ADVERTISEMENT

ಕೆ.ಪಿ.ಎಸ್‌.ಸಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ: ಸಂದರ್ಶನ ಮುಂದೂಡಲು ಮನವಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST
ಕೆ.ಪಿ.ಎಸ್‌.ಸಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ: ಸಂದರ್ಶನ ಮುಂದೂಡಲು ಮನವಿ
ಕೆ.ಪಿ.ಎಸ್‌.ಸಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ: ಸಂದರ್ಶನ ಮುಂದೂಡಲು ಮನವಿ   

ದಾವಣಗೆರೆ: ‘ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇಮಕ ಮಾಡಲು ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಇತರ ಸಮುದಾಯಕ್ಕೆ ಸೇರಿದ ನಾಲ್ವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದ್ದು ಅವರು ಅಂಕಿತ ಹಾಕಿಲ್ಲ. ಹೀಗಾಗಿ ಸೋಮವಾರ ಆರಂಭಗೊಳ್ಳಲಿರುವ ಕೆ.ಪಿ.ಎಸ್‌.ಸಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಅಭ್ಯರ್ಥಿಗಳ ನೇಮಕಾತಿ ಸಂದರ್ಶನವನ್ನು ಮುಂದೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಡಾ.ಬಾಬು ಜಗಜೀವನರಾಂ ಭವನದ ಲೋಕಾರ್ಪಣೆ ಸಮಾರಂಭದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೆ.ಪಿ.ಎಸ್‌.ಸಿಯಲ್ಲಿ ನಾಲ್ಕು ಸದಸ್ಯ ಸ್ಥಾನಗಳು ಖಾಲಿ ಇವೆ. ಇದಕ್ಕೆ ಸಂಬಂಧಿಸಿ ಪಟ್ಟಿಯನ್ನು ಸಿದ್ಧಪಡಿಸಿ ಈಗಾಗಲೇ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದೆ. ಆದರೆ, ರಾಜ್ಯಪಾಲರು ಸಹಿ ಮಾಡಲು ವಿಳಂಬ ಮಾಡಿದ್ದಾರೆ. ಈ ಸದಸ್ಯರ ನೇಮಕಾತಿ ನಡೆದ ಬಳಿಕವೇ ಸಂದರ್ಶನ ನಡೆಸುವಂತೆ ಕೋರಲಾಗುವುದು’ ಎಂದು ಹೇಳಿದರು.

ADVERTISEMENT

‘ಕೆ.ಪಿ.ಎಸ್‌.ಸಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಸದಸ್ಯರು ಇಲ್ಲದಿರುವುದರಿಂದ ತಮಗೆ ಅನ್ಯಾಯವಾಗಲಿದೆ ಎಂದು ಸಂದರ್ಶನಕ್ಕೆ ಆಯ್ಕೆಯಾದ ಕೆಲ ಅಭ್ಯರ್ಥಿಗಳು ನನಗೆ ಈಚೆಗೆ ಮನವಿ ಸಲ್ಲಿಸಿದ್ದರು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.