ADVERTISEMENT

ಕನ್ನಡ ನಾಮಫಲಕ: ಮೇಲ್ಮನವಿ ವಜಾ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2014, 19:30 IST
Last Updated 30 ಮಾರ್ಚ್ 2014, 19:30 IST

ಬೆಂಗಳೂರು: ‘ರಾಜ್ಯದ ವಾಣಿಜ್ಯ ಮಳಿಗೆ­ಗಳು, ಅಂಗಡಿಗಳ ನಾಮ ಫಲಕದಲ್ಲಿ ಕನ್ನಡ­ವನ್ನೇ ಬಳಸಬೇಕು. ಬೇರೆ ಭಾಷೆ­ಗಳಲ್ಲಿ ಹೆಸರು ಬರೆಸುವುದಿದ್ದರೆ, ಅದು ಕನ್ನಡದ ಹೆಸರಿನ ಕೆಳಗೆ ಇರಬೇಕು, ಬೇರೆ ಭಾಷೆಗಳಿಗಿಂತ ಹೆಚ್ಚಿನ ಜಾಗವನ್ನು ಕನ್ನಡಕ್ಕೇ ನೀಡಬೇಕು’ ಎಂಬ ನಿಯಮ ಸರಿಯಲ್ಲ ಎಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ಮತ್ತು ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠ ಇತ್ತೀಚೆಗೆ ಈ ಆದೇಶ ನೀಡಿದೆ. ಮೇಲ್ಮನವಿಯನ್ನು ವಜಾಗೊಳಿಸಿದೆ.

ಏನು ಪ್ರಕರಣ?: ‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ನಿಯಮ–1963’ಕ್ಕೆ 2008ರ ಡಿಸೆಂಬರ್‌ನಲ್ಲಿ ತಿದ್ದುಪಡಿ ತಂದ ಸರ್ಕಾರ, ‘ನಾಮಫಲಕ­ಗಳು ಕನ್ನಡ­ದಲ್ಲೇ ಇರಬೇಕು. ಬೇರೆ ಭಾಷೆಯಲ್ಲಿ ಬರೆಸುವು­ದಿದ್ದಲ್ಲಿ, ಅದಕ್ಕೆ ಕನ್ನಡದ ಹೆಸರಿನ ಕೆಳಗೆ ಜಾಗ ನೀಡಬೇಕು. ಕನ್ನಡದಲ್ಲಿರುವ ಹೆಸರು ಪ್ರಧಾನ­ವಾಗಿರಬೇಕು’ (ನಿಯಮದ ಉಪ ನಿಯಮ 24–ಎ) ಎಂದು ಹೇಳಿತು. ಇದನ್ನು ಉಲ್ಲಂಘಿಸುವವರಿಗೆ ದಂಡ ವಿಧಿ­ಸುವ ಅವಕಾಶವನ್ನೂ ತಿದ್ದುಪಡಿಯ ಮೂಲಕ ಜಾರಿಗೊಳಿಸಿತು.

ನಿಯಮಕ್ಕೆ ತಂದ ಈ ತಿದ್ದುಪಡಿ ಪ್ರಶ್ನಿಸಿ ವೊಡಾಫೋನ್‌ ಕಂಪೆನಿ 2009ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಇದರ ವಿಚಾರಣೆಯನ್ನು ಏಕಸದಸ್ಯ ಪೀಠ ನಡೆಸಿತು. ಕಂಪೆನಿಯ ವಾದ ಮಾನ್ಯ ಮಾಡಿದ ಏಕಸದಸ್ಯ ಪೀಠ, ‘ರಾಜ್ಯ ಸರ್ಕಾರ ಶಾಸನ­ಬದ್ಧ ಅಧಿಕಾರವನ್ನು ಮೀರಿ ಇಂಥ ಉಪ ನಿಯಮ ರೂಪಿಸಿದೆ. ಉಪನಿಯಮ 24–ಎ ಸರಿಯಿಲ್ಲ’ ಎಂದು ಆದೇಶಿಸಿತು.

ರಾಜ್ಯ ಸರ್ಕಾರವು ‘ರಾಜ್ಯ ಭಾಷಾ ಕಾಯ್ದೆ’ಯನ್ನು ಜಾರಿಗೆ ತಂದಿದೆ ಎಂಬುದು ನಿಜ. ಆದರೆ ಈ ಕಾಯ್ದೆಗೆ ವಾಣಿಜ್ಯ ಚಟುವಟಿಕೆಯನ್ನು ನಿಯಂತ್ರಿ­ಸುವ ಅಧಿಕಾರ ಇಲ್ಲ ಎಂದು ಏಕಸದಸ್ಯ ಪೀಠ 2009ರ ಜೂನ್‌ನಲ್ಲಿ ನೀಡಿದ ಆದೇಶದಲ್ಲಿ ಹೇಳಿತು.

ಈ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತು. ‘ಇದೇ ಸ್ವರೂಪದ ನಿಯಮಗಳನ್ನು ನೆರೆಯ ಮಹಾರಾಷ್ಟ್ರ, ತಮಿಳು­ನಾಡು ರಾಜ್ಯಗಳು ಜಾರಿಗೆ ತಂದಿವೆ. ಅವುಗಳನ್ನು ಯಾರೂ ಪ್ರಶ್ನಿ­ಸಿಲ್ಲ. ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ, ಈ ಉಪನಿಯಮ ಸರಿಯಲ್ಲ ಎಂದು ಏಕಸದಸ್ಯ ಪೀಠ ಆದೇಶಿಸ­ಬಾರದಿತ್ತು’ ಎಂದು ಸರ್ಕಾರ ಮೇಲ್ಮನವಿಯಲ್ಲಿ ವಾದಿಸಿತ್ತು.

ಏಕಸದಸ್ಯ ಪೀಠ ನೀಡಿರುವ ಆದೇಶದಲ್ಲಿ ಯಾವುದೇ ತಪ್ಪಿಲ್ಲ. ಸರ್ಕಾರದ ವಾದ ಪುರಸ್ಕರಿಸಲು ಯೋಗ್ಯವಾದ ಅಂಶಗಳು ಇಲ್ಲ ಎಂದು ಹೇಳಿರುವ ವಿಭಾಗೀಯ ಪೀಠ, ಮೇಲ್ಮನವಿ ವಜಾಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.