ADVERTISEMENT

ಕಾಳಿ ದಂಡೆಯಲ್ಲಿ ಅಪರೂಪದ ಅತಿಥಿಗಳು

ಆಹಾರ, ಸಂತಾನಾಭಿವೃದ್ಧಿಗಾಗಿ ವಲಸೆ ಬಂದ ವೆಸ್ಟರ್ನ್‌ ರೀಫ್‌ ಇಗ್ರೆಟ್‌

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2013, 8:04 IST
Last Updated 28 ಡಿಸೆಂಬರ್ 2013, 8:04 IST

ಕಾರವಾರ: ಬೆಳ್ಳಕ್ಕಿಯನ್ನು ಹೋಲುವ ‘ವೆಸ್ಟರ್ನ್‌ ರೀಫ್‌ ಇಗ್ರೆಟ್‌’ ಹಕ್ಕಿಗಳು ಆಹಾರ ಮತ್ತು ಸಂತಾನಾಭಿವೃದ್ಧಿಗಾಗಿ ಉತ್ತರ ಕನ್ನಡ ಜಿಲ್ಲೆಗೆ ವಲಸೆ ಬಂದಿದ್ದು, ಪಶ್ಚಿಮಘಟ್ಟದ ಕಾಳಿ ನದಿದಂಡೆಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಈ ಹಕ್ಕಿಗಳ ಸಂತತಿ ತೀರಾ ಕಡಿಮೆ ಇದ್ದು, ಕಣ್ಣಿಗೆ ಬೀಳುವುದೇ ಅಪರೂಪ. ಇವು ಕೈಗಾ ಬಳಿಯಿರುವ  ಕಾಳಿ ನದಿ ದಂಡೆಯಲ್ಲಿ ಕಂಡುಬಂದಿದ್ದು, ಕೈಗಾ ವಿಜ್ಞಾನಿ ಹಾಗೂ ವನ್ಯಜೀವಿ ಹವ್ಯಾಸಿ  ಛಾಯಾಗ್ರಾಹಕ ಪುಟ್ಟರಾಜು ಅವರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿವೆ.

ಬೆಳ್ಳಕ್ಕಿಗಳ ಮೇಲ್ಮೈ ಬಿಳಿ ಬಣ್ಣದಿಂದ ಕೂಡಿದ್ದರೆ ‘ವೆಸ್ಟರ್ನ್‌ ರೀಫ್‌ ಇಗ್ರೆಟ್‌’ ಹಕ್ಕಿಯ ಮೇಲ್ಮೈ ಕಪ್ಪು ಅಥವಾ ತಿಳಿ ಕಪ್ಪು ಬಣ್ಣದ್ದಾಗಿದೆ. ಇವುಗಳ ಪಾದ ಹಾಗೂ ಬೆರಳುಗಳು ಹಳದಿ ನಸುಗೆಂಪು ಬಣ್ಣದಿಂದ ಕೂಡಿದ್ದು, ಇದರ ಉದ್ದವಾದ ಕತ್ತು ಹಾಗೂ ಕೊಕ್ಕು ವೈಶಿಷ್ಟ್ಯಪೂರ್ಣವಾಗಿ ಗೋಚರಿಸುತ್ತವೆ.

ಇಂಡಿಯನ್ ರೀಫ್ ಇಗ್ರೆಟ್ ಎಂದೂ ಕರೆಯಲಾಗುವ ಈ ಪಕ್ಷಿ ‘ಆರ್ಡಿಡೇ’ ಜಾತಿಗೆ ಸೇರಿದ್ದು, ಇದರ ವೈಜ್ಞಾನಿಕ ಹೆಸರು ಇಗ್ರೆಟ್ಟಾ ಗುಲಾರಿಸ್. ಇವು ಸಾಮಾನ್ಯವಾಗಿ ಕೊಂಕಣ, ಮಲಬಾರ್‌ ಕಡಲತೀರಗಳಲ್ಲಿ ಕಂಡುಬರುತ್ತವೆ. ಒಳಪ್ರದೇಶಗಳಲ್ಲಿ ಕಾಣ ಸಿಗುವುದು ವಿರಳ.

ಬೆನ್ನೆಲುಬುಗಳಿಲ್ಲದ ಜಲಚರಗಳು, ಮಣ್ಣು ಹುಳುಗಳು ಹಾಗೂ ಮೀನು­ಗಳನ್ನು ತಿನ್ನುವ ಇವು ಸಾಮಾನ್ಯವಾಗಿ ನದಿ ದಂಡೆಯ ಗುಡ್ಡಗಳ ಬಳಿ ಇರುತ್ತವೆ ಹಾಗೂ ಕೆಲವೊಮ್ಮೆ ನದಿಯ ದಂಡೆಯ ಮೇಲಿರುತ್ತವೆ. ಇವು ಇತರ ಪಕ್ಷಿಗಳಂತೆ ನದಿ ದಂಡೆಗಳು ಅಥವಾ ಕೊಳಗಳ ಬಳಿಯಿರುವ ಮರಗಳ ಮೇಲೆ ಗೂಡು ಕಟ್ಟುತ್ತವೆ.

ಬಿಳಿ ವರ್ಣದ ಲಿಟಲ್ ಇಗ್ರೆಟ್‌­ನಂತಿರುವ ಈ ಕಪ್ಪು ಪಕ್ಷಿಯ ಬಗ್ಗೆ ಜಾನಪದ ಗೀತೆಗಳಲ್ಲಿ ಉಲ್ಲೇಖಿಸ­ಲಾಗಿದೆ. ಈ ಹಕ್ಕಿಗಳು ಒಂದು ಬಂಡೆ ಯಿಂದ ಮತ್ತೊಂದು ಬಂಡೆಯ ಮೇಲೆ ಹಾರುತ್ತಾ ಸಮುದ್ರದ ಅಲೆಗಳ ಹಿಂದೆ ಓಡಾಡುತ್ತವೆ.

ಚಳಿಗಾಲದಲ್ಲಿ ವಲಸೆ: ಆಹಾರ ಹಾಗೂ ಸಂತಾನಾಭಿ­ವೃದ್ಧಿಗಾಗಿ ಗುಜರಾತ್‌ ಕರಾವಳಿ ಪ್ರದೇಶ ಹಾಗೂ ಮತ್ತಿತರ ಕಡೆಗಳಿಂದ ವೆಸ್ಟರ್ನ್‌ ರೀಫ್‌ ಇಗ್ರೆಟ್‌ ಪಕ್ಷಿಗಳು ಕಾರವಾರ ಮತ್ತು ಕೈಗಾ ಬಳಿಯಿರುವ ಕಾಳಿ ನದಿದಂಡೆಗಳಿಗೆ ವಲಸೆ ಬರುತ್ತವೆ.  ಚಳಿಗಾಲದಲ್ಲಿ ವಲಸೆ ಬರುವ ಈ ಹಕ್ಕಿಗಳು ಡಿಸೆಂಬರ್‌ನಿಂದ ಫೆಬ್ರುವರಿಗೆ ಇಲ್ಲಿ ನೆಲೆಸುತ್ತವೆ. ಜೋಡಿಯಾಗಿ ಬರುವ ಇವು ಸಂತಾನಾಭಿವೃದ್ಧಿ ನಂತರ ಮರಿಗಳೊಂದಿಗೆ ಸ್ವಸ್ಥಾನಕ್ಕೆ ಮರಳುತ್ತವೆ.

ಈ ಹಕ್ಕಿಗಳಲ್ಲದೇ ಕೊಕ್ಕರೆಗಳು, ರೋಸಿ ಸ್ಟಾರ್ಲಿಂಗ್, ವಾರ್ಬರ್‌ಗಳು, ಬಾತುಗಳು, ಆಸ್ಪ್ರೆ, ಇತ್ಯಾದಿ ಪಕ್ಷಿಗಳು ಕೂಡ ಇಲ್ಲಿಗೆ ವಲಸೆ ಬರುತ್ತವೆ. ಪಶ್ಚಿಮಘಟ್ಟದಲ್ಲಿ ರೂಬಿ ಥ್ರೋಟೆಡ್‌ ಬುಲ್‌ ಬುಲ್‌, ವರ್ಡಿಟರ್‌, ಗ್ರೀನ್‌ ಸ್ಯಾಂಡ್‌ಪೈಪರ್‌, ಗ್ರೇಟ್‌ ಹಾರ್ನ್‌ಬಿಲ್‌, ಮಲಬಾರ್‌ ಗ್ರೇ, ಮಲ ಬಾರ್‌ ಟೈಡ್‌ ಹಕ್ಕಿಗಳು ಸದಾ ಕಂಡುಬರುತ್ತವೆ.

‘ಚಳಿಗಾಲ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಗೆ ವಿವಿಧ ಜಾತಿಯ ಪಕ್ಷಿಗಳು ಆಗಮಿಸುತ್ತವೆ. ಆದರೆ, ವೆಸ್ಟರ್ನ್‌ ರೀಫ್‌ ಇಗ್ರೆಟ್‌ ಪಕ್ಷಿ ಕಾಣುವುದು ತುಂಬಾ ಅಪರೂಪ. ಕೈಗಾ ಅಣುಸ್ಥಾವರದಲ್ಲಿ ಶೀತಲೀಕರಣ ಪ್ರಕ್ರಿಯೆ ಬಳಿಕ ನೀರನ್ನು ಎರಡು ಕಿ.ಮೀ. ಕಾಲುವೆ ಮೂಲಕ ಕಾಳಿ ನದಿಗೆ ಬಿಡಲಾಗುತ್ತದೆ.

ಈ ನೀರಿನಲ್ಲಿ  ಉಷ್ಣಾಂಶ  ಮಾಮೂಲಿಗಿಂತ 2–3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿರುತ್ತದೆ. ಇವು ಮೀನುಗಳ ಸಂತಾನಾಭಿವೃದ್ಧಿಗೆ ಸಹಕಾರಿಯಾಗಿದೆ. ಹೆಚ್ಚಾಗಿ ಮೀನುಗಳು ಸಿಗುವುದರಿಂದ ಸಹಜವಾಗಿ ವಿವಿಧ ಜಾತಿಯ ಪಕ್ಷಿಗಳು ಆಹಾರಕ್ಕಾಗಿ ಇತ್ತ ಕಡೆ ಬರುತ್ತವೆ’ ಎನ್ನುತ್ತಾರೆ ಕೈಗಾ ಅಣುಶಕ್ತಿ ಘಟಕದ ವಿಜ್ಞಾನಿ ಪುಟ್ಟರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.