ADVERTISEMENT

ಕೊಳವೆ ಬಾವಿ ಅವ್ಯವಹಾರ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಬೆಳಗಾವಿ: ‘ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ಕೊರೆಸುವ ಕೊಳವೆ ಬಾವಿಗಳಿಗೆ ನಿಯಮಾನುಸಾರ ಉತ್ತಮ ಗುಣಮಟ್ಟದ ಕೇಸಿಂಗ್‌ ಪೈಪ್‌ ಅಳವಡಿಸುತ್ತಿಲ್ಲ. ಕಳಪೆ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆಗೆ ಆದೇಶ ನೀಡಬೇಕು’ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ಕಾರ ಕೊರೆಯಿಸುವ ಕೊಳವೆ ಬಾವಿಗೆ ‘ಬಿ’ ಗ್ರೇಡ್‌ನ 6 ಮಿ.ಮೀ ವ್ಯಾಸದ, 19 ಕೆ.ಜಿ. ತೂಕದ ಕೇಸಿಂಗ್‌ ಅಳವಡಿಸಬೇಕು ಎಂಬ ನಿಯಮವಿದೆ. ಆದರೆ, 2.3 ಮಿ.ಮೀ ವ್ಯಾಸದ 3 ಕೆ.ಜಿ ಪೈಪ್‌ ಅಳವಡಿಸಿರುವುದು ಕಂಡುಬಂದಿದೆ. ಈ ಕುರಿತು ತನಿಖೆ ಅಗತ್ಯವಿದೆ ಎಂದು ಹೇಳಿದರು.

ಕೊಳವೆ ಬಾವಿ ಕೊರೆಯುವ ಟೆಂಡರ್‌ ಕರೆಯುವಲ್ಲಿ ಇಲಾಖೆ ಎಡವಿದೆ. ವೈಜ್ಞಾನಿಕವಾದ ದರ ನಿಗದಿ ಮಾಡದಿರುವುದೂ ಗುಣಮಟ್ಟದ ಕೇಸಿಂಗ್‌ ಹಾಕದಿರಲು ಕಾರಣವಾಗಿದೆ ಎಂದು ಅವರು ದೂರಿದರು.

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರಾಮೀಣ ನೀರು ಸರಬರಾಜು ವಿಭಾಗದ ಕಚೇರಿಗಳಿಗೆ ಪೂರೈಸಿರುವ ಪೀಠೋಪಕರಣಗಳ ಖರೀದಿಯಲ್ಲೂ ಅವ್ಯವಹಾರ ನಡೆದಿದೆ. ಈ ಕುರಿತೂ ತನಿಖೆ ನಡೆಸಬೇಕಿದೆ ಎಂದು ಅವರು ಮನವಿ ಮಾಡಿದರು.

ಈ ವಿಭಾಗಕ್ಕೆ ಇದುವರೆಗೆ ಸಿಬ್ಬಂದಿಯನ್ನೇ ನೇಮಿಸಿಲ್ಲ. ಕೆಲವೆಡೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಮಾತ್ರ ನೇಮಿಸಲಾಗಿದೆ. ಕೂಡಲೇ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಗೊಂದಲಗಳು ಇವೆ. ಇದರಿಂದಾಗಿ ಆ ಯೋಜನೆ ‘ಕನ್ನಡಿಯೊಳಗಿನ ಗಂಟು’ ಎಂಬಂತಾಗಿದೆ. ಕೂಡಲೇ ಎಲ್ಲ ಗೊಂದಲಗಳನ್ನು ನಿವಾರಿಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.

ಗೊಂದಲ ಇಲ್ಲ: ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ, ‘ಯೋಜನೆ ಅನುಷ್ಠಾನದಲ್ಲಿ ಯಾವುದೇ ಗೊಂದಲಗಳಿಲ್ಲ.

ಈ ಹಿಂದೆ ನಡೆಯುತ್ತಿದ್ದ ಲೂಟಿಯನ್ನು, ಮಾರ್ಚ್‌ ಅಂತ್ಯಕ್ಕೆ ನೀಡಲಾಗುತ್ತಿದ್ದ ಖೊಟ್ಟಿ ಲೆಕ್ಕವನ್ನು ನಾವು ತಡೆದಿದ್ದೇವೆ. ಇದನ್ನು ಕೇಂದ್ರದ ಸಚಿವರೇ ಒಪ್ಪಿದ್ದಾರೆ’ ಎಂದು ಹೇಳಿದರು.

‘ವಿಮಾನ ನಿಲ್ದಾಣಗಳಲ್ಲಿ ಇರುವಂತಹ ಶವರ್‌ ಇರುವ ಸ್ನಾನಗೃಹ, ಶೌಚಾಲಯ ಸೌಲಭ್ಯವನ್ನು ನಿಮಗೆ ಒದಗಿಸಲು ಬಂದರೆ ಕಾಗೇರಿ ತಡೆಯುತ್ತಿದ್ದಾರೆ ಎಂದು ನಮ್ಮೂರಿಗೇ ಬಂದು ಜನರೆದುರು ನೀವು ಹೇಳಬಹುದು. ಆ ಜಾಣತನ ನಿಮಗೆ ಕರಗತವಾಗಿದೆ’ ಎಂದು ಕಾಗೇರಿ ಅವರು ವ್ಯಂಗ್ಯವಾಡಿದರು.

‘ನಿಮ್ಮೂರಲ್ಲಿ ಅಲ್ಲ, ಇಲ್ಲೇ ಹೇಳುತ್ತೇನೆ. ಬೆಂಗಳೂರಿನಲ್ಲೂ, ದೆಹಲಿಯಲ್ಲೂ ಹೇಳುತ್ತೇನೆ’ ಎಂದು ಸಚಿವ ಪಾಟೀಲ ತಿಳಿಸುತ್ತಿದ್ದಂತೆಯೇ ಸದನದಲ್ಲಿ ನಗೆ ಉಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.