ADVERTISEMENT

ಕಾಲುವೆ ಒಡೆದು ಹಾನಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಕನಕಗಿರಿ (ಕೊಪ್ಪಳ ಜಿಲ್ಲೆ): ಸಮೀಪದ ಕೇಸರಹಟ್ಟಿಯ ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಯ ಬಲಭಾಗ ಭಾನುವಾರ ತಡರಾತ್ರಿ ಒಡೆದುಹೋಗಿದೆ.

ಇದರಿಂದಾಗಿ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಈಚೆಗೆ ನಾಟಿ ಮಾಡಿದ್ದ ನೂರಾರು ಎಕರೆ ಪ್ರದೇಶದ ಭತ್ತದ ಸಸಿ, ಪಂಪ್‌ಸೆಟ್‌ಗಳಿಗೆ ಹಾನಿಯಾಗಿದೆ.

ರಸ್ತೆ, ಒಡ್ಡು ಕೊಚ್ಚಿಕೊಂಡು ಹೋಗಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.  ಕಾಲುವೆ ಪರಿಸರದಲ್ಲಿನ ಮನೆ, ಡಾಬಾಗಳ ಒಳಗೆ ನೀರು ನುಗ್ಗಿದೆ.

ಕಾಲುವೆ ಒಡೆದ ವಿಷಯ ತಿಳಿದ ಕಾಲುವೆ ಸಮೀಪದ ಕೇಸಕಿ ಹಂಚಿನಾಳ ಗ್ರಾಮಸ್ಥರು ರಾತ್ರಿಯೇ ಜಾನುವಾರು,  ಶಾಲಾ ಮಕ್ಕಳನ್ನು ಸ್ಥಳಾಂತರಿಸಿದ್ದಾರೆ.

ರೈತರೊಬ್ಬರು ಕಾಲುವೆ ಒಡೆದ ವಿಷಯ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳು ಕಾಲುವೆಗೆ ನೀರು ಹರಿವು ನಿಲ್ಲಿಸಲು ಕ್ರಮ ಕೈಕೊಂಡರು.

ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಜಮಾಯಿಸಿದರು.

ಕಾರ್ಯಕರ್ತರ ಜಟಾಪಟಿ: ಸ್ಥಳಕ್ಕೆ ಭೇಟಿ ನೀಡಿದ ಸಚಿವ ಶಿವರಾಜ ತಂಗಡಗಿ ಅವರನ್ನು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ತಿಪ್ಪೇರುದ್ರಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ದಡೆಸೂಗೂರು, ಕೊಲ್ಲಾ ಶೇಷಗಿರಿರಾವ್ ಅವರು, ‘ಕಾಲುವೆ ಒಡೆದು ನಷ್ಟ ಅನುಭವಿಸಲು ಅಧಿಕಾರಿಗಳು ಹಾಗೂ ನೀವು ಕಾರಣಕರ್ತರು’ ಎಂದು ದೂರಿದರು.

ಈ ಸಮಯದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ  ಮಾತಿನ ಚಕಮಕಿ ನಡೆಯಿತು. ಸಚಿವರನ್ನು ಪ್ರಶ್ನೆ ಮಾಡುತ್ತಿದ್ದ ಬಿಜೆಪಿ ಮುಖಂಡ ತಿಪ್ಪೇರುದ್ರಸ್ವಾಮಿ ಅವರನ್ನು ತಂಗಡಗಿ ಬೆಂಬಲಿಗರು ತಳ್ಳಿದರು. ಸ್ಥಳದಲ್ಲಿದ್ದ ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಲು ಹರಸಾಹಸಪಟ್ಟರು. ಪೊಲೀಸ್, ಕಾರ್ಯಕರ್ತರ ರಕ್ಷಣೆಯಲ್ಲಿ ಸಚಿವ ತಂಗಡಗಿ ಕಾರು ಏರಿ ಹೊರಟರು.

ನಂತರ ಮಾತನಾಡಿದ ಕೊಲ್ಲಾ ಶೇಷಗಿರಿರಾವ್, ‘ಎಡದಂಡೆ ಕಾಲುವೆಯ ಅಭಿವೃದ್ಧಿ ಹೆಸರಿನಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ಕಾಂಗ್ರೆಸ್ ಶಾಸಕರು ₹ 86 ಕೋಟಿ  ಅನುದಾನ ಕೊಳ್ಳೆ ಹೊಡೆದಿದ್ದಾರೆ’ ಎಂದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ತಂಗಡಗಿ, ‘ನೀರು ಹರಿಸುವುದನ್ನು ನಿಲ್ಲಿಸಿ ಎರಡು ದಿನದೊಳಗೆ ಕಾಲುವೆ ದುರಸ್ತಿ ಮಾಡಲಾಗುವುದು, ಬೆಳೆ ನಾಶವಾದ ರೈತರಿಗೆ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

* 1956ರಲ್ಲಿ ನಿರ್ಮಾಣವಾದ ಕಾಲುವೆ ಈ ಕೂಡು ಪ್ರದೇಶದಲ್ಲಿ ನೀರಿನ ಮಟ್ಟವೂ ಹೆಚ್ಚಾಗಿದೆ. ಒತ್ತಡದಿಂದ ಕಾಲುವೆ ಒಡೆದಿದೆ. 48 ಗಂಟೆಗಳ ಒಳಗೆ ದುರಸ್ತಿ ಮಾಡಲಾಗುವುದು.

-ಎಂ.ಬಿ.ಪಾಟೀಲ
ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT