ADVERTISEMENT

ಕಂಬಳ: ತಡೆಯಾಜ್ಞೆ ತೆರವಿಗೆ ಹೈಕೋರ್ಟ್‌ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 19:30 IST
Last Updated 30 ಜನವರಿ 2017, 19:30 IST
ಕಂಬಳ: ತಡೆಯಾಜ್ಞೆ ತೆರವಿಗೆ ಹೈಕೋರ್ಟ್‌ ನಿರಾಕರಣೆ
ಕಂಬಳ: ತಡೆಯಾಜ್ಞೆ ತೆರವಿಗೆ ಹೈಕೋರ್ಟ್‌ ನಿರಾಕರಣೆ   

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಕ್ರೀಡೆಗೆ  ನೀಡಿರುವ ಮಧ್ಯಂತರ ತಡೆ ತೆರವುಗೊಳಿಸಲು ಹೈಕೋರ್ಟ್‌ ನಿರಾಕರಿಸಿದ್ದು, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಈ ಸಂಬಂಧ ಕಂಬಳ ಆಯೋಜನಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ಜ್ಞಾಪನಾ ಪತ್ರ ಸಲ್ಲಿಸಿದರು. ‘ಕಂಬಳ  ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದೆ ಎಂಬ ಕಾರಣಕ್ಕೆ ರಾಜ್ಯ ಸಚಿವ ಸಂಪುಟ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ– 1960’ಕ್ಕೆ ತಿದ್ದುಪಡಿ ತರಲು ಸಮ್ಮತಿಸಿದೆ. ಆದ್ದರಿಂದ ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು. ಜಲ್ಲಿಕಟ್ಟು ನಿಷೇಧ ತೆರವುಗೊಳಿಸುವ ಸುಗ್ರೀವಾಜ್ಞೆ ಕುರಿತು ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಜಲ್ಲಿಕಟ್ಟು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ (ಜ.31)  ವಿಚಾರಣೆಗೆ ಬರುವ ನಿರೀಕ್ಷೆ ಇದೆ. ಈ ಪ್ರಕರಣಕ್ಕೂ ಜಲ್ಲಿಕಟ್ಟಿಗೂ  ಸಾಮ್ಯತೆ ಇದ್ದು, ಸುಪ್ರೀಂ ಕೋರ್ಟ್‌ ತೀರ್ಪು ನೋಡಿಕೊಂಡು ಮುಂದುವರಿಯೋಣ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಇದೇ ವೇಳೆ ಮೌಖಿಕವಾಗಿ, ‘ಕೋಣಗಳು ಓಟಕ್ಕೆ ಅನುಗುಣವಾದ ದೈಹಿಕ ರಚನೆ ಹೊಂದಿಲ್ಲ’ ಎಂದೂ ನ್ಯಾಯಪೀಠವು ಹೇಳಿತು.

ಕಂಬಳ ನಿಷೇಧ ಕುರಿತಂತೆ  ಪೀಪಲ್‌ ಫಾರ್‌ ಎಥಿಕಲ್ ಟ್ರೀಟ್‌ಮೆಂಟ್‌ ಆಫ್ ಅನಿಮಲ್ಸ್‌ (ಪೆಟಾ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಇದೇ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.