ADVERTISEMENT

ಎತ್ತಿಸಿಕೊಂಡು ಕೊಳಚೆ ದಾಟಿದ ಸಿಇಒ!

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:02 IST
Last Updated 24 ಮಾರ್ಚ್ 2017, 20:02 IST
ರಾಯಚೂರು ತಾಲ್ಲೂಕು ಆತ್ಕೂರು ಗ್ರಾಮದಲ್ಲಿ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾ ರಾವ್‌ ಅವರು ಗುರುವಾರ ಎತ್ತಿಸಿಕೊಂಡು ಕೊಳಚೆ ದಾಟುತ್ತಿರುವುದು
ರಾಯಚೂರು ತಾಲ್ಲೂಕು ಆತ್ಕೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾ ರಾವ್‌ ಅವರು ಗುರುವಾರ ಎತ್ತಿಸಿಕೊಂಡು ಕೊಳಚೆ ದಾಟುತ್ತಿರುವುದು   

ರಾಯಚೂರು: ತಾಲ್ಲೂಕಿನ ಆತ್ಕೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಕೂರ್ಮಾ ರಾವ್‌ ಸ್ಥಳೀಯರಿಂದ ಎತ್ತಿಸಿಕೊಂಡು ಕೊಳಚೆ ನೀರು ದಾಟಿದ್ದು ಟೀಕೆಗೆ ಗುರಿಯಾಗಿದೆ.

ಈ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯ ಪರಿಶೀಲನೆಗೆ ಗುರುವಾರ ತೆರಳಿದ್ದರು. ಅಲ್ಲಿ ಕೊಳಚೆ ನೀರು ಇರುವುದನ್ನು ಗಮನಿಸಿ
ಓವರ್‌ಹೆಡ್‌ ಟ್ಯಾಂಕ್‌ ಬಳಿಗೆ ಹೋಗಲು ಹಿಂದೇಟು ಹಾಕಿದರು. ಆಗ ಸ್ಥಳದಲ್ಲಿದ್ದ ಗ್ರಾಮಸ್ಥರ ಪೈಕಿ ಇಬ್ಬರು ಅವರನ್ನು ಎತ್ತಿಕೊಂಡು ದಾಟಿಸಿದರು. ಹಿಂದಿರುಗುವಾಗಲೂ ಎತ್ತಿಸಿಕೊಂಡೇ ಬಂದರು.

ಆದರೆ, ಇವರೊಂದಿಗೆ ಇದ್ದ ಜಿಲ್ಲಾ ಪಂಚಾಯಿತಿ ಎಂಜಿನಿಯರುಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಕೊಳಚೆ ನೀರಿನಲ್ಲಿ ಸಾಗಿದರು.

ಈಚೆಗೆ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ಸದಸ್ಯರೆಲ್ಲರೂ  ಸಭೆಯನ್ನು ಬಹಿಷ್ಕರಿದ್ದರು. ಹೀಗಾಗಿ ಕೂರ್ಮಾರಾವ್‌ ಪರಿಶೀಲನೆಗೆ ತೆರಳಿದ್ದರು.
*
ಜನರು ಅಭಿಮಾನದಿಂದ ಎತ್ತಿಕೊಂಡು ಕೊಳಚೆ ದಾಟಿಸಿದರು. ಹೀಗೆ ಮಾಡುವುದು ಬೇಡವೆಂದು ನಾನು, ನನ್ನ ಗನ್‌ಮ್ಯಾನ್  ಹೇಳಿದೆವು. ಆದರೂ ಕೇಳಲಿಲ್ಲ
ಎಂ. ಕೂರ್ಮಾ ರಾವ್‌
ಸಿಇಒ, ಜಿ.ಪಂ. ರಾಯಚೂರು
* * *
ಸಿಇಒ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು:
‘ರಾಯಚೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಅವರನ್ನು ತಕ್ಷಣ ಅಮಾನತುಗೊಳಿಸಬೇಕು’ ಎಂದು ಜೆಡಿಎಸ್‌ನ ಮಾನಪ್ಪ ವಜ್ಜಲ್  ವಿಧಾನಸಭೆಯಲ್ಲಿ ಶುಕ್ರವಾರ ಒತ್ತಾಯಿಸಿದರು.

‘ಸಿಇಒ ಅಮಾನವೀಯವಾಗಿ ವರ್ತಿಸಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ದುರಹಂಕಾರದಿಂದ ವರ್ತಿಸಿರುವ ಈ ಅಧಿಕಾರಿ, ತಲೆತಗ್ಗಿಸುವಂಥ ಕೆಲಸ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ‘ಅಧಿಕಾರಿ ಗುಲಾಮಗಿರಿ ತೋರಿದ್ದಾರೆ. ಇಂತಹ ಅನೇಕ ಅಧಿಕಾರಿಗಳು ಇದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಪಾಠ ಕಲಿಸಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್‌ನ ಇನ್ನೊಬ್ಬ ಸದಸ್ಯ ಎನ್‌.ಎಚ್‌. ಕೋನರಡ್ಡಿ ಅವರೂ ಧ್ವನಿಗೂಡಿಸಿದರು. ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ‘ತಕ್ಷಣ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT