ADVERTISEMENT

ಕಡಿಮೆ ಮದ್ಯ ಮಾರಿದರೆ ₹ 20 ಲಕ್ಷ ದಂಡ

ಬಿ.ಎಸ್.ಷಣ್ಮುಖಪ್ಪ
Published 4 ಜುಲೈ 2015, 19:33 IST
Last Updated 4 ಜುಲೈ 2015, 19:33 IST

ಬೆಂಗಳೂರು: ‘ಪ್ರತಿ ತಿಂಗಳೂ ಇಂತಿಷ್ಟೇ ಮದ್ಯ ಮಾರಬೇಕು ಎಂಬ ನಿಯಮ ಉಲ್ಲಂಘಿಸಿದ್ದೀರಿ’ ಎಂದು ಆರೋಪಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಇಲ್ಲಿನ ಪಾವಾ ಬಾರ್ ಅಂಡ್‌ ರೆಸ್ಟೊರೆಂಟ್‌ಗೆ ₹ 20.1 ಲಕ್ಷ ದಂಡ ವಿಧಿಸಿದ್ದಾರೆ.

‘ಕರ್ನಾಟಕ ಅಬಕಾರಿ (ದೇಶೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳ 1968ರ–14 (2)ರ ಅನ್ವಯ ಪ್ರತಿ ತಿಂಗಳೂ ನಿಗದಿಪಡಿಸಿದ ಕನಿಷ್ಠ ಪ್ರಮಾಣದ ಮದ್ಯ ಖರ್ಚು ಮಾಡಬೇಕು. ಇಲ್ಲದೇ ಹೋದರೆ ದಂಡ ವಿಧಿಸಲಾಗುವುದು ಎಂಬ ನಿಯಮದಡಿ ನೀವು ಈ ಮೊತ್ತವನ್ನು ಪಾವತಿಸಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದ್ದಾರೆ.

ಇಲ್ಲಿನ ವಿಠಲ ಮಲ್ಯ ರಸ್ತೆ  ಯು.ಬಿ. ಸಿಟಿಯಲ್ಲಿರುವ ಪಾವಾ ಬಾರ್‌ ಅಂಡ್‌ ರೆಸ್ಟೊರೆಂಟ್‌ ಮಾಲೀಕ ಮಂಜುನಾಥ್‌  ವಿ. ಜನ್ನು ಅವರಿಗೆ ಈ ಸಂಬಂಧ 2015ರ ಫೆಬ್ರುವರಿ 21ರಂದು ನೋಟಿಸ್‌ ಜಾರಿ ಮಾಡಲಾಗಿದೆ.

‘ನೀವು ಅಬಕಾರಿ ನಿಯಮಗಳ ಅನುಸಾರ 2009–10 ಹಾಗೂ 2013–14ರ ಸಾಲಿನಲ್ಲಿ ಪ್ರತಿ ತಿಂಗಳು ಎಷ್ಟು ಮದ್ಯ ಖರ್ಚು ಮಾಡಬೇಕಿತ್ತೊ ಅಷ್ಟು ಪ್ರಮಾಣದ ಮದ್ಯವನ್ನು ಖರ್ಚು ಮಾಡಿಲ್ಲ. ಆದ್ದರಿಂದ ಸರ್ಕಾರಕ್ಕೆ ₹ 20,09,800 ದಂಡ ಪಾವತಿಸಬೇಕು. ತಪ್ಪಿದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಈ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಹೈಕೋರ್ಟ್‌ನಲ್ಲಿ ಪ್ರಶ್ನೆ: ಈ ನೋಟಿಸ್‌ ಪ್ರಶ್ನಿಸಿ ಮಂಜುನಾಥ್‌ ವಿ.ಜನ್ನು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಬಾರ್ ಅಂಡ್‌ ರೆಸ್ಟೊರೆಂಟ್‌ಗಳ ಸಿಎಲ್‌–9 ಪರವಾನಗಿ ಹೊಂದಿರುವ ಒಟ್ಟು 31 ಮಾಲೀಕರು ಈಗ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಸದ್ಯ ಏಕಸದಸ್ಯ ಪೀಠದ ಮುಂದಿರುವ ಈ ಅರ್ಜಿಯ ಮಾದರಿಯಲ್ಲೇ ಇನ್ನೂ ಹಲವು ಅರ್ಜಿಗಳು ಹೈಕೋರ್ಟ್‌ ಮೆಟ್ಟಿಲು ತುಳಿದಿವೆ. ಇಂತಹ ನಿಯಮವನ್ನು ರದ್ದು ಮಾಡಬೇಕೆಂದು ಕೋರಿವೆ.
*
‘ಸರ್ಕಾರವೇ ಪುಸಲಾಯಿಸುತ್ತಿದೆ’
‘ಇಂತಿಷ್ಟು ಮದ್ಯ ಮಾರಲೇ ಬೇಕು  ಎಂಬುದು ಗ್ರಾಹಕರ ಮೇಲೆ ಹೊರಿಸುವ ಹೊರೆ. ದೇಶದ ಬೇರೆ ಯಾವ ರಾಜ್ಯದಲ್ಲೂ ಇಂತಹ ಕಾನೂನು ಇಲ್ಲ. ಇದು ರಾಜ್ಯ ಸರ್ಕಾರ ಜನರಿಗೆ ಮದ್ಯವನ್ನು ಹೆಚ್ಚು ಹೆಚ್ಚು ಕುಡಿಯುವಂತೆ ಪುಸಲಾಯಿಸುತ್ತಿರುವ ಕ್ರಮವಾಗಿದೆ’ ಎಂದು ಹೈಕೋರ್ಟ್‌ನಲ್ಲಿ ದಾವೆ ಹೂಡಿರುವ ಅರ್ಜಿದಾರರ ಪರ ವಕೀಲರಾದ ಕೆ.ವಿ.ಧನಂಜಯ ಅವರ ದೂರು. ‘ಜನರು  ಸ್ವ ಇಚ್ಛೆಯಿಂದ ಮದ್ಯಪಾನ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಹೊರತು ಈ ರೀತಿ ಕುಡಿತ ಪುಸಲಾಯಿಸುವ, ಒತ್ತಡ ಹೇರುವ ಕ್ರಮ ಸಂಪೂರ್ಣ ಕಾನೂನು ಬಾಹಿರ’ ಎಂಬುದು ಧನಂಜಯ ಅವರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.