ADVERTISEMENT

ಕೃಷ್ಣಮೃಗ ಬೇಟೆ:ಮೂವರ ಬಂಧನ

ಕೆಜಿಎಫ್‌ ಬಳಿ ಕಾಡಿನಲ್ಲಿನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಆರೋಪಿಗಳಾದ ಮಹಮ್ಮದ್ ಜಬ್ರಾನ್‌, ಸೆಲ್ವಂ ಮತ್ತು ಮಂಜುನಾಥ್‌
ಆರೋಪಿಗಳಾದ ಮಹಮ್ಮದ್ ಜಬ್ರಾನ್‌, ಸೆಲ್ವಂ ಮತ್ತು ಮಂಜುನಾಥ್‌   
ಕೆಜಿಎಫ್‌ (ಕೋಲಾರ ಜಿಲ್ಲೆ): ನಗರದ ಹೊರವಲಯದ ಬಡಮಾಕನಹಳ್ಳಿ ಕಾಡಿನಲ್ಲಿ ಕೃಷ್ಣಮೃಗಗಳನ್ನು ಕೊಂದು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮೂವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಭಾನುವಾರ ಬಂಧಿಸಿದ್ದಾರೆ.
 
ಆರೋಪಿಗಳು ಬೆಂಗಳೂರಿನ ಮಹಮ್ಮದ್‌ ಜಬ್ರಾನ್ ಹಾಗೂ ಆತನ ಸಹಚರರಾದ ಸೆಲ್ವಂ, ಮಂಜುನಾಥ್‌ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಜಬ್ರಾನ್‌ ಕೃತ್ಯಕ್ಕೆ ಬಳಸಿದ ಪಾಯಿಂಟ್‌ 202   ರೈಫಲ್‌ಅನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
 
ಭಾನುವಾರ ಬೆಳಿಗ್ಗೆ 5.30ರ ಹೊತ್ತಿಗೆ ಅಕ್ರಮವಾಗಿ ಕಾಡು ಪ್ರವೇಶಿಸಿದ್ದರು. ಸುಮಾರು 4 ರಿಂದ 5 ವರ್ಷ ವಯಸ್ಸಿನ ಒಂದು ಗಂಡು ಮತ್ತು ಹೆಣ್ಣು ಕೃಷ್ಣಮೃಗವನ್ನು ಗುಂಡಿಕ್ಕಿ ಸಾಯಿಸಿದ್ದರು. ನಂತರ ಅವುಗಳನ್ನು ಬೆಂಗಳೂರಿಗೆ ಸಾಗಿಸಲು ಯತ್ನಿಸಿದಾಗ ಸಿಕ್ಕಿ ಬಿದ್ದರು ಎಂದು ತಿಳಿಸಿದ್ದಾರೆ.
 
ಜಬ್ರಾನ್‌  ಕಾಡಿನ ಸಮೀಪದಲ್ಲಿಯೇ ತೋಟದ ಮನೆಯನ್ನು ಹೊಂದಿದ್ದಾನೆ. ಆಗಾಗ ಬೆಂಗಳೂರಿನಿಂದ ಇಲ್ಲಿಗೆ ಬರುತ್ತಿದ್ದ ಈತನ ಚಲನವಲನಗಳ ಬಗ್ಗೆ ನಿಗಾ ಇಡಲಾಗಿತ್ತು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
 
ಒಂದನೇ ಆರೋಪಿ ಜಬ್ರಾನ್‌  ಈಚೆಗೆ ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿದ ತಂಡದ ಸದಸ್ಯನಾಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.