ADVERTISEMENT

ಕನ್ನಡಿಗರ ಮೀಸಲಿಗೆ ಆಕ್ಷೇಪ

ಕಾನೂನು ಇಲಾಖೆ ಅಭಿಪ್ರಾಯ

ಹೊನಕೆರೆ ನಂಜುಂಡೇಗೌಡ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಕನ್ನಡಿಗರ ಮೀಸಲಿಗೆ ಆಕ್ಷೇಪ
ಕನ್ನಡಿಗರ ಮೀಸಲಿಗೆ ಆಕ್ಷೇಪ   

ಬೆಂಗಳೂರು: ಖಾಸಗಿ ವಲಯದ ಉದ್ದಿಮೆಗಳ ಸಿ ಹಾಗೂ ಡಿ ವೃಂದದ ನೇಮಕಾತಿಯಲ್ಲಿ ಕನ್ನಡಿಗರಿಗೆ ಶೇ 100 ರಷ್ಟು ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ನಡೆಗೆ ಕಾನೂನು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

‘ಖಾಸಗಿ ಉದ್ಯಮಗಳ ನೇಮಕಾತಿಯಲ್ಲಿ ಶೇ 100ರಷ್ಟು ಮೀಸಲಾತಿ ಒದಗಿಸುವುದು ಅಸಾಂವಿಧಾನಿಕ ನಡೆ. ಇದು 14 ಹಾಗೂ 16ನೇ ವಿಧಿಯ ಉಲ್ಲಂಘನೆ. ದೇಶದ ಜನರನ್ನು ಪ್ರದೇಶ, ಧರ್ಮ ಮತ್ತು ಜಾತಿ ಆಧಾರದಲ್ಲಿ ಪಕ್ಷಪಾತ ಮಾಡುವುದಕ್ಕೆ ಇವು ಅವಕಾಶ ಕೊಡುವುದಿಲ್ಲ’ ಎಂದು ಕಾನೂನು ಇಲಾಖೆಯು ಅಭಿಪ್ರಾಯಪಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 2017ರ ಮಾರ್ಚ್‌ 15ರಂದು ವಿಧಾನ ಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ, ಖಾಸಗಿ ವಲಯದ ಉದ್ಯಮಗಳ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಶೇ 100ರಷ್ಟು ಕನ್ನಡಿಗರಿಗೆ, ಅದರಲ್ಲಿ ಶೇ5ರಷ್ಟು ಅಂಗವಿಕಲರಿಗೆ ಮೀಸಲಿಡುವುದಾಗಿ ಘೋಷಿಸಿದ್ದಾರೆ.

ADVERTISEMENT

ಆದರೆ, ‘ಇದು ಕಾನೂನು ದೃಷ್ಟಿಯಲ್ಲಿ ಕಾರ್ಯಸಾಧುವಲ್ಲ. ಯಾರಾದರೂ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದರೆ ಬಿದ್ದು ಹೋಗುತ್ತದೆ’ ಎಂದೂ ಕಾನೂನು ಇಲಾಖೆ ಸ್ಪಷ್ಟಪಡಿಸಿದೆ.

ಕಾನೂನು ಸಚಿವಾಲಯದ ಅಭಿಪ್ರಾಯವನ್ನು ಅಡ್ವೊಕೇಟ್‌ ಜನರಲ್‌ಗೂ ಕಳುಹಿಸಿದ್ದು, ಈ ವಿಷಯದಲ್ಲಿ ಅವರ ಸಲಹೆಯನ್ನು ಕೇಳಲಾಗಿದೆ. ರಾಜ್ಯ ಸರ್ಕಾರದ ಘೋಷಣೆಯನ್ನು ಅನುಷ್ಠಾನಕ್ಕೆ ತರುವುದು ಹೇಗೆಎಂಬ ಬಗ್ಗೆ ಚರ್ಚಿಸಲು ಅಡ್ವೊಕೇಟ್‌ ಜನರಲ್‌ ಅವರು ಇದೇ 20ರಂದು ಮಧ್ಯಾಹ್ನ 2.30ಕ್ಕೆ ತುರ್ತು ಸಭೆ ಕರೆದಿದ್ದಾರೆ.

ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಸಭೆಗೆ ಬರುವಂತೆ ಸೂಚಿಸಲಾಗಿದೆ.

‘ರಾಜ್ಯ ಸರ್ಕಾರದ ಘೋಷಣೆ ಕುರಿತು ಅಂತಿಮ ಅಭಿಪ್ರಾಯಕ್ಕೆ ಬರುವ ಮುನ್ನ ಸಮಗ್ರ ಚರ್ಚೆ ನಡೆಯುವ ಅಗತ್ಯವಿದೆ’ ಎಂದು ಅಡ್ವೊಕೇಟ್‌ ಜನರಲ್‌ ಕಚೇರಿ ಕಳುಹಿಸಿರುವ ಫ್ಯಾಕ್ಸ್‌ ಸಂದೇಶದಲ್ಲಿ ವಿವರಿಸಿದೆ.

ಈ ಮಧ್ಯೆ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ರಾಜ್ಯ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಹಾಗೂ ಮಾಜಿ ಅಡ್ವೊಕೇಟ್‌ ಜನರಲ್‌ ರವಿವರ್ಮ ಕುಮಾರ್‌, ‘ಸರ್ಕಾರದ ನಿಲುವು ಅಸಾಂವಿಧಾನಿಕ’ ಎಂದು ಹೇಳಿರುವುದಾಗಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕನ್ನಡ ಪ್ರಾಧಿಕಾರದ ವಿಭಿನ್ನ ನಿಲುವು

ಮುಖ್ಯಮಂತ್ರಿ ಮಾಡಿರುವ ಘೋಷಣೆಯನ್ನು ಶತಾಯಗತಾಯ ಅನುಷ್ಠಾನ ಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಈ ಬಗ್ಗೆ ಹಿರಿಯ ಸಾಹಿತಿಗಳ ಜೊತೆ ಸಮಾಲೋಚನೆ ನಡೆಸುತ್ತಿರುವ ಪ್ರಾಧಿಕಾರವು, ‘ಸಂವಿಧಾನದ 14 ಮತ್ತು 16ನೇ ವಿಧಿಗಳು ಭಾಷೆಗೆ ಸಂಬಂಧಿಸಿದ ವಿಷಯಗಳಿಗೆ ಅನ್ವಯವಾಗುವುದಿಲ್ಲ’ ಎಂದು ಪ್ರತಿಪಾದಿಸುತ್ತಿದೆ.

‘ಬಜೆಟ್‌ನಲ್ಲಿ  ಘೋಷಣೆ ಮಾಡುವ ಮೊದಲೇ ಮುಖ್ಯಮಂತ್ರಿ, ಕಾನೂನು ಇಲಾಖೆಯ ಅಭಿಪ್ರಾಯ ಪಡೆದಿರುತ್ತಾರೆ. ಆದರೆ, ಈ ಹಂತದಲ್ಲಿ ಕಾನೂನು ಇಲಾಖೆ ಇದಕ್ಕೆ ಆಕ್ಷೇಪ ಎತ್ತಿರುವುದು ಏಕೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಮತ್ತು ಕಾರ್ಯದರ್ಶಿ
ಕೆ. ಮುರಳೀಧರ ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ 2013ರ ಕೈಗಾರಿಕಾ ನೀತಿಯಲ್ಲಿ, ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕುರಿತು ಪ್ರಸ್ತಾಪಿಸಿದೆ. ಕೈಗಾರಿಕೆಗಳಲ್ಲಿ ಸೃಷ್ಟಿಯಾಗುವ ಒಟ್ಟಾರೆ ಉದ್ಯೋಗಗಳಲ್ಲಿ ಶೇ 70ರಷ್ಟು, ಡಿ ವೃಂದದಲ್ಲಿ ಶೇ 100 ರಷ್ಟು ಮೀಸಲಾತಿ ಒದಗಿಸಬೇಕೆಂದು ಹೇಳಿದೆ.

‘ಹೊಸ ಉದ್ಯಮಗಳಿಗೆ ಸರ್ಕಾರ ರಿಯಾಯ್ತಿ ದರದಲ್ಲಿ ಜಮೀನು, ನೀರು ಮತ್ತು ವಿದ್ಯುತ್‌ ನೀಡುತ್ತಿದೆ. ಹೂಡಿಕೆ ಒಪ್ಪಂದ ಮಾಡಿಕೊಳ್ಳುವ ಸಮಯದಲ್ಲಿ ಸ್ಥಳೀಯರಿಗೆ ಮೀಸಲಾತಿ ಕೊಡಬೇಕು ಎಂಬ ಷರತ್ತು ಹಾಕುತ್ತಿದೆ. ಇದರಿಂದಾಗಿ ಬಜೆಟ್‌ ಘೋಷಣೆ ಜಾರಿ ಕಷ್ಟವಾಗುವುದಿಲ್ಲ’ ಎಂದೂ ಮುರಳೀಧರ ಅವರು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಭಾಷೆ ಕಡ್ಡಾಯ

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಆಯ್ಕೆಯಾದವರೂ, ತಾವು ಕೆಲಸ ಮಾಡುವ ರಾಜ್ಯಗಳ ಭಾಷೆಯನ್ನು ಕಡ್ಡಾಯವಾಗಿ ಕಲಿತು ಪರೀಕ್ಷೆ ಬರೆದು ಪಾಸಾಗಬೇಕೆಂಬ ನಿಯಮವಿದೆ. ಅಲ್ಲದೆ, ಗ್ರಾಮೀಣ ಬ್ಯಾಂಕ್‌ ಪರೀಕ್ಷೆಗಳಲ್ಲೂ ಸ್ಥಳೀಯ ಭಾಷೆ ಕಡ್ಡಾಯ. ಖಾಸಗಿ ಕೈಗಾರಿಕೆಗಳಿಗೂ ಈ ನಿಯಮ ಅನ್ವಯಿಸಲು ಅವಕಾಶವಿದೆ ಎಂಬುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಲುವು.

ಒಂದರಿಂದ 10ನೇ ತರಗತಿವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿತವರಿಗೆ ಖಾಸಗಿ ಉದ್ಯಮಗಳಲ್ಲಿ ಮೀಸಲಾತಿ ಕಲ್ಪಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದೂ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.

* ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಪ್ರಕಾರ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡಲೇಬೇಕು

–ರಾ. ನಂ. ಚಂದ್ರಶೇಖರ್‌, ಕನ್ನಡ ಗೆಳೆಯರ ಬಳಗ

ಮುಖ್ಯಾಂಶಗಳು

* ಕಾನೂನು ತಜ್ಞರಿಂದಲೂ ಆಕ್ಷೇಪ

* ಸೆ. 20ರಂದು ತುರ್ತು ಸಭೆ

* ರಾಜ್ಯ ಕೈಗಾರಿಕಾ ನೀತಿಯಲ್ಲಿ ಮೀಸಲು ಪ್ರಸ್ತಾಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.