ADVERTISEMENT

ಕಾನೂನು ಬಾಹಿರ ನಿರ್ಧಾರ ರದ್ದುಪಡಿಸಲು ಒತ್ತಾಯ

ಗೋಕರ್ಣ ದೇಗುಲ ಹಸ್ತಾಂತರ ವಿವಾದ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2016, 19:30 IST
Last Updated 5 ಅಕ್ಟೋಬರ್ 2016, 19:30 IST

ಬೆಂಗಳೂರು: ‘ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಗೋಕರ್ಣದ ಮಹಾಬಲೇಶ್ವರ ದೇವಾಲಯ ಹಸ್ತಾಂತರ ಮಾಡುವ ನಿರ್ಧಾರಕ್ಕೆ ಆಗಿನ ಬಿಜೆಪಿ ಸರ್ಕಾರದಲ್ಲಿ ಸಮಗ್ರ ಚರ್ಚೆ ಆಗಿರಲಿಲ್ಲ’ ಎಂದು ಶ್ರೀ ಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿ ಆಕ್ಷೇಪಿಸಿದೆ.

ದೇವಸ್ಥಾನ ಹಸ್ತಾಂತರಕ್ಕೆ ಮೊದಲು ಸಚಿವ ಸಂಪುಟದಲ್ಲಿ ಚರ್ಚೆ ನಡೆಯಬೇಕಿತ್ತು. ಅನಂತರ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಸಮಿತಿ ಹೇಳಿದೆ. ‘ರಾಜ್ಯ ಸರ್ಕಾರ ಈ ವಿಷಯವನ್ನು ಹೈಕೋರ್ಟ್‌ ಗಮನಕ್ಕೆ ತರುವ ಮೂಲಕ ಸಾರ್ವಜನಿಕರಿಗೆ ಸೇರಿದ ದೇವಾಲಯವನ್ನು ಖಾಸಗಿಯವರಿಗೆ ಒಪ್ಪಿಸಿರುವುದು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡಬೇಕು’ ಎಂದು ಸಮಿತಿ ಒತ್ತಾಯಿಸಿದೆ.

ಈ ಕುರಿತಂತೆ ‘ಪ್ರಜಾವಾಣಿ’ಗೆ ವಿವರಿಸಿದ ಸಮಿತಿ ಅಧ್ಯಕ್ಷ ಹಿರೇ ಗೋಕರ್ಣದ ಗಣಪತಿ ಗಜಾನನ ಭಟ್‌ ಅವರು, ‘ದೇಗುಲವನ್ನು ರಾಮಚಂದ್ರಾಪುರ ಮಠದ ವಶಕ್ಕೆ ನೀಡಲು 2008ರ ಆಗಸ್ಟ್‌ನಲ್ಲಿ ಬಿಜೆಪಿ ಸರ್ಕಾರದ ಪ್ರಭಾವ ಬಳಕೆಯಾಗಿದೆ. ಅಂದಿನ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧೀನ ಕಾರ್ಯದರ್ಶಿ ಮುಖಾಂತರ ಇದನ್ನು ಹಸ್ತಾಂತರಿಸಲಾಗಿದೆ. ಇದು ಸಂಪೂರ್ಣ ಕಾನೂನು ಬಾಹಿರ’ ಎಂದು ವಿವರಿಸಿದರು.

ಈ ಸಂಬಂಧ ಸಮಿತಿಯು 2008ರ ಆಗಸ್ಟ್‌ನಿಂದ ಸ್ಥಳೀಯ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಮುಜರಾಯಿ ಮಂತ್ರಿ ಹಾಗೂ ಆಯುಕ್ತರು ಮತ್ತು ಮುಖ್ಯಮಂತ್ರಿಗೆ ದೂರು ನೀಡುತ್ತಲೇ ಬಂದಿದೆ. ಆದರೆ ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.

ಇದೀಗ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿರುವ ಕಾನೂನು ಬದ್ಧತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ  ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರ ವಿಭಾಗೀಯ ಪೀಠವು ಸರಕಾರದ ನಿಲುವು ಸ್ಪಷ್ಟಪಡಿಸುವಂತೆ ಕೇಳಿದೆ. ಆದ್ದರಿಂದ ಈ ಸಂದರ್ಭದಲ್ಲಿ ಸರ್ಕಾರ ನಮ್ಮ ಎಲ್ಲ ಮನವಿಗಳನ್ನು ಪರಿಶೀಲಿಸಬೇಕು ಎಂದು ಕೋರಿದ್ದಾರೆ.

ಸರ್ಕಾರದ ನಿರ್ಧಾರದಲ್ಲಿ  ಯಾವುದೇ ತಪ್ಪಿರಲಿಲ್ಲ: ‘ಎಲ್ಲಾ ಹಂತಗಳಲ್ಲಿ ಪರಿಶೀಲನೆ ನಡೆಸಿಯೇ ಅಂದಿನ ಸರ್ಕಾರ ದೇಗುಲವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದೆ. ಇದಕ್ಕೆ ಗೋಕರ್ಣದ ಉಪಾಧಿವಂತರ ಟ್ರಸ್ಟ್‌ ಮತ್ತು ಶ್ರೀಮಠ ಸಲ್ಲಿಸಿದ ದಾಖಲೆಗಳು ಸಾಕ್ಷಿಯಾಗಿವೆ’ ಎಂದು ಶ್ರೀಮಠದ ಪರ ವಕೀಲ ಅರುಣ್ ಶ್ಯಾಮ್‌ ಸಮಿತಿಯ ಆಕ್ಷೇಪಕ್ಕೆ ಪ್ರಯಿಕ್ರಿಯಿಸಿದ್ದಾರೆ.

ಸರ್ಕಾರದ ಈ ನಿರ್ಧಾರ ಸರಿ ಎಂಬುದರ ಬಗ್ಗೆ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ಸುಪ್ರೀಂ ಕೋರ್ಟ್‌ನಲ್ಲಿಯೂ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಶ್ಯಾಮ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.