ADVERTISEMENT

ಎಸ್ಸೆಸ್ಸೆಲ್ಸಿ: ಶಿರಸಿಯ ವಿಶ್ವಜಿತ್‌ ನಂ 1

ಉಡುಪಿ ಪ್ರಥಮ, ಚಿಕ್ಕೋಡಿ ದ್ವಿತೀಯ, ಗದಗ ಕೊನೆ

​ಪ್ರಜಾವಾಣಿ ವಾರ್ತೆ
Published 12 ಮೇ 2015, 20:25 IST
Last Updated 12 ಮೇ 2015, 20:25 IST

ಬೆಂಗಳೂರು:  ‌ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 81.82ರಷ್ಟು  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದೊಂದು ದಾಖಲೆ. ಕಳೆದ ಸಲ  ಶೇ 81.19‌ ರಷ್ಟು ಫಲಿತಾಂಶ ಬಂದಿತ್ತು.

625 ಅಂಕಗಳ ಪೈಕಿ 623 ಅಂಕಗಳನ್ನು ಗಳಿಸಿರುವ ಶಿರಸಿಯ ಲಯನ್ಸ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ವಿಶ್ವಜಿತ್‌ ಪ್ರಕಾಶ್‌ ಹೆಗಡೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾನೆ. ಆತ ಕನ್ನಡ (99) ಮತ್ತು ಇಂಗ್ಲಿಷ್‌ (124) ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾನೆ. ಐವರು ವಿದ್ಯಾರ್ಥಿಗಳು 622 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಗಳಿಸಿದ್ದಾರೆ. 15 ವಿದ್ಯಾರ್ಥಿಗಳು 621 ಅಂಕಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಜಿಲ್ಲಾ ಸ್ಥಾನ: ಕಳೆದ ಸಲ 10ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ ಶೇ 94.37 ರಷ್ಟು ತೇರ್ಗಡೆಯೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಚಿಕ್ಕೋಡಿ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಶೇ 66.74 ರಷ್ಟು ಫಲಿತಾಂಶ ಬಂದಿರುವ ಗದಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೊಹಮ್ಮದ್‌ ಮೊಹ್ಸಿನ್‌ ಅವರು ಫಲಿತಾಂಶದ ವಿವರಗಳನ್ನು ನೀಡಿದರು.

ಬಾಲಕಿಯರದ್ದೇ ಮೇಲುಗೈ: ಎಂದಿನಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 3.97 ಲಕ್ಷ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 3.42 ಲಕ್ಷ ಮಂದಿ ಉತ್ತೀರ್ಣರಾಗುವ ಮೂಲಕ ಶೇ 86.23ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಅಂಗವಿಕಲರ ಸಾಧನೆ: ಈ ಸಾಲಿನಲ್ಲಿ 2,646 ಅಂಗವಿಕಲರು ಪರೀಕ್ಷೆಗೆ ಹಾಜರಾಗಿದ್ದರು.  ಅವರಲ್ಲಿ 1,732 ಮಂದಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಅಂಧರು ಹೆಚ್ಚಿನ ಸಾಧನೆ ಮಾಡಿದ್ದಾರೆ. 387 ಅಂಧರಲ್ಲಿ 340 ಮಂದಿ ಪಿಯು ಶಿಕ್ಷಣ ಪಡೆಯಲು ಅರ್ಹತೆ ಪಡೆದಿದ್ದಾರೆ. 40 ವರ್ಷ ಮೀರಿದ 360 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ತೇರ್ಗಡೆಗೊಂಡವರು 7 ಮಂದಿ ಮಾತ್ರ.

ಉತ್ತಮ ಫಲಿತಾಂಶ: ಈ ವರ್ಷದಿಂದ ಎಸ್ಸೆಸ್ಸೆಲ್ಸಿಗೂ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ   ಪದ್ಧತಿ (ಸಿಇಸಿ) ಅಳವಡಿಸಲಾಗಿತ್ತು ಎಂದು ಮೊಹ್ಸೀನ್‌‌ ಹೇಳಿದರು. ಈ ಸಾಲಿನ ಅಂಕಪಟ್ಟಿಯಲ್ಲಿ ಅಂಕಗಳ ಜೊತೆಗೆ ವಿದ್ಯಾರ್ಥಿಗಳು ಪಡೆದಿರುವ ಗ್ರೇಡ್‌ಗಳನ್ನೂ ನಮೂದಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಹಳ್ಳಿ ಮಕ್ಕಳೇ ಮುಂದು: ನಗರ ಪ್ರದೇಶಗಳಿಗೆ ಹೋಲಿಸಿದರೆ,  ಹಳ್ಳಿಗಾಡಿನ ಹೆಚ್ಚು  ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಗ್ರಾಮೀಣ ಭಾಗದ ಶೇ 86.48 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದ ಫಲಿತಾಂಶ ಶೇ 82.26 ರಷ್ಟು.

‘ಧೃತಿಗೆಡಬೇಡಿ’: ‘ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರು ಧೃತಿಗೆಡಬೇಕಾಗಿಲ್ಲ. ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವಕಾಶ ಇದೆ. ವಿದ್ಯಾರ್ಥಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೊಹಸ್ಸಿನ್‌ ಸಲಹೆ ನೀಡಿದರು.

ಅಂಕಿಅಂಶಗಳು
83% -ಈ ಬಾರಿಯ ತೇರ್ಗಡೆ
81% -ಕಳೆದ ವರ್ಷದ ಫಲಿತಾಂಶ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.