ADVERTISEMENT

ಕಾನೂನು ಹೋರಾಟಕ್ಕೆ ನಿರ್ಧಾರ

ಕೆಪಿಎಸ್‌ಸಿ: ಪ್ರತಿಭಟನೆ ಕೊನೆಗೊಳಿಸಿದ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST

ಬೆಂಗಳೂರು: ಕೆಪಿಎಸ್‌ಸಿಯ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿ­ಗಳ ಆಯ್ಕೆಪಟ್ಟಿ ತಿರಸ್ಕರಿಸಿ­ರುವ ಸರ್ಕಾರದ ಕ್ರಮವನ್ನು ಖಂಡಿಸಿ ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ಕೊನೆಗೊ­ಳಿ­ಸಿದ್ದಾರೆ.

ವಿವಿಧ ಸಂಘಟನೆಗಳ ಬೆಂಬಲ­ದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರವನ್ನು ಕೈಬಿಟ್ಟ ಅಭ್ಯರ್ಥಿಗಳು,  ಬಹಿರಂಗ ಸಭೆ ನಡೆಸಿ 32 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ­ಯನ್ನು ನಿಲ್ಲಿಸಿದರು.

ಪ್ರತಿಭಟನಾ ಸಭೆಯಲ್ಲಿ  ಮಾತ­ನಾ­ಡಿದ ಜೆಡಿಎಸ್‌ ಮುಖಂಡ ಎಚ್‌.ಡಿ.­ ಕುಮಾರಸ್ವಾಮಿ, ‘2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಪಟ್ಟಿ ತಿರಸ್ಕರಿಸಿ­ರುವ ಸರ್ಕಾರದ ಕ್ರಮದಿಂದ ಅಭ್ಯರ್ಥಿಗಳಿಗೆ ಅನ್ಯಾಯ­ವಾಗಿದೆ. ನ್ಯಾಯ ಸಿಗುವವ­ರೆಗೂ ಅವರ   ಜೊತೆಗಿರು­ತ್ತೇನೆ. ಒಂದು ವಾರ­ದಲ್ಲಿ ಕಾನೂನು ರೀತಿಯ ಹೋರಾಟ ಆರಂಭಿಸಲಾಗುವುದು’ ಎಂದರು.

‘1998, 1999 ಹಾಗೂ 2004ರ ನೇಮಕಾತಿಯಲ್ಲಿ ಅನ್ಯಾಯ­ಕ್ಕೊಳಗಾ­ಗಿರುವ ಅಭ್ಯರ್ಥಿಗಳು ಸಂಪರ್ಕಿಸಿದರೆ ಅವರ ಪರವಾಗಿಯೂ ಹೋರಾಟ ನಡೆಸುತ್ತೇನೆ’ ಎಂದರು.

ಜೆಡಿಎಸ್‌, ಬಿಜೆಪಿ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ, ಬಹುಜನ ಸಮಾಜ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಸೇರಿದಂತೆ ವಿವಿಧ 16 ಸಂಘ ಟನೆಗಳ ಸಾವಿರಕ್ಕೂ ಹೆಚ್ಚು ಸದಸ್ಯರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.