ADVERTISEMENT

ಕುರಿ, ಮೇಕೆ ಒಕ್ಕೂಟ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:36 IST
Last Updated 3 ಸೆಪ್ಟೆಂಬರ್ 2015, 19:36 IST

ದಾವಣಗೆರೆ: ಕೆಎಂಎಫ್‌ ಮಾದರಿಯಲ್ಲೇ ಕುರಿ, ಮೇಕೆಗಳ ಒಕ್ಕೂಟ ಸ್ಥಾಪನೆಗೆ ಸಿದ್ಧತೆ ನಡೆದಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಂಡಿತರಾವ್‌ ಚಿದ್ರಿ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ 500 ಕುರಿ ಉತ್ಪಾದಕರ ಸಹಕಾರ ಸಂಘಗಳಿವೆ. ಮುಂದಿನ ಮೂರು ತಿಂಗಳ ಒಳಗೆ ಇನ್ನು 500 ಸಹಕಾರ ಸಂಘಗಳನ್ನು ಸ್ಥಾಪಿಸಲಾಗುವುದು. ಈ ಸಂಘಗಳಿಗೆ ಜಿಲ್ಲಾವಾರು ಚುನಾವಣೆ ನಡೆಸಿ ಮಹಾಮಂಡಳ ರಚಿಸಲಾಗುವುದು. ನಂತರ ರಾಜ್ಯ ಮಟ್ಟದಲ್ಲೂ ಕೆಎಂಎಫ್‌ ಮಾದರಿಯಲ್ಲಿ ಒಕ್ಕೂಟ ಸ್ಥಾಪಿಸಲಾಗುವುದು ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಒಕ್ಕೂಟ ಸ್ಥಾಪನೆಯಿಂದ ಕುರಿ, ಮೇಕೆಗಳ ಬಗ್ಗೆ ಸಂಶೋಧನೆ, ತಳಿ ನೀತಿ, ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಲು ಅನುಕೂಲವಾಗಲಿದೆ ಎಂದರು.

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳನ್ನು ಬಲವರ್ಧನೆಗೊಳಿಸಲು ರಾಜ್ಯ ಸರ್ಕಾರ ₹ 25 ಕೋಟಿ ಅನುದಾನ ಮಂಜೂರು ಮಾಡಿದ್ದು, ಈಗಾಗಲೇ ₹ 5 ಕೋಟಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತವಾಗಿ ಆಯ್ದ 100 ಸಹಕಾರ ಸಂಘಗಳಿಗೆ ತಲಾ ₹ 5ಲಕ್ಷ ಅನುದಾನವನ್ನು ತಿಂಗಳ ಒಳಗಾಗಿ ಬಿಡುಗಡೆ ಮಾಡಲಾಗುವುದು ಎಂದರು.

ವೈಜ್ಞಾನಿಕ ರೀತಿಯಲ್ಲಿ ಕುರಿ ಮತ್ತು ಮೇಕೆಗಳನ್ನು ಮಾರಾಟ ಮಾಡಲು ರಾಜ್ಯದ ಆಯ್ದ 10 ಎಪಿಎಂಸಿ ಸಂತೆಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಈ ಯೋಜನೆ ಅನುಷ್ಠಾನಗೊಳಿಸಲು ₹ 10 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಅನಾರೋಗ್ಯಪೀಡಿತ ಕುರಿ ಮತ್ತು ಮೇಕೆಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ 18 ಜಿಲ್ಲೆಗಳಿಗೆ 18 ಸಂಚಾರಿ ಅಂಬುಲೆನ್ಸ್ ವಾಹನಗಳನ್ನು ನೀಡಿದ್ದು, ಅವು ಶೀಘ್ರ ಸೇವೆಗೆ ಲಭ್ಯವಾಗಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.