ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ

ಸ್ಟೇರಿಂಗ್ ತಿರುಗಿಸಿ ಕಾರು ನಿಲ್ಲಿಸಿ ದಿಟ್ಟತನ ಮೆರೆದ ಯುವತಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:47 IST
Last Updated 23 ಆಗಸ್ಟ್ 2017, 19:47 IST
ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ
ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ   

ಮೈಸೂರು: ದೂರವಾಣಿ ಕರೆ ಮಾಡಿ ಚಿಕ್ಕಪ್ಪನಂತೆ ನಟಿಸಿದ ವ್ಯಕ್ತಿಯೊಬ್ಬ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ರಮ್ಯಾ (22) ಎಂಬುವರನ್ನು ನಂಜನಗೂಡಿಗೆ ಕರೆಸಿಕೊಂಡು ಅಪಹರಣಕ್ಕೆ ಯತ್ನಿಸಿದ್ದಾನೆ. ಚಲಿಸುತ್ತಿದ್ದ ಕಾರಿನ ಸ್ಟೇರಿಂಗ್‌ ಎಳೆದು ನಿಲ್ಲಿಸಿದ ಯುವತಿಯು ಅಪಹರಣಕಾರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದುಷ್ಕರ್ಮಿಗಳು ಪರಾರಿಯಾಗಿದ್ದು, ಕಾರನ್ನು ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಬೈಲ್‌ ಕರೆ ವಿವರದ ಆಧಾರದ ಮೇರೆಗೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾಡಹಗಲೇ ನಡೆದ ಈ ಕೃತ್ಯ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

‘ಮಂಡ್ಯದ ಸಂತೆ ಕೆಸಲಗೆರೆಯ ಪುಟ್ಟಯ್ಯ ಎಂಬುವರ ಪುತ್ರಿ ರಮ್ಯಾ, ಚಾಮರಾಜನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ. ಇವರ ಚಿಕ್ಕಪ್ಪ ಸತೀಶ್ ಎಂಬುವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಾಲಕರಾಗಿ ತುರುವೇಕರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಿಂಗಳ ಹಿಂದೆ ಕರೆ ಮಾಡಿದ ವ್ಯಕ್ತಿ ಚಿಕ್ಕಪ್ಪನಂತೆ ಪರಿಚಯ ಮಾಡಿಕೊಂಡು ಕುಶಲೋಪರಿ ವಿಚಾರಿಸಿದ್ದಾರೆ. ಧ್ವನಿ ಹೋಲಿಕೆ ಇದುದ್ದರಿಂದ ಚಿಕ್ಕಪ್ಪನೆಂದು ಯುವತಿ ನಂಬಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಮಂಗಳವಾರ ಮತ್ತೆ ಕರೆ ಮಾಡಿದ ವ್ಯಕ್ತಿ ಕರ್ತವ್ಯದ ಮೇರೆಗೆ ನಂಜನಗೂಡಿಗೆ ಬರುತ್ತಿರುವುದಾಗಿ ಹೇಳಿದ್ದಾನೆ. ಒಂದೂವರೆ ಗಂಟೆ ಬಿಡುವು ಇರುವುದರಿಂದ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಒಪ್ಪಿದ ಯುವತಿ ಬುಧವಾರ ಬೆಳಿಗ್ಗೆ ಚಾಮರಾಜನಗರದಿಂದ ನಂಜನಗೂಡಿಗೆ ಧಾವಿಸಿದ್ದರು. ಚಿಕ್ಕಪ್ಪ ಸೂಚಿಸಿದ ಶ್ರೀಕಂಠೇಶ್ವರ ದೇಗುಲ ಸಮೀಪದ ಬೈಪಾಸ್‌ ರಸ್ತೆಯಲ್ಲಿ ಬಸ್‌ ಇಳಿದು ಕರೆ ಮಾಡಿದ್ದರು. ಪರಿಚಯಸ್ಥರು ಧಾವಿಸಿ ಕರೆದುಕೊಂಡು ಬರುತ್ತಾರೆ ಎಂದು ಉಡುಗೆಯ ಬಣ್ಣದ ಮಾಹಿತಿ ಕೇಳಿದ್ದನು. ಕರೆ ಕಡಿತಗೊಂಡ ಎರಡು ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿದ 28 ವರ್ಷದ ಮಹಿಳೆ, ಚಿಕ್ಕಪ್ಪನ ಬಳಿಗೆ ಕರೆದುಕೊಂಡು ಹೋಗುವುದಾಗಿ ಕಾರು ಹತ್ತಿಸಿಕೊಂಡಿದ್ದಳು’ ಎಂದು ವಿವರಿಸಿದ್ದಾರೆ.

‘ಕಾರು ಮಹಾತ್ಮ ಗಾಂಧಿ ರಸ್ತೆಯ ಮೂಲಕ ಗುಂಡ್ಲುಪೇಟೆ ಕಡೆಗೆ ಸಾಗಿದೆ. ಮಕ್ಕಳಿಗೆ ಸಿಹಿ ತಿನಿಸು ತರುವುದಾಗಿ ಮಹಿಳೆ ಕೆಳಗೆ ಇಳಿದುಕೊಂಡಿದ್ದಾರೆ. ತಿರುವು ಪಡೆದು ಬರುವುದಾಗಿ ಹೇಳಿದ ಚಾಲಕ ವೇಗವಾಗಿ ಮುಂದಕ್ಕೆ ಸಾಗಿದ್ದಾನೆ. ಅನುಮಾನಗೊಂಡ ರಮ್ಯಾ ಚಾಲಕನನ್ನು ಪ್ರಶ್ನಿಸಿದ್ದಾರೆ. ಆಗ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ಡೋರ್‌ ಲಾಕ್‌ ಮಾಡಿದ್ದಾನೆ. ಪೊಲೀಸ್‌ ಕ್ವಾಟ್ರಸ್‌ ಬಳಿ ಸ್ಟೇರಿಂಗ್‌ ಹಿಡಿದು ಎಡಕ್ಕೆ ತಿರುಗಿಸಿದ್ದಾರೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಾದಚಾರಿ ಮಾರ್ಗ ದಾಟಿ ಪೊದೆಯಲ್ಲಿ ನಿಂತಿದೆ. ಗಾಬರಿಗೊಂಡ ಚಾಲಕ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.