ADVERTISEMENT

ಕೆಪಿಎಸ್‌ಸಿ: ಐಶ್ವರ್ಯಾಗೆ ಮೊದಲ ಸ್ಥಾನ

‘ಸಂದರ್ಶನದ ಹಿಂದಿನ ರಾತ್ರಿ ಮಗು ಅಳುತ್ತಿದ್ದರಿಂದ ನಿದ್ದೆಯೇ ಮಾಡಿರಲಿಲ್ಲ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಆರ್‌.ಐಶ್ವರ್ಯಾ
ಆರ್‌.ಐಶ್ವರ್ಯಾ   

ಮೈಸೂರು: ‘ಗೃಹಿಣಿಯಾಗಿ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಶ್ರಮ ಪಡಬೇಕಾಯಿತು. ಬೆಳಿಗ್ಗೆ, ಸಂಜೆ ಮನೆಗೆಲಸ, ನಡುವೆ ಕಚೇರಿ ಕೆಲಸ ಮಾಡಬೇಕು. ರಾತ್ರಿ 10ರಿಂದ ಮಧ್ಯರಾತ್ರಿ 1 ಗಂಟೆವರೆಗೆ ಅಭ್ಯಾಸ ನಡೆಸುತ್ತಿದ್ದೆ. 2 ತಿಂಗಳ ಮಗುವನ್ನು ಸಂಬಾಳಿಸಿಕೊಂಡು ಸಂದರ್ಶನಕ್ಕೆ ತಯಾರಿ ನಡೆಸಿದೆ...’

–ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯ ತಾತ್ಕಾಲಿಕ ಪಟ್ಟಿಯಲ್ಲಿ ಮೊದಲ ರ‍್ಯಾಂಕ್‌ ಪಡೆದಿರುವ ಮೈಸೂರಿನ ಆರ್‌.ಐಶ್ವರ್ಯಾ.

‘ಬಾಣಂತಿ ಪೋಷಣೆಗಾಗಿ ನಾನೀಗ ಪೋಷಕರ ಮನೆಯಲ್ಲಿ ಇದ್ದೇನೆ. ಮಗು ಜನಿಸಿ ಎರಡು ತಿಂಗಳಾಗಿದೆ. ಸಂದರ್ಶನಕ್ಕೆ ತಯಾರಿ ನಡೆಸಲು ತುಂಬಾ ಕಷ್ಟವಾಯಿತು. ಮಗು ಸದಾ ಅಳುತ್ತಿರುತ್ತದೆ. ಅದು ನಿದ್ದೆ ಮಾಡುವಾಗ ಓದುತ್ತಿದ್ದೆ. ಸಂದರ್ಶನದ ಹಿಂದಿನ ರಾತ್ರಿ ಮಗು ತುಂಬಾ ರಂಪಾಟ ಮಾಡಿತು. ಇಡೀ ರಾತ್ರಿ ನಾನು ಸರಿಯಾಗಿ ನಿದ್ದೆ ಮಾಡಿರಲಿಲ್ಲ’ ಎಂದು ಅವರು ಆ ಕ್ಷಣಗಳನ್ನು ತೆರೆದಿಟ್ಟರು.

‘ನನ್ನ ಈ ಸಾಧನೆಯ ಹಿಂದೆ ಪೋಷಕರು, ಪತಿ, ಅತ್ತೆ, ಮಾವನ ಶ್ರಮವಿದೆ. ಹೀಗಾಗಿ, ನನ್ನ ಯಶಸ್ಸು ಕುಟುಂಬಕ್ಕೆ ಸಮರ್ಪಣೆ’ ಎಂದರು.
ಮೈಸೂರಿನ ಟೆರೇಷಿಯನ್‌ ಹಾಗೂ ಮರಿಮಲ್ಲಪ್ಪ ವಿದ್ಯಾಸಂಸ್ಥೆಯಲ್ಲಿ ಓದಿರುವ ಐಶ್ವರ್ಯಾ ಎಸ್ಸೆಸ್ಸೆಲ್ಸಿಯಲ್ಲಿ 4ನೇ ರ‍್ಯಾಂಕ್‌, ಪಿಯುನಲ್ಲಿ 6ನೇ ರ‍್ಯಾಂಕ್‌ ಹಾಗೂ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್‌ನಲ್ಲಿ (ಎನ್‌ಐಇ) ಅಗ್ರಸ್ಥಾನದೊಂದಿಗೆ ಕಂಪ್ಯೂಟರ್‌ ವಿಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದಾರೆ. ಪತಿ ಮಹೇಶ್‌ ಆರಾಧ್ಯ ಎಂಜಿನಿಯರ್‌.

ಸಿದ್ಧಾರ್ಥನಗರ ನಿವಾಸಿ ರಾಮಾರಾಧ್ಯ ಮತ್ತು ವಾಣಿ ದಂಪತಿ ಪುತ್ರಿ ಐಶ್ವರ್ಯಾ, ಬೆಂಗಳೂರಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.

‘ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ (ಎಂಎನ್‌ಸಿ) ಒಳ್ಳೆಯ ಉದ್ಯೋಗ ಲಭಿಸಿತ್ತು. ಅಮೆರಿಕಕ್ಕೆ ಹೋಗುವ ಅವಕಾಶವಿತ್ತು. ಆದರೆ, ನಾಗರಿಕ ಸೇವೆಯಲ್ಲಿ ಕಾರ್ಯನಿರ್ವಹಿಸಬೇಕೆಂಬ ಆಸೆಯಿಂದ ಅದನ್ನು ತಿರಸ್ಕರಿಸಿದೆ. ಈಗ ಒಂದು ಕನಸು ನನಸಾಗಿದೆ. ಮುಂದೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತೇನೆ’ ಎಂದ ಅವರ ಧ್ವನಿಯಲ್ಲಿ ವಿಶ್ವಾಸ ಎದ್ದು ಕಾಣುತಿತ್ತು.

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ಆಯ್ಕೆ ಮಾಡಿಕೊಂಡಿದ್ದೆ. ಕನ್ನಡ ಹಾಗೂ ಇಂಗ್ಲಿಷ್‌ ಪತ್ರಿಕೆಗಳ ನಿತ್ಯ ಓದು, ಪ್ರಮುಖವಾಗಿ ‘ಪ್ರಜಾವಾಣಿ’ ಸಂಪಾದಕೀಯ ನೆರವಿಗೆ ಬಂತು. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಬಂಧ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸಲು ಇದರಿಂದ ಸಹಾಯವಾಯಿತು ಎಂದರು.

ಸಾಧನೆಗೆ ಅಡ್ಡಿಯಾಗದ ಬಡತನ
ಚಿಕ್ಕೋಡಿ (ಬೆಳಗಾವಿ ಜಿಲ್ಲೆ):
ಕರ್ನಾಟಕ ಲೋಕಸೇವಾ ಆಯೋಗ 2014ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗಾಗಿ ನಡೆಸಿದ ಪರೀಕ್ಷೆಯ ತಾತ್ಕಾಲಿಕ ಪಟ್ಟಿಯಲ್ಲಿ ತಾಲ್ಲೂಕಿನ ಕಬ್ಬೂರ ಗ್ರಾಮದ ಸಂತೋಷ್ ಶಂಕರ ಕಾಮಗೌಡ ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ.

ಕನ್ನಡ ಮಾಧ್ಯಮದಲ್ಲಿಯೇ ಪರೀಕ್ಷೆ ಬರೆದು 1258 ಅಂಕ ಪಡೆದಿರುವ ಅವರು, ಉಪ ವಿಭಾಗಾಧಿಕಾರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದಾರೆ.
ಕೃಷಿ ಕುಟುಂಬದವರಾದ ಅವರು, ಬಡತನದಲ್ಲೇ ಬೆಳೆದವರು. ತಂದೆ ಶಂಕರ ಅನಕ್ಷರಸ್ಥರಾದರೆ, ತಾಯಿ ಪಾರ್ವತಿ ನಾಲ್ಕನೇ ತರಗತಿವರೆಗೆ ಓದಿದ್ದಾರೆ.

ADVERTISEMENT

2008ರಲ್ಲಿ ಅಂಚೆ ಸಹಾಯಕ ಹುದ್ದೆಗೆ ನೇಮಕಾತಿ ಹೊಂದಿದ್ದ ಸಂತೋಷ್‌, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆಯುವ ಜೊತೆಗೆ ಕೆಪಿಎಸ್‌ಸಿ ಪರೀಕ್ಷೆಗೂ ಓದ ತೊಡಗಿದರು. 

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯಲ್ಲಿ ರಾಜ್ಯಕ್ಕೆ 19ನೇ ರ್‍ಯಾಂಕ್ ಪಡೆದು ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, ಆ ಆಯ್ಕೆ ಪಟ್ಟಿ ತಿರಸ್ಕೃತವಾಯಿತು. ಆದರೂ, ಛಲಬಿಡದೇ 2014ನೇ ಸಾಲಿನ ಪರೀಕ್ಷೆಯನ್ನೂ ಎದುರಿಸಿ ಯಶಸ್ಸು ಗಳಿಸಿದ್ದಾರೆ.

‘ಮಗನ ಪರೀಕ್ಷೆಯ ಫಲಿತಾಂಶ ಕೇಳಿ 20 ವರ್ಷಗಳ ಕಷ್ಟದ ದಿನಗಳು ಮರೆತು ಹೋದವು....’ ಎಂದು ಅವರ ತಾಯಿ ಪಾರ್ವತಿ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.