ADVERTISEMENT

ಕೋಟ್ಯಂತರ ಅವ್ಯವಹಾರ: ಶೆಟ್ಟರ್‌ ಶಂಕೆ

ಮಲಪ್ರಭಾ ಉಪ ಕಾಲುವೆಗಳ ಆಧುನೀಕರಣ ತುಂಡು ಗುತ್ತಿಗೆ ರದ್ದು

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 20:28 IST
Last Updated 24 ಜೂನ್ 2016, 20:28 IST

ಬೆಂಗಳೂರು: ‘ಮಲಪ್ರಭಾ ಯೋಜನೆ ಉಪ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ನೀಡಲಾಗಿದ್ದ ತುಂಡು ಗುತ್ತಿಗೆ ರದ್ದು ಮಾಡಿ ಸಿಂಗಲ್‌ ಪ್ಯಾಕೇಜ್‌ ಟೆಂಡರ್  ಕರೆಯಲು ಸಿದ್ಧತೆ ನಡೆದಿದ್ದು, ಇದರಿಂದ  ನೂರಾರು ಕೋಟಿ ಅವ್ಯವಹಾರ ನಡೆಯುವ ಸಾಧ್ಯತೆ ಇದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು.

‘ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಉಪ ಕಾಲುವೆಗಳು ಮತ್ತು ಜಮೀನುಗಳಿಗೆ ನೀರು ಪೂರೈಕೆ ಮಾಡುವ ಸಣ್ಣ ಕಾಲುವೆಗಳ ಆಧುನೀಕರಣಕ್ಕೆ ₹ 964 ಕೋಟಿ ವೆಚ್ಚದಲ್ಲಿ 18 ಕಾಮಗಾರಿಗಳಿಗೆ ತುಂಡು ಗುತ್ತಿಗೆ ಕರೆಯಲಾಗಿತ್ತು. ಅದರಲ್ಲಿ ಶೇ 18ರಿಂದ 22ರಷ್ಟು ಕಡಿಮೆ ದರಗಳನ್ನು ನಮೂದಿಸಿ  ಗುತ್ತಿಗೆದಾರರು ಭಾಗವಹಿಸಿದ್ದರು. ಈಗ ಕಾರಣ ಇಲ್ಲದೆ ಈ ತುಂಡು ಗುತ್ತಿಗೆಗಳನ್ನು ರದ್ದು ಮಾಡಲಾಗಿದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಆದರೆ ಇದೀಗ ಬಲದಂಡೆ ಮತ್ತು ಎಡದಂಡೆ ಕಾಲುವೆಗಳು ಹಾಗೂ ಅದಕ್ಕೆ ಹೊಂದಿಕೊಂಡಿರುವ ಉಪಕಾಲುವೆಗಳ ಆಧುನೀಕರಣಕ್ಕೆ ಮಾತ್ರ ₹ 964 ಕೋಟಿ ಟೆಂಡರ್‌ ಸಿದ್ಧಪಡಿಸಲಾಗಿದೆ. ಕಿರು ಕಾಲುವೆಗಳ  ಆಧುನೀಕರಣ ಯೋಜನೆ ಕೈ ಬಿಡಲಾಗಿದ್ದರೂ ಟೆಂಡರ್‌ ಮೊತ್ತ ಮಾತ್ರ ಅಷ್ಟೇ ಇರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

ಅಧಿಕಾರಿಗಳ ವರ್ಗಾವಣೆ: ಸಿಂಗಲ್‌ ಪ್ಯಾಕೇಜ್‌ ಟೆಂಡರ್‌ ಕರೆಯುವುದಕ್ಕೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಎಸ್‌.ಎ. ಪಾಟೀಲ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ ಭಜಂತ್ರಿ ವಿರೋಧ ವ್ಯಕ್ತಪಡಿಸಿದ್ದರು. ಜಲಸಂಪನ್ಮೂಲ ಸಚಿವರು ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ  ಮಾಡಿ ಅವರ ಜಾಗಕ್ಕೆ ಮಲ್ಲಿಕಾರ್ಜುನ ಗುಂಗೆ ಮತ್ತು ಈಶ್ವರ ನಾಯಕ ಎಂಬುವರನ್ನು ನೇಮಿಸಿ ಟೆಂಡರ್‌ ಪ್ರಕ್ರಿಯೆಪೂರ್ಣಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಭಜಂತ್ರಿ ಅವರೊಬ್ಬರಿಗೇ  ಟೆಂಡರ್‌ ವಹಿಸುವ ತಯಾರಿ ನಡೆದಿದೆ. ಈ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಗುತ್ತಿಗೆದಾರರು ಕಾಮಗಾರಿ ಸ್ಥಳದಲ್ಲಿ ಯಂತ್ರೋಪಕರಣಗಳನ್ನು ತಂದು ನಿಲ್ಲಿಸಿದ್ದಾರೆ’ ಎಂದು ದೂರಿದರು.

‘ಮಲಪ್ರಭಾ ಯೋಜನೆಯ ಮುಖ್ಯ ಕಾಲುವೆ ಮತ್ತು ಉಪ ಕಾಲುವೆಗಳ ಕಾಮಗಾರಿಗಳಿಗೆ ಮೊದಲು ₹ 560 ಕೋಟಿ ನಿಗದಿಪಡಿಸಲಾಗಿತ್ತು. ಅದಕ್ಕೆ ಹೊಂದಿಕೊಂಡಂತೆ ಜಮೀನುಗಳಿಗೆ ನೀರು ಹರಿಸುವ ಕಿರು ಕಾಲುವೆಗಳ  ಆಧುನೀಕರಣ ಆಗಬೇಕು ಎಂದು ₹ 403 ಕೋಟಿ ಸೇರಿಸಿ ಒಟ್ಟು ₹ 964.53 ಕೋಟಿ ಮೊತ್ತದ ಯೋಜನೆಗೆ 2015ರ ಸೆ. 11ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ವಿವರ ನೀಡುವಂತೆ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಹೇಳಿದರು.
*
ಮಲಪ್ರಭಾ ಕಾಮಗಾರಿಯ ಟೆಂಡರ್‌  ಬಗ್ಗೆ ಮುಂದಿನ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು.
-ಜಗದೀಶ ಶೆಟ್ಟರ್,
ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.