ADVERTISEMENT

ಕುವೆಂಪು ಮೆಚ್ಚಿನ ಬದನವಾಳು ಖಾದಿ

ಚಿತ್ರೋತ್ಸವ: ವನ್ಯಜೀವಿ ತಜ್ಞ ಕೃಪಾಕರ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2015, 19:39 IST
Last Updated 4 ಏಪ್ರಿಲ್ 2015, 19:39 IST

ಮೈಸೂರು: ಬದನವಾಳಿನ ಖಾದಿ ಬಟ್ಟೆಗೆ ಮನಸೋತಿದ್ದ ಕುವೆಂಪು ಈ ಕೇಂದ್ರದ ಖಾದಿಯನ್ನು ಧರಿಸುತ್ತಿದ್ದರು. ಇಲ್ಲಿ ಗುಡಿಕೈಗಾರಿಕೆ ಅಳಿದ ನಂತರ, ಅನಿವಾರ್ಯವಾಗಿ ಅವರು ಕಾಟನ್‌ ಬಟ್ಟೆಗೆ ಹೊಂದಿಕೊಂಡರು ಎಂದು ವನ್ಯಜೀವಿ ತಜ್ಞ ಕೃಪಾಕರ ಹೇಳಿದರು."

ಬದನವಾಳು ಸತ್ಯಾಗ್ರಹದ ಅಂಗವಾಗಿ ನಗರದ ರಂಗಾಯಣದ ಶ್ರೀರಂಗದಲ್ಲಿ ಶನಿವಾರ ಆಯೋಜಿಸಿದ್ದ ಚಲನಚಿತ್ರೋತ್ಸವ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.

ಕುವೆಂಪು ಅವರು ಬದನವಾಳಿನಲ್ಲಿ ತಯಾರಾಗುತ್ತಿದ್ದ ಖಾದಿ ಬಟ್ಟೆಯು ಪಂಚೆ, ಜುಬ್ಬಾ, ಪೈಜಾಮಗಳನ್ನು ಧರಿಸುತ್ತಿದ್ದರು. ಇಲ್ಲಿ ಕೇಂದ್ರ ಮುಚ್ಚಿದ ನಂತರ ಇದೇ ಗುಣಮಟ್ಟದ ಖಾದಿ ಬಟ್ಟೆ ಬೇರೆ ಕಡೆ ಇದ್ದರೆ ತಂದುಕೊಡಿ ಎಂದು ಆಪ್ತರಲ್ಲಿ ಕೇಳಿಕೊಳ್ಳುತ್ತಿದ್ದರು. ಆ ರೀತಿ ಖಾದಿ ಸಿಕ್ಕದಿದ್ದರಿಂದ ನಂತರ ಅವರು ಕಾಟನ್‌ ಬಟ್ಟೆ ಮೊರೆ ಹೋದರು ಎಂದರು.

ತಗಡೂರು ರಾಮಚಂದ್ರರಾಯರು, ಗಾಂಧೀಜಿ ಮೊದಲಾದ ಮಹನೀಯರು ಈ ಖಾದಿ ಕೇಂದ್ರವನ್ನು ಪೋಷಿಸಿದ್ದರು. ಇಲ್ಲಿನ ಕೇಂದ್ರಕ್ಕೆ ದೊಡ್ಡ ಇತಿಹಾಸ ಇದೆ. ಈಗ ರಂಗಕರ್ಮಿ ಪ್ರಸನ್ನ ಅವರು ‘ಸುಸ್ಥಿರ ಬದುಕು ಪರಿಕಲ್ಪನೆ’ಯಡಿ ಬದನವಾಳು ಸತ್ಯಾಗ್ರಹವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಳವಳಿಗೆ ನಾವೆಲ್ಲರೂ ಬೆಂಬಲ ವ್ಯಕ್ತಪಡಿಸಬೇಕಿದೆ ಎಂದು ಹೇಳಿದರು.

ಸರ್ಕಾರದ ಕಾರ್ಯಕ್ರಮಗಳ ಪರಿಕಲ್ಪನೆ, ಘೋಷಣೆಗಳು ಚೆನ್ನಾಗಿರುತ್ತವೆ. ಆದರೆ, ಆ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳದಿರುವುದು ಬೇಸರದ ಸಂಗತಿ. ರೈತರ ಸ್ನೇಹಿ ಎಂದು ಎಲ್ಲರೂ ಹೇಳುತ್ತಾರೆ. ವಾಸ್ತವದಲ್ಲಿ ರೈತ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಂಗಾಯಣ ನಿರ್ದೇಶಕ ಎಚ್‌. ಜನಾರ್ದನ್‌ ಮಾತನಾಡಿ, ನಗರಗಳಲ್ಲಿ ಆಡಂಬರದ ಅಸಹ್ಯದ ಬದುಕನ್ನು ಸಾಗಿಸುತ್ತಿದ್ದೇವೆ. ಹಳ್ಳಿಗೆ ತೆರಳಿದರೆ ಕೃಷಿ  ಬದುಕಿಗೆ ಎಷ್ಟು ಅನಿವಾರ್ಯ ಎಂಬುದು ತಿಳಿಯುತ್ತದೆ ಎಂದರು. ಸಂತೋಷ್‌ ಕೌಲಗಿ ಅವರು ಬದನವಾಳು ಪಾದಯಾತ್ರೆ ಏ. 15ರಂದು ಆರಂಭಗೊಳ್ಳಲಿದೆ. ಆಯಿರಳ್ಳಿ, ಸುತ್ತೂರು ಮೂಲಕ 19ರಂದು ಬದನವಾಳು ತಲುಪಲಿದೆ ಎಂದರು.

ಮುಖ್ಯಾಂಶಗಳು
*ಇಂದು ‘ಮಹೂವಾ ಮೆಮೊಯರ್‌್ಸ’, ನಾಳೆ ‘ದಿ ಸಾಲ್ಟ್‌ ಸ್ಟೋರಿಸ್‌’
* ಪಾದಯಾತ್ರೆ ಏ. 15ರಂದು ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.