ADVERTISEMENT

ಉಪಚುನಾವಣೆ, 15 ಜಿಲ್ಲೆಗಳಲ್ಲಿ ತಾ.ಪಂ., ಜಿ.ಪಂ.ಗೆ ಇಂದು ಮತದಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
-ಪ್ರಜಾವಾಣಿ ಚಿತ್ರ
-ಪ್ರಜಾವಾಣಿ ಚಿತ್ರ   

ಬೆಂಗಳೂರು: ಉಪಚುನಾವಣೆ ನಡೆಯುತ್ತಿರುವ ಹೆಬ್ಬಾಳ, ಬೀದರ್‌ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ  ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯುವ 15 ಜಿಲ್ಲೆಗಳಲ್ಲಿ ಶನಿವಾರ  ಮತದಾನ ನಡೆಯಲಿದೆ.

ಮತದಾರರು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಹಕ್ಕು ಚಲಾಯಿಸಬಹುದು. ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗ ನಡೆಸಿಕೊಡಲಿದೆ. ಉಪ ಚುನಾವಣೆ ನಡೆಯುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 20, ಹಾಗೂ ಬೀದರ್‌ ಕ್ಷೇತ್ರದಲ್ಲಿ 11 ಹಾಗೂ  ದೇವದುರ್ಗ ಕ್ಷೇತ್ರದಲ್ಲಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

‘ಉಪಚುನಾವಣೆ ನಡೆಯುವ ಮೂರೂ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಕುರಿತ ಗಂಭೀರ ಪ್ರಕರಣಗಳು ದಾಖಲಾಗಿಲ್ಲ’ ಎಂದು ರಾಜ್ಯ ಮುಖ್ಯ  ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ  ತಿಳಿಸಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ.

ಈ ಜಿಲ್ಲೆಗಳ 552 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಎರಡು ಕಡೆ ಅವಿರೋಧ ಆಯ್ಕೆ ನಡೆದಿದೆ. ಮತದಾನ ನಡೆಯುವ 550 ಕ್ಷೇತ್ರಗಳಲ್ಲಿ ಒಟ್ಟು 2,087 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ಜಿಲ್ಲೆಗಳ 1,945 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪೈಕಿ 11 ಕಡೆ ಅವಿರೋಧ ಆಯ್ಕೆ ನಡೆದಿದೆ. 1,934 ಕ್ಷೇತ್ರಗಳಲ್ಲಿ 6,288 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.