ADVERTISEMENT

ಕುಮಾರಸ್ವಾಮಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ರಾಮನಗರ: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಇದೇ 23ರಂದು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಸ್ವತಃ ಕುಮಾರಸ್ವಾಮಿ ಸೋಮವಾರ ಇಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.

‘ನನ್ನ ಹೃದಯದ ಟಿಷ್ಯೂ ವಾಲ್ವ್ ಬದಲಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. 15 ದಿನ ವಿಶ್ರಾಂತಿ ಪಡೆದು ಬಳಿಕ ಎಂದಿನಂತೆ ಪಕ್ಷ ಸಂಘಟನೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನನ್ನ ಆರೋಗ್ಯದ ವಿಚಾರದಲ್ಲಿ ಯಾರೂ ಗೊಂದಲಕ್ಕೆ ಒಳಗಾಗಬಾರದು’ ಎಂದರು.

‘2007ರ ಡಿಸೆಂಬರ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ವೇಳೆ ನನ್ನ ಹೃದಯದ ವಾಲ್ವ್ ಬದಲಿಸಲಾಗಿತ್ತು. ಇದರ ಜೀವಿತಾವಧಿ ಕೇವಲ 10 ವರ್ಷ ಮಾತ್ರ. ಈಚೆಗೆ ಆ್ಯಂಜಿಯೋಗ್ರಾಂ ಮಾಡಿಸಿದಾಗಲೂ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಆದರೆ ಈಚೆಗೆ ಕೆಮ್ಮು ನನ್ನನ್ನು ವಿಪರೀತವಾಗಿ ಬಾಧಿಸುತ್ತಿದ್ದು, ಇದರಿಂದ ಹೃದಯದ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ.

ADVERTISEMENT

ಇಲ್ಲಿನ ವೈದ್ಯರು ನನ್ನ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಂಡಿದ್ದು, ಅಮೆರಿಕಾದ ತಜ್ಞರೊಂದಿಗೆ ಸಂಪರ್ಕದಲ್ಲಿ ಇದ್ದಾರೆ’ ಎಂದು ತಿಳಿಸಿದರು.

ಇಸ್ರೇಲ್‌ನಲ್ಲೂ ಕಾಡಿದ ಅನಾರೋಗ್ಯ: ‘ಕೃಷಿ ಅಧ್ಯಯನ ಪ್ರವಾಸಕ್ಕೆಂದು ಇಸ್ರೇಲ್‌ಗೆ ತೆರಳಿದ ಸಂದರ್ಭವೂ ಅನಾರೋಗ್ಯಕ್ಕೆ ಸಿಲುಕಿದ್ದೆ. ಅಲ್ಲಿನ ವೈದ್ಯರು ಹೃದಯ ಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದ್ದರು. ಆದರೆ ಅದಕ್ಕೆ ಒಪ್ಪದೇ ತಾತ್ಕಾಲಿಕವಾಗಿ ಔಷಧಗಳನ್ನು ತೆಗೆದುಕೊಂಡು ಭಾರತಕ್ಕೆ ವಾಪಸ್ ಆಗಿದ್ದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.