ADVERTISEMENT

ಕಾನೂನುಬದ್ಧ ಗಂಡನೇ ತಂದೆ– ಹೈಕೋರ್ಟ್‌

‘ಡಿಎನ್‌ಎ ಪರೀಕ್ಷೆಗೂ ಕೋರ್ಟ್‌ ಅನುಮತಿ ನೀಡದು’

​ಪ್ರಜಾವಾಣಿ ವಾರ್ತೆ
Published 10 ಜೂನ್ 2016, 0:29 IST
Last Updated 10 ಜೂನ್ 2016, 0:29 IST
ಕಾನೂನುಬದ್ಧ ಗಂಡನೇ ತಂದೆ– ಹೈಕೋರ್ಟ್‌
ಕಾನೂನುಬದ್ಧ ಗಂಡನೇ ತಂದೆ– ಹೈಕೋರ್ಟ್‌   

ಮದುವೆಯಾದ ನಂತರ ಹುಟ್ಟಿದ ಯಾವುದೇ ಮಗುವಿಗೆ ಅಮ್ಮನ ಕಾನೂನುಬದ್ಧ ಗಂಡನೇ ನಿಜವಾದ ತಂದೆ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 
ಭಾರತೀಯ ಸಾಕ್ಷ್ಯ ಕಾಯ್ದೆಯ 12ನೇ ಕಲಮಿನಲ್ಲಿ ಈ ಅಂಶವನ್ನು ತಿಳಿಸಿರುವ ಕೋರ್ಟ್‌, ಒಂದು ವೇಳೆ ದಂಪತಿ ಬೇರೆಯಾಗಿದ್ದ ಪಕ್ಷದಲ್ಲಿ ಬೇರೆಯಾದ 280 ದಿನಗಳ ಒಳಗೆ ಮಗು ಹುಟ್ಟಿದರೆ ಆ ಮಗು ಆಕೆಯ ಗಂಡನದ್ದೇ ಎಂದೂ ತೀರ್ಪಿನಲ್ಲಿ ಉಲ್ಲೇಖಿಸಿದೆ.

‘ದಂಪತಿ ಬೇರೆಯಾಗಿದ್ದ ಸಂದರ್ಭದಲ್ಲಿ ಹುಟ್ಟಿದ ಮಗು ಆಕೆಯ ಗಂಡನದ್ದಲ್ಲ ಎಂದು ಸಾಬೀತು  ಮಾಡಬೇಕಿದ್ದರೆ ಆ ದಿನಗಳಲ್ಲಿ ಒಮ್ಮೆ ಕೂಡ ದಂಪತಿ ಒಟ್ಟಿಗೆ ಇರಲಿಲ್ಲ ಎಂಬುದನ್ನು ಸಾಬೀತು ಮಾಡುವುದು ಕಡ್ಡಾಯ. ಒಂದು ವೇಳೆ ಇದನ್ನು ಸಾಬೀತು ಮಾಡದೇ ಮಗುವಿನ ಡಿಎನ್‌ಎ ಪರೀಕ್ಷೆ ಮಾಡಲು ಅನುಮತಿ ಕೋರಿ ಕೋರ್ಟ್‌ಗೆ ಸಲ್ಲಿಸುವ ಅರ್ಜಿಗಳನ್ನು ಮಾನ್ಯ ಮಾಡಲಾಗದು’ ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಂ ದಂಪತಿಯ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಈ ತೀರ್ಪು ನೀಡಿದ್ದಾರೆ. ಹೆಂಡತಿಗೆ ಹುಟ್ಟಿದ ಮಗು ತನ್ನದಲ್ಲ ಎಂದು ಆದೇಶಿಸುವಂತೆ ಕೋರಿ ಗಂಡ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಬೆಳಗಾವಿಯ ಮೊಹಮ್ಮದ್‌ ಮತ್ತು ಸಬೀನಾ (ಹೆಸರು ಬದಲಾಯಿಸಲಾಗಿದೆ) ದಂಪತಿ ಪ್ರಕರಣವಿದು. 2007ರ ಮೇ ತಿಂಗಳಿನಲ್ಲಿ ಅವರ ವಿವಾಹವಾಗಿತ್ತು. ಮದುವೆಯಾದ ಎರಡು ವಾರಗಳು ಮಾತ್ರ ದಂಪತಿ ಒಟ್ಟಾಗಿ ಬಾಳಿದ್ದರು. ಆ ನಂತರ ಅವರ ನಡುವೆ ವ್ಯತ್ಯಾಸವಾಗಿ ಸಬೀನಾ  ಗಂಡನಿಗೆ ತಿಳಿಸದೇ ಅದೇ ಸಾಲಿನ ಜೂನ್‌ ತಿಂಗಳಿನಲ್ಲಿ ತಮ್ಮ ತವರಿಗೆ ಹೋದರು. ದಂಪತಿಯನ್ನು ಒಟ್ಟುಗೂಡಿಸಲು ಹಿರಿಯರು ನಡೆಸಿದ್ದ ಮಾತುಕತೆ ವಿಫಲವಾಯಿತು.

2009ರಲ್ಲಿ ಸಬೀನಾ ಅವರಿಗೆ ಮಗಳು ಹುಟ್ಟಿದಳು. ತಮ್ಮ ಹಾಗೂ ಮಗಳ ಜೀವನಕ್ಕೆ ಸರಿಯಾದ ಆದಾಯ ಇಲ್ಲದ ಕಾರಣ, ಜೀವನಾಂಶ ಕೋರಿ ಸಬೀನಾ ಕೌಟುಂಬಿಕ ಕೋರ್ಟ್‌ ಮೊರೆ ಹೋದರು. ಕೋರ್ಟ್‌ನಿಂದ ಮೊಹಮ್ಮದ್‌ ಅವರಿಗೆ ನೋಟಿಸ್‌ ಜಾರಿಯಾಯಿತು. ಈ ನೋಟಿಸ್‌ ಬರುವುದಕ್ಕಿಂತ ಮುಂಚೆ ತಮಗೆ ಮಗಳು ಹುಟ್ಟಿದ ಬಗ್ಗೆ ಅರಿವೇ ಇರಲಿಲ್ಲ ಎನ್ನುವುದು ಮೊಹಮ್ಮದ್‌ ಅವರ ವಾದ.

2007ರಲ್ಲಿ ಹೆಂಡತಿ ಪ್ರತ್ಯೇಕವಾಗಿ ವಾಸವಾಗಿದ್ದ ದಿನದಿಂದ ತಮಗೂ ಆಕೆಗೂ ಭೇಟಿಯೇ  ನಡೆದಿರಲಿಲ್ಲ. ಹಾಗಿದ್ದ ಮೇಲೆ ಮಗು ತಮ್ಮದು ಎಂದರೆ ಹೇಗೆ? ಪತ್ನಿಗೆ ಅಕ್ರಮ ಸಂಬಂಧ ಇತ್ತು. ಆತನಿಂದಲೇ ಹುಟ್ಟಿದ್ದು ಈ ಮಗು ಎಂದು ಮೊಹಮ್ಮದ್‌ ಅವರು ಕೌಟುಂಬಿಕ ಕೋರ್ಟ್‌ನಲ್ಲಿ ವಾದಿಸಿದ್ದರು.

ಇದನ್ನು ಅಲ್ಲಗಳೆದಿದ್ದ ಸಬೀನಾ, ತಮ್ಮ ಗಂಡ ಆಗಾಗ್ಗೆ ತವರಿಗೆ ಬರುತ್ತಿದ್ದರು. ಅದರ ಪರಿಣಾಮವಾಗಿ ಹುಟ್ಟಿದ ಮಗುವಿದು ಎಂದು ಪ್ರತಿವಾದ ಮಂಡಿಸಿದ್ದರು. ‘ನನ್ನ ಪತಿ ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಹಿಂಸಿಸುತ್ತಿದ್ದರು. ನನ್ನ ತವರಿನವರು ಬಡವರಾಗಿರುವ ಕಾರಣ ಹಣ ಕೊಡಲು ಆಗಲಿಲ್ಲ. ಗಂಡ ಕೊಡುತ್ತಿದ್ದ ಹಿಂಸೆ ತಾಳದೇ ತವರಿಗೆ ವಾಪಸಾದೆ. ಅಲ್ಲಿಯೂ ಬಿಡದ ಅವರು 50 ಸಾವಿರ ರೂಪಾಯಿ ವರದಕ್ಷಿಣೆ ನೀಡುವಂತೆ ತವರಿಗೇ ಬಂದು ಪೀಡಿಸತೊಡಗಿದರು. ನನ್ನ ಮೇಲೆ ದೌರ್ಜನ್ಯವನ್ನೂ ಎಸಗುತ್ತಿದ್ದರು’ ಎಂದು ಅರ್ಜಿಯಲ್ಲಿ ತಿಳಿಸಿದ್ದ ಸಬೀನಾ, ಮಗು ತಮ್ಮ ಗಂಡನದ್ದೇ ಎನ್ನುವ ಸಂಬಂಧ ಕೆಲವೊಂದು ದಾಖಲೆಗಳನ್ನೂ ಕೌಟುಂಬಿಕ ಕೋರ್ಟ್‌ಗೆ ನೀಡಿದ್ದರು.
ವಾದ–ಪ್ರತಿವಾದ ಆಲಿಸಿದ್ದ ಕೌಟುಂಬಿಕ ಕೋರ್ಟ್‌ ನ್ಯಾಯಾಧೀಶರು ಮೊಹಮ್ಮದ್‌ ಅವರ ಅರ್ಜಿ ವಜಾ ಮಾಡಿ ಪತ್ನಿಗೆ ಪ್ರತಿ ತಿಂಗಳು 750ರೂಪಾಯಿ ಜೀವನಾಂಶ ನೀಡುವಂತೆ 2010ರಲ್ಲಿ ಆದೇಶಿಸಿದ್ದರು.

ಈ ಆದೇಶದ ರದ್ದತಿಗೆ ಕೋರಿ ಮೊಹಮ್ಮದ್‌, 2012ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಆಗ  ಅವರ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿ ಕೌಟುಂಬಿಕ ಕೋರ್ಟ್‌ ತಿಳಿಸಿದಂತೆ ಜೀವನಾಂಶ ನೀಡಲು ಹೇಳಿತ್ತು.

ಮೊಹಮ್ಮದ್‌ ಅಷ್ಟಕ್ಕೇ ಸುಮ್ಮನಾಗಿರಲಿಲ್ಲ. ತಮ್ಮ ಹಾಗೂ ಮಗಳ ಡಿಎನ್‌ಎ ಪರೀಕ್ಷೆ ಮಾಡಲು ಆದೇಶಿಸುವಂತೆ ಕೋರಿ ಸೆಷನ್ಸ್‌ ಕೋರ್ಟ್‌ಗೆ ಇನ್ನೊಂದು ಅರ್ಜಿ ಸಲ್ಲಿಸಿದ್ದರು. ಈ ಪರೀಕ್ಷೆಗಾಗಿ ಕೋರ್ಟ್‌ ಕಮಿಷನರ್‌ ನೇಮಕ ಮಾಡುವಂತೆಯೂ ಅವರು ಕೋರಿದ್ದರು. ಇದಕ್ಕೆ ಸಬೀನಾ ವಿರೋಧ ವ್ಯಕ್ತಪಡಿಸಿದ್ದರು. ‘ಇದು ಅವರದ್ದೇ ಮಗು ಎಂದು ತಿಳಿದಿದ್ದರೂ ನನಗೆ ಹಾಗೂ ಮಗಳಿಗೆ ಹಿಂಸೆ ನೀಡುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ಈ ಪರೀಕ್ಷೆಗೆ ಅನುಮತಿ ನೀಡಬಾರದು’ ಎಂದು ಕೋರಿದ್ದರು. ಮೊಹಮ್ಮದ್‌ ಅವರ ಆ ಅರ್ಜಿ ಕೂಡ ಅಲ್ಲಿ ವಜಾಗೊಂಡಿತ್ತು.

ಅದನ್ನು ಪ್ರಶ್ನಿಸಿ ಮೊಹಮ್ಮದ್‌ ಪುನಃ ಈಗ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಡಿಎನ್‌ಎ ಪರೀಕ್ಷೆಗೆ ಕೋರ್ಟ್‌ ಕಮಿಷನರ್‌ ನೇಮಕ ಮಾಡುವಂತೆಯೂ ಅವರು ಕೋರಿದ್ದರು.
ಆದರೆ ಅವರ ಮೇಲ್ಮನವಿಯನ್ನು ಹೈಕೋರ್ಟ್‌ ವಜಾ ಮಾಡಿದೆ.  ‘ಪತ್ನಿಗೆ ಬೇರೆ ಸಂಬಂಧ ಇತ್ತು ಎನ್ನುವುದನ್ನು ಮೊಹಮ್ಮದ್‌ ಸಾಬೀತು ಮಾಡಲಿಲ್ಲ.  ಸುಮ್ಮನೇ ಆರೋಪ ಹೊರಿಸಿದ್ದಾರೆ ಅಷ್ಟೇ. ಪತ್ನಿ ದೂರವಾದ ಮೇಲೆ ಆಕೆಯನ್ನು ತಾವು ಭೇಟಿಯಾಗಿಲ್ಲ ಎನ್ನುವುದನ್ನೂ ಅವರ ಸಾಬೀತು ಪಡಿಸಿಲ್ಲ. ಸಬೀನಾ ಅವರು ಈ ಸಂದರ್ಭದಲ್ಲಿ ಬೇರೆ ವಿವಾಹವನ್ನೂ ಆಗಿಲ್ಲ’ ಎಂದಿರುವ ನ್ಯಾಯಮೂರ್ತಿಗಳು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಹಾಗೂ ಸುಪ್ರೀಂಕೋರ್ಟ್‌ನ ಕೆಲವೊಂದು ತೀರ್ಪುಗಳನ್ನು ಉಲ್ಲೇಖಿಸಿ ಡಿಎನ್‌ಎ ಪರೀಕ್ಷೆಯ ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ಹೆಂಡತಿ ಹಾಗೂ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ, ಇಂಥದ್ದೊಂದು ಅಂಶ ಕಾನೂನಿನಲ್ಲಿ ಅಡಕವಾಗಿರುವ ಕುರಿತಾಗಿಯೂ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ,  1872ರ ಭಾರತೀಯ ಸಾಕ್ಷ್ಯ ಕಾಯ್ದೆಗೆ 2000ನೇ ಸಾಲಿನಲ್ಲಿ ತಿದ್ದುಪಡಿಯಾಗಿದೆ. ಆದರೆ ಮಗುವಿನ ನಿಜವಾದ ತಂದೆ ಅದರ ಅಮ್ಮನ ಕಾನೂನುಬದ್ಧ ಗಂಡನೇ ಎಂದು ಉಲ್ಲೇಖವಿರುವ 12ನೇ ಕಲಂ ಇದುವರೆಗೂ ತಿದ್ದುಪಡಿಯಾಗಿಲ್ಲ. ಈಗಿನ ಸನ್ನಿವೇಶಕ್ಕೆ ತಕ್ಕಂತೆ ಈ ಕಾಯ್ದೆಗೆ ತಿದ್ದುಪಡಿ ತರಬೇಕೆನ್ನುವ ಕೂಗು  ಕಳೆದ ವರ್ಷ ತೀವ್ರಗೊಂಡಿದ್ದು ಇಲ್ಲಿ ಉಲ್ಲೇಖನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.