ADVERTISEMENT

ಕಾಂಗ್ರೆಸ್‌ಗೆ ಮತ ನೀಡಲು ಮುಂದಾದ ಜೆಡಿಎಸ್‌ ಶಾಸಕರು

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:41 IST
Last Updated 26 ಮೇ 2016, 19:41 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಅವರಿಗೆ ಮತ ನೀಡಲು ಜೆಡಿಎಸ್‌ನ ಐದು ಜನ ಶಾಸಕರು ಮುಂದಾಗಿದ್ದಾರೆ.

ಈ ನಡುವೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಿಗೆ ಪಕ್ಷದ ವತಿಯಿಂದ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗುರುವಾರ ಸ್ಪಷ್ಟಪಡಿಸಿದರು.

‘ರಾಜ್ಯಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವೆ’ ಎಂದು ಶಾಸಕ ಜಮೀರ್ ಅಹಮದ್ ಖಾನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಅಲ್ಲದೆ, ಜೆಡಿಎಸ್ ಶಾಸಕರಾದ ಎನ್. ಚೆಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ ಮತ್ತು ಇಕ್ಬಾಲ್‌ ಅನ್ಸಾರಿ ಅವರೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲಿದ್ದಾರೆ ಎಂದು ಜಮೀರ್ ಹೇಳಿದರು.

ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ 45 ಮತ ಪಡೆಯಬೇಕು. ಜೆಡಿಎಸ್‌ 40 ಶಾಸಕರ ಬಲ ಹೊಂದಿದೆ. ಐದು ಜನ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ, ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್‌ ಪ್ರಯಾಸ ಪಡಬೇಕಾಗುತ್ತದೆ ಎಂದು ಪಕ್ಷದ ಮೂಲಗಳು ಆತಂಕ ವ್ಯಕ್ತಪಡಿಸಿವೆ.

ಗುರುವಾರ ಬೆಂಗಳೂರಿನ ಹೊರವಲಯದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ‘ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಮೇ 29ರಂದು ಅಂತಿಮಗೊಳಿಸಲಾಗುವುದು’ ಎಂದರು.

ಸಭೆಗೆ 35 ಶಾಸಕರು ಮಾತ್ರ ಬಂದಿದ್ದರು. ಕಾಂಗ್ರೆಸ್ಸಿಗೆ ಮತ ನೀಡಲು ಮುಂದಾಗಿರುವ ಶಾಸಕರು ಸಭೆಗೆ ಗೈರಾಗಿದ್ದರು.

‘ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಅಂತಿಮಗೊಳಿಸುವ ಮುನ್ನ ಜಮೀರ್‌ ಸೇರಿದಂತೆ ಇತರ ಶಾಸಕರ ಅಭಿಪ್ರಾಯ ಪಡೆಯಲಾಗುವುದು. ಕಾಂಗ್ರೆಸ್‌ ಪಕ್ಷ ಎಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂಬುದನ್ನು ಕಾದು ನೋಡಲಾಗುತ್ತಿದೆ’ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಹಾರ ಮೂಲದ ಡ್ಯಾನಿಶ್ ಅಲಿ ಅವರನ್ನು ರಾಜ್ಯಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದೇ ಎಂಬ ಪ್ರಶ್ನೆಗೆ, ‘ಕನ್ನಡಿಗರನ್ನೇ ಕಣಕ್ಕಿಳಿಸಬೇಕು ಎಂಬ ಒತ್ತಾಯ ತೀವ್ರವಾಗಿದೆ’ ಎಂದು ಉತ್ತರಿಸಿದರು.

‘ಪಕ್ಷ ಉಳಿಸಬೇಕು’: ‘ಜಮೀರ್ ಬರಲಿ ಅಥವಾ ತಿಮ್ಮಣ್ಣ ಬರಲಿ, ಈ ಪಕ್ಷವನ್ನು ಉಳಿಸುವ ಕೆಲಸ ಮಾಡುವೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

‘ವಿಪ್‌ ಉಲ್ಲಂಘಿಸಿದರೂ ಸದಸ್ಯತ್ವ ರದ್ದಾಗದು’
‘ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಮತದಾರರು ಪಕ್ಷದ ವಿಪ್‌ ಉಲ್ಲಂಘಿಸಿದರೂ, ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅವರ ಸದಸ್ಯತ್ವ ರದ್ದುಪಡಿಸಲು ಬರುವುದಿಲ್ಲ’ ಎಂದು ಚುನಾವಣಾಧಿಕಾರಿಯಾಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ತಿಳಿಸಿದರು.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿಧಾನ ಸಭೆಯಿಂದ ರಾಜ್ಯಸಭೆಗೆ ಹಾಗೂ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ  ಈ ಬಾರಿ ಅಭ್ಯರ್ಥಿಗಳ ಹೆಸರಿನ ಜತೆ ಅವರ ಭಾವಚಿತ್ರವನ್ನೂ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

‘ಒಂದೇ ಹೆಸರಿನ ಇಬ್ಬರು ಕಣದಲ್ಲಿದ್ದರೆ ಮತದಾರರಿಗೆ ಗೊಂದಲ ಉಂಟಾಗಬಾರದು ಎಂದು ಈ ಬಾರಿ ಅಭ್ಯರ್ಥಿಯ ಭಾವಚಿತ್ರ ಮುದ್ರಿಸಲು ಚುನಾವಣಾ ಆಯೋಗ ನಿರ್ಧರಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.