ADVERTISEMENT

ಕಾಂಗ್ರೆಸ್‌ ಬಲವರ್ಧನೆಗೆ ವೇಣುಗೋಪಾಲ್ ಸೂತ್ರ

ಅಧಿಕಾರ ವಹಿಸಿಕೊಂಡ 15 ದಿನದಲ್ಲಿ ಸಂಘಟನೆಗೆ ಒತ್ತು, ಸರ್ಕಾರ–ಪಕ್ಷದ ಮಧ್ಯೆ ಅಂತರ ನಿವಾರಣೆಗೆ ಸರಣಿ ಸಭೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಬೆಂಗಳೂರು: ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನಗಳಲ್ಲೇ ಪಕ್ಷದ ಸಂಘಟನಾ ಚಟುವಟಿಕೆಗೆ ಚುರುಕು ಮುಟ್ಟಿಸಲು ಕೆ.ಸಿ. ವೇಣುಗೋಪಾಲ್‌ ಮುಂದಾಗಿದ್ದಾರೆ.
 
ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ರಾಜ್ಯಕ್ಕೆ ಬಂದಿದ್ದ ವೇಣುಗೋಪಾಲ್‌,  ನಿರಂತರ ಸಭೆ ನಡೆಸಿ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದರು. ಪಕ್ಷ ಮತ್ತು ಸರ್ಕಾರದ ಮಧ್ಯೆ ಅಂತರ ಹೆಚ್ಚುತ್ತಲೇ ಇರುವುದು, ಉಸ್ತುವಾರಿ ಸಚಿವರು ಜಿಲ್ಲಾ ಅಧ್ಯಕ್ಷರು, ಶಾಸಕರ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದು ಅವರ ಗಮನಕ್ಕೆ ಬಂದಿತ್ತು. 
 
ಪಕ್ಷದೊಳಗಿನ ಸಮಸ್ಯೆ ನಿವಾರಿಸಲು ಜಿಲ್ಲಾವಾರು ಸಭೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ಗೆ ಅವರು ಸೂಚಿಸಿದ್ದರು. ಈ ಕಾರಣದಿಂದ ಇದೇ 22ರಿಂದ 26 ರವರೆಗೆ ಕೆಪಿಸಿಸಿ ಕಚೇರಿಯಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೆ ಸಭೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಬದಿಗೊತ್ತಿದ್ದಾರೆ.
 
ಜಿಲ್ಲಾ ಅಧ್ಯಕ್ಷರು, ಸಂಸದರು, ಶಾಸಕರು, ಮಾಜಿ ಶಾಸಕರು, ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಜಿಲ್ಲಾವಾರು ಪ್ರತ್ಯೇಕ ಸಭೆ ನಡೆಯಲಿದೆ.
 
ಕಾರ್ಯವೈಖರಿ ಬದಲು: ಈ ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ  ದಿಗ್ವಿಜಯಸಿಂಗ್ ರಾಜ್ಯಕ್ಕೆ ಬಂದಾಗ, ಕೆಪಿಸಿಸಿ ಕಚೇರಿಗೆ ಭೇಟಿ  ನೀಡುವುದು ಅಪರೂಪವಾಗಿತ್ತು. ಕುಮಾರಕೃಪಾ ಅತಿಥಿಗೃಹದಲ್ಲಿ ಉಳಿಯುತ್ತಿದ್ದ ಸಿಂಗ್‌, ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ ವಾಪಸ್‌ ಆಗುತ್ತಿದ್ದರು ಎಂಬ ಆಪಾದನೆ ಇತ್ತು.
 
ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಹೋಗಲಿ, ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಕೂಡ ಸಿಂಗ್‌ ಭೇಟಿ ಮಾಡುವುದು ಸಾಧ್ಯವಿರಲಿಲ್ಲ ಎಂಬ ದೂರು ಇತ್ತು. ಇದನ್ನು ಹೋಗಲಾಡಿಸಲು ಮುಂದಾಗಿರುವ ವೇಣುಗೋಪಾಲ್‌, ಪಕ್ಷದ ಎಲ್ಲ ಹಂತದ ನಾಯಕರು ಹಾಗೂ ಕಾರ್ಯಕರ್ತರ ಜತೆ ಮುಖಾಮುಖಿ ಚರ್ಚೆ ನಡೆಸುವ ಪದ್ಧತಿಯನ್ನು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮೊದಲ ಬಾರಿಗೆ ಭೇಟಿ ನೀಡಿದ್ದ ವೇಣುಗೋಪಾಲ್‌, ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಅಹವಾಲು ಆಲಿಸಿ, ಸಮಾಲೋಚನೆ ನಡೆಸಿದ್ದರು. ತಮ್ಮ ಸಮಸ್ಯೆ ವಿವರಿಸಲು ಸಮಯ ಸಿಕ್ಕಿಲ್ಲ ಎಂದು ಜಿಲ್ಲಾ ಮಟ್ಟದ ನಾಯಕರು ಅಸಮಾಧಾನ ತೋಡಿಕೊಂಡಿದ್ದರು. 
 
ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿರುವ ಪಕ್ಷದ ಸಂಘಟನೆ ಸ್ಥಿತಿ, ಎದುರಾಳಿ ಪಕ್ಷದ ಸಾಮರ್ಥ್ಯ, ಹಾಲಿ ಶಾಸಕರು ಹಾಗೂ ಮುಂದಿನ ಚುನಾವಣೆಯಲ್ಲಿ  ಸ್ಪರ್ಧಿಸಲು ಆಸಕ್ತಿ ಇರುವ ಅಭ್ಯರ್ಥಿಗಳ ಕುರಿತು ಸ್ಥಳೀಯ ಮಟ್ಟದ ನಾಯಕರ ಅಭಿಪ್ರಾಯವನ್ನು ವೇಣುಗೋಪಾಲ್ ಆಲಿಸಲಿದ್ದಾರೆ. ಅದಾದ ಬಳಿಕ, ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲುವಿಗೆ ಅಗತ್ಯ ಕಾರ್ಯತಂತ್ರ ರೂಪಿಸಲು ಆಲೋಚಿಸಿದ್ದಾರೆ.
****
ಸಿದ್ದರಾಮಯ್ಯ ಮಹಾನ್‌ ಸುಳ್ಳುಗಾರ–ವಿಶ್ವನಾಥ್‌ ಟೀಕೆ
ಮೈಸೂರು:
‘ಕಾಂಗ್ರೆಸ್‌ ಸೇರುವಾಗ ರಾಜ್ಯದ ಯಾವುದೇ ನಾಯಕರ ಸಹಾಯ ಪಡೆದುಕೊಂಡಿಲ್ಲವೆಂಬ ಬಾಲಿಶ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾಡಿದ ಅಪಮಾನವಿದು. ಈಚೆಗೆ ಅವರು ತುಂಬಾ ಸುಳ್ಳು ಹೇಳುತ್ತಿದ್ದು, ಅಹಂಕಾರದಿಂದ ವರ್ತಿಸುತ್ತಿದ್ದಾರೆ’ ಎಂದು ಪಕ್ಷದ ಮುಖಂಡ ಅಡಗೂರು ಎಚ್.ವಿಶ್ವನಾಥ್‌ ಟೀಕಾ ಪ್ರಹಾರ ನಡೆಸಿದರು.

‘ಸಿದ್ದರಾಮಯ್ಯ ಅವರಿಗೆ ಸಾಮಾನ್ಯ ಜ್ಞಾನವೇ ಇಲ್ಲ. ಕಾಂಗ್ರೆಸ್‌ ಸೇರಬೇಕಾದರೆ ಕೆಪಿಸಿಸಿ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಸಮ್ಮತಿ ಬೇಕಾಗುತ್ತದೆ. ಅವರ ವಿಚಾರದಲ್ಲೂ ಇದೇ ನಡೆದಿದೆ. ಆದರೆ, ಉಪಕಾರದ ಸ್ಮರಣೆಯೇ ಇಲ್ಲದೆ ಭಂಡತನ ತೋರಿದ್ದಾರೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಈ ಬಗ್ಗೆ ನನಗೀಗ ಪಶ್ಚಾತಾಪವಾಗುತ್ತಿದೆ. ಸಹಾಯ ಮಾಡಿದವರನ್ನೇ ಅಧಿಕಾರ ದಾಹದಿಂದ ತುಳಿಯುತ್ತಿದ್ದಾರೆ. ಸಮಾಜವಾದಿ ಮುಖವಾಡ ಧರಿಸಿರುವ ಸ್ವಾರ್ಥ ರಾಜಕಾರಣಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2005ರಲ್ಲಿ ಜೆಡಿಎಸ್‌ನಿಂದ ಉಚ್ಚಾಟನೆಗೊಳ್ಳುವ ಭೀತಿಯಲ್ಲಿದ್ದ ಅವರು ಕಾಂಗ್ರೆಸ್‌ ಸೇರುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್‌.ಎಂ.ಕೃಷ್ಣ  ಅವರನ್ನು ಮುಂಬೈನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಕುರುಬ ಸಮುದಾಯದ ಮುಖಂಡರ ಸಭೆ ನಡೆಸಿ ರಾಜಕಾರಣದಿಂದಲೇ ನಿವೃತ್ತರಾಗುವ ಇಂಗಿತ ವ್ಯಕ್ತಪಡಿಸಿದ್ದರು.

ಆ ಸಭೆಗೆ ನನಗೂ ಆಹ್ವಾನವಿತ್ತು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪದಾಧಿಕಾರಿಗಳು ಸಭೆ ನಡೆಸಿ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸಂಬಂಧ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದರು. ಇಷ್ಟೆಲ್ಲಾ ಘಟನೆ ನಡೆದಿದ್ದರೂ ಈಗ ಸುಳ್ಳು ಹೇಳುತ್ತಿದ್ದಾರೆ. ಅವರೊಬ್ಬ ಮಹಾನ್ ಸುಳ್ಳುಗಾರ’ ಎಂದು ತರಾಟೆಗೆ ತೆಗೆದುಕೊಂಡರು.

****
ಅಸಹನೆ ಸ್ಫೋಟ ಸಾಧ್ಯತೆ?
ಕಾಂಗ್ರೆಸ್‌ ಪಕ್ಷದೊಳಗೆ ಧುಮುಗುಡುತ್ತಿರುವ ಅಸಹನೆ, ನಾಯಕರ ಬಗೆಗಿನ ಸಿಟ್ಟು ಈ ಸಭೆಗಳಲ್ಲಿ ಸ್ಫೋಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿ,  ಜಿಲ್ಲಾ ಮಟ್ಟದ ನಾಯಕರನ್ನು ಗಣನೆಗೆ ತೆಗೆದುಕೊಳ್ಳದ ಸಚಿವರ ಧೋರಣೆಯಿಂದ ಪಕ್ಷದ ಸಂಘಟನೆಗೆ ಹೊಡೆತ ಬೀಳುತ್ತಿರುವುದನ್ನು ವಿವರಿಸಲು ಕೆಲವು ಜಿಲ್ಲೆಗಳ ನಾಯಕರು ನಿರ್ಧರಿಸಿದ್ದಾರೆ. 

ಪಕ್ಷಕ್ಕಾಗಿ ದುಡಿದ ನಿಷ್ಠಾವಂತರನ್ನು ಕಡೆಗಣಿಸಿ, ಯಾವುದೋ ಪ್ರಭಾವ, ವಶೀಲಿಗೆ ಮಣಿದು ಆಯಕಟ್ಟಿನ ನಿಗಮ–ಮಂಡಳಿಗಳ ಹುದ್ದೆಯನ್ನು ಅನ್ಯರಿಗೆ ನೀಡಿರುವ ಕುರಿತು ವೇಣುಗೋಪಾಲ್‌ಗೆ ದೂರು ಸಲ್ಲಿಸಲು ಸ್ಥಳೀಯ ಮಟ್ಟದ ನಾಯಕರು ತಯಾರಿ ನಡೆಸಿದ್ದಾರೆ.

****
ಮೋದಿ ಸೆಲ್ಫಿಗೆ ರಾಜೀವ್‌ಗಾಂಧಿ ಕಾರಣ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಸೆಲ್ಫಿ ತೆಗೆದುಕೊಳ್ಳುತ್ತಿರುವುದಕ್ಕೆ ಈ ಹಿಂದೆ ದೂರಸಂಪರ್ಕ ಕ್ಷೇತ್ರದಲ್ಲಿ ರಾಜೀವ್‌ಗಾಂಧಿ ಮಾಡಿದ ಸಾಧನೆಯೇ ಕಾರಣ ಎಂದು ಎಐಸಿಸಿ ವಕ್ತಾರ ಮಧು ಗೌಡ್ ಯಾಸ್ಕಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.