ADVERTISEMENT

ಕಾವ್ಯದ ಅನನ್ಯ ಸಾಧ್ಯತೆ ತೆರೆದಿಟ್ಟ ಕಾವ್ಯ ಕನ್ನಡಿ

ಧಾರವಾಡ ಸಾಹಿತ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಧಾರವಾಡ: ನೀನಾಸಂ ಪ್ರತಿಷ್ಠಾನವು ಆಯ್ದ ಕನ್ನಡ ಕವಿತೆಗಳನ್ನು ಆಧರಿಸಿ ರೂಪಿಸಿರುವ ಐದು ಕಿರುಚಿತ್ರ ಮಾಲಿಕೆಗಳನ್ನು ಶನಿವಾರ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

ಕುವೆಂಪು ಅವರ ‘ಸೋಮನಾಥಪುರ ದೇವಾಲಯ’, ಕೆ.ಎಸ್‌.ನರಸಿಂಹಸ್ವಾಮಿ ಅವರ ‘ನೀವಲ್ಲವೆ’, ಪು.ತಿ.ನ ಅವರ ‘ಹೊನಲ ಹಾಡು’, ಪ್ರತಿಭಾ ನಂದಕುಮಾರ್‌ ಅವರ ‘ಮುದುಕಿಯರಿಗಿದು ಕಾಲವಲ್ಲ’, ಸು.ರಂ.ಎಕ್ಕುಂಡಿ ಅವರ ‘ಮಿಥಿಲೆ’ ಕವಿತೆಗಳನ್ನು ಆಧರಿಸಿ ರೂಪಿಸಿದ ಕಿರುಚಿತ್ರಮಾಲಿಕೆಗಳು ಕಾವ್ಯದೊಳಗಿನ ಅನನ್ಯ ಸಾಧ್ಯತೆಯನ್ನು ತೆರೆದಿಟ್ಟವು. ಈ ಕಿರುಚಿತ್ರಗಳಿಗೆ ಸಭಿಕರಿಂದ ಕರತಾಡನದ ಮೊರೆತದ ಮೂಲಕ ಮೆಚ್ಚುಗೆ ವ್ಯಕ್ತವಾಯಿತು.

ಪ್ರತಿಷ್ಠಾನದ ಕೆ.ವಿ.ಶಿಶಿರ ಮಾತನಾಡಿ, ‘ಕನ್ನಡದ ಪದ್ಯಗಳಿಗೆ ಆಧುನಿಕ ಮಾಧ್ಯಮಗಳ ಮೂಲಕ ಮರುವ್ಯಾಖ್ಯಾನ ನೀಡುವುದು ಹಾಗೂ ಹೊಸ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ನೀನಾಸಂ ಪ್ರತಿಷ್ಠಾನವು ಕಾವ್ಯ ಕನ್ನಡಿ ಎಂಬ ಈ ಯೋಜನೆಯನ್ನು ರೂಪಿಸಿತು. ಈ ಯೋಜನೆಯಲ್ಲಿ ಹೊಸಗನ್ನಡದ ಪ್ರಮುಖ ಕವಿಗಳ ಆಯ್ದ ಕವಿತೆಗಳನ್ನು ಆಧರಿಸಿ, ಎಂಟು ಕಿರುಚಿತ್ರ ಮಾಲಿಕೆಗಳನ್ನು ರೂಪಿಸಲಾಗಿದೆ’ ಎಂದರು.

‘ಕವಿತೆಗಳನ್ನು ಬೇರೆ ಬೇರೆ ರೂಪಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚಲನಚಿತ್ರಕ್ಕೆಂದು ಹಾಡು ಬರೆಯುವುದು ಒಂದು ವಿಧಾನವಾದರೆ, ಕವಿತೆಯನ್ನು ಚಲನಚಿತ್ರಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳುವುದು ಇನ್ನೊಂದು ವಿಧಾನ. ಕವಿತೆಯನ್ನು ಓದಿ, ಅರ್ಥ ಮಾಡಿಕೊಂಡು, ಅದಕ್ಕೆ ದೃಶ್ಯರೂಪ ಕೊಡುವುದು ಮತ್ತೊಂದು ವಿಧಾನ. ಈ ಮೂರನೇ ವಿಧಾನವನ್ನು ಅನುಸರಿಸುತ್ತಿರುವ ನಾವು, ಕವಿತೆಯ ಅರ್ಥ ಸಾಧ್ಯತೆಗಳು, ಒಳನೋಟಗಳನ್ನು ವಿಸ್ತರಿಸುವ ಉದ್ದೇಶವನ್ನು ಇಟ್ಟುಕೊಂಡು ಕಿರುಚಿತ್ರಗಳನ್ನು ರೂಪಿಸುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.