ADVERTISEMENT

ಕುವೆಂಪು ವಿವಿ ಪ್ರಭಾರ ಕುಲಪತಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 19 ಮೇ 2015, 19:30 IST
Last Updated 19 ಮೇ 2015, 19:30 IST

ಶಿವಮೊಗ್ಗ: ಗೌರವ ಡಾಕ್ಟರೇಟ್‌ ನೀಡುವ ವಿಚಾರ ವಿವಾದದ ಸ್ವರೂಪ ಪಡೆದು ಕೊಂಡ ಕಾರಣ ನೊಂದ ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಮಾದೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಿಂಡಿಕೇಟ್‌ ಸೂಚಿಸಿದ ಐವರಲ್ಲಿ ಕೇವಲ ಒಬ್ಬರ ಹೆಸರನ್ನು ಮಾತ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದು ಸಿಂಡಿಕೇಟ್‌ ಹಾಗೂ ಪ್ರಭಾರ ಕುಲಪತಿ ಮಧ್ಯೆ ಸಂಘರ್ಷಕ್ಕೆ ನಾಂದಿ ಹಾಡಿತ್ತು.

ಜೂನ್‌ನಲ್ಲಿ ನಡೆಯುವ ಘಟಿಕೋತ್ಸ ವದಲ್ಲಿ ಚಿತ್ರನಟ ವಿ.ರವಿಚಂದ್ರನ್‌, ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌. ದೊರೆಸ್ವಾಮಿ, ಮಾಜಿ ಶಿಕ್ಷಣ ಸಚಿವ ಎಚ್‌.ಜಿ.ಗೋವಿಂದೇಗೌಡ, ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಹುಲಿಕಲ್‌ ನಟರಾಜ್ ಈ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್‌ ನೀಡಬೇಕು ಎಂದು ಈಚೆಗೆ ನಡೆದ ಸಿಂಡಿಕೇಟ್‌ ಸಭೆ ಶಿಫಾರಸು ಮಾಡಿತ್ತು.

ಸರ್ಕಾರದ ನಿಯಮದಂತೆ ಮೂವರಿಗೆ ಡಾಕ್ಟರೇಟ್‌ ನೀಡಲು ಅವಕಾಶ ಇದ್ದರೂ, ಕೇವಲ ದೊರೆಸ್ವಾಮಿ ಅವರನ್ನು ಮಾತ್ರ ಈ ಗೌರ
ವಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸಿಂಡಿಕೇಟ್‌ ಸದಸ್ಯರು ಆರೋಪಿಸಿದ್ದರು.

ಈ ಕುರಿತು ಮಂಗಳವಾರ ಬೆಳಿಗ್ಗೆ (ಮೇ 18) ‘ಪ್ರಜಾವಾಣಿ’ಯಲ್ಲಿ ಬಂದ ‘ಸಿಂಡಿಕೇಟ್‌–ಪ್ರಭಾರ ಕುಲಪತಿ ಮಧ್ಯೆ ಜಟಾಪಟಿ’ ವರದಿ  ಓದಿದ ಪ್ರಭಾರ ಕುಲಪತಿಗಳು, ಕಚೇರಿಗೆ ಆಗಮಿಸುತ್ತಿದ್ದಂತೆ ಫ್‍ಯಾಕ್ಸ್ ಮೂಲಕ ರಾಜ್ಯಪಾಲರಿಗೆ ರಾಜೀನಾಮೆ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.