ADVERTISEMENT

ಕೊಳವೆ ಬಾವಿ ದುರಂತ ಹೊಲದ ಮಾಲೀಕ ಬಂಧನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಮುತ್ತಣ್ಣ ಹಿಪ್ಪರಗಿ
ಮುತ್ತಣ್ಣ ಹಿಪ್ಪರಗಿ   

ಅಥಣಿ (ಬೆಳಗಾವಿ ಜಿಲ್ಲೆ): ಝುಂಜರವಾಡದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಲದ ಮಾಲೀಕರೊಬ್ಬರನ್ನು ಶನಿವಾರ ಬಾಗಲಕೋಟೆಯಲ್ಲಿ ಬಂಧಿಸಲಾಗಿದೆ.

ಸುಟ್ಟಟ್ಟಿ ಗ್ರಾಮದ ನಿವಾಸಿ ಮುತ್ತಣ್ಣ ಶಂಕರ ಹಿಪ್ಪರಗಿ ಬಂಧಿತ  ವ್ಯಕ್ತಿ. ಅಥಣಿಯ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಯನ್ನು ಮೇ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಝುಂಜರವಾಡದಲ್ಲಿ ತಮಗೆ ಸೇರಿದ್ದ ಹೊಲದಲ್ಲಿ ಮುತ್ತಣ್ಣ ಕೊಳವೆ ಬಾವಿ ಕೊರೆಸಿದ್ದರು. ನೀರು ಬಾರದೇ ವಿಫಲವಾದ ನಂತರ ಬಾವಿಯನ್ನು ತೆರೆದ ಸ್ಥಿತಿಯಲ್ಲಿಯೇ ಬಿಟ್ಟಿದ್ದರು. ಇದರೊಳಗಿದ್ದ ಕೇಸಿಂಗ್‌ ಪೈಪ್‌ ತೆಗೆದು, ಬೇರೊಂದು ಬಾವಿಗೆ ಅಳವಡಿಸಿದ್ದರು. ಕಳೆದ ವಾರ, ಬಾಲಕಿ ಕಾವೇರಿ ಮಾದರ ತೆರೆದ ಕೊಳವೆ ಬಾವಿಯೊಳಗೆ ಬಿದ್ದು, ಮೃತಪಟ್ಟಿದ್ದಳು.

ADVERTISEMENT

ಘಟನೆಗೆ ಸಂಬಂಧಿಸಿದಂತೆ ಐಗಳಿ ಪೊಲೀಸರು ಜಮೀನಿನ ಮಾಲೀಕ ಮುತ್ತಣ್ಣ ಶಂಕರ ಹಿಪ್ಪರಗಿ ಹಾಗೂ ಅವರ ತಂದೆ ಶಂಕರ ಹಿಪ್ಪರಗಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

‘ಪ್ರಕರಣದ ಮತ್ತೊಬ್ಬ ಆರೋಪಿ ಶಂಕರ ಹಿಪ್ಪರಗಿ ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ’ ಎಂದು ಎಸ್ಪಿ ಬಿ.ಆರ್‌. ರವಿಕಾಂತೇಗೌಡ ತಿಳಿಸಿದ್ದಾರೆ.

ಕಾವೇರಿ ತಾಯಿ ಆಸ್ಪತ್ರೆಗೆ: ಕಾವೇರಿ ತಾಯಿ ಸವಿತಾ ಅವರನ್ನು ಶನಿವಾರ ಕೊಕಟನೂರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳ ಸಾವಿನ ನಂತರ ಸರಿಯಾಗಿ ಊಟ ಮಾಡದ ಕಾರಣ ಅವರು ಸುಸ್ತಾಗಿದ್ದಾರೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಹೇಳಿದ್ದಾರೆ.

ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿ ಪರಿಹಾರ ನಿಧಿಗೆ ಪ್ರಸ್ತಾವ ಸಲ್ಲಿಸಿದ್ದು, ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.

ತೆರೆದ ಕೊಳವೆ ಬಾವಿಗಳನ್ನು ಪತ್ತೆಹಚ್ಚಿ, ಅವುಗಳನ್ನು ಮುಚ್ಚಿಸಲು ಜಿಲ್ಲಾಡಳಿತ ಅಭಿಯಾನ ಹಮ್ಮಿಕೊಂಡಿದ್ದು, ಮೇ 15ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.