತಿಗಳು ಬಹಿರಂಗವಾಗಿ ಸರ್ಕಾರದ ಕ್ರಮವನ್ನು ವಿರೋಧಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಪ್ರತಿಯೊಂದು ವಿಶ್ವವಿದ್ಯಾಲಯಕ್ಕೂ ತನ್ನದೇ ವೈಶಿಷ್ಟ್ಯ ಇರುತ್ತದೆ. ಯಾವ ವಿಷಯದ ಬೋಧನೆಗೆ ಯಾವ ಅಭ್ಯರ್ಥಿ ಸೂಕ್ತ ಎಂಬುದನ್ನು ಕುಲಪತಿಗಳ ಅಧ್ಯಕ್ಷತೆಯಲ್ಲಿರುವ ನೇಮಕಾತಿ ಸಮಿತಿ ತೀರ್ಮಾನಿಸುತ್ತದೆ. ನೇರ ನೇಮಕಾತಿ ಮಾಡಿದರೆ ಅರ್ಹರು ಸಿಗದಿರುವ ಅಪಾಯವೇ ಹೆಚ್ಚು’ ಎಂದು ಕುಲಪತಿಯೊಬ್ಬರು ನೇರವಾಗಿ ಹೇಳಿದ್ದಾರೆ.

‘ಅಗತ್ಯವಾದರೆ ಸದ್ಯದ ನೇಮಕಾತಿ ಪ್ರಕ್ರಿಯೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲಿ. ಆದರೆ, ನೇಮಕಾತಿ ಅಧಿಕಾರ ಕಿತ್ತುಕೊಳ್ಳುವುದು ಸರಿಯಲ್ಲ. ಬೇರೆ ಯಾವುದೇ ರಾಜ್ಯ ಇಂತಹ ತೀರ್ಮಾನ ಕೈಗೊಳ್ಳದಿರುವಾಗ ರಾಜ್ಯ ಸರ್ಕಾರ ಮಾತ್ರ ಯಾಕೆ ಇಂತಹ ಪ್ರಯತ್ನ ನಡೆಸಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಸರ್ಕಾರದ ಈ ನಡೆ ಅನೇಕ ಅನುಮಾನಗಳಿಗೂ ಕಾರಣವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.